ADVERTISEMENT

ಕೊಲ್ಹಾರ: ಊರಿನ ಅಂದ ಹೆಚ್ಚಿಸಿದ ವೃತ್ತ

ಶಾಲೆ ಶತಮಾನೋತ್ಸವ ನೆನಪಿಗಾಗಿ ವೃತ್ತ ನಿರ್ಮಾಣ

ಬಸವರಾಜ ಎಸ್.ಉಳ್ಳಾಗಡ್ಡಿ
Published 5 ಅಕ್ಟೋಬರ್ 2019, 19:45 IST
Last Updated 5 ಅಕ್ಟೋಬರ್ 2019, 19:45 IST
ಕೊಲ್ಹಾರ ತಾಲ್ಲೂಕು ರೋಣಿಹಾಳ ಗ್ರಾಮದಲ್ಲಿ ಐತಿಹಾಸಿಕ ಬಾವಿಯ ಮೇಲೆ ನಿರ್ಮಿಸಲಾದ ಗಣೇಶ ವೃತ್ತ
ಕೊಲ್ಹಾರ ತಾಲ್ಲೂಕು ರೋಣಿಹಾಳ ಗ್ರಾಮದಲ್ಲಿ ಐತಿಹಾಸಿಕ ಬಾವಿಯ ಮೇಲೆ ನಿರ್ಮಿಸಲಾದ ಗಣೇಶ ವೃತ್ತ   

ಕೊಲ್ಹಾರ: ಸರ್ಕಾರಿ ಶಾಲೆಯ ಶತಮಾನೋತ್ಸವದ ನೆನಪಿಗಾಗಿ ಬ್ರಿಟಿಷರ ಕಾಲದ ಐತಿಹಾಸಿಕ ಬಾವಿಯ ಮೇಲೆ ನಿರ್ಮಾಣಗೊಂಡ ವಿಘ್ನ ನಿವಾರಕನ ಚತುರ್ಮುಖ ವೃತ್ತ ಗ್ರಾಮದ ಮೆರುಗು ಹೆಚ್ಚಿಸಿದೆ.

ಬ್ರಿಟಿಷರ ಕಾಲದಲ್ಲಿ ತಾಲ್ಲೂಕಿನ ರೋಣಿಹಾಳ ಗ್ರಾಮದ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಮಾಡಲಾದ ಸಿಹಿ ನೀರಿನ ಬಾವಿ, ಇಡೀ ಗ್ರಾಮಸ್ಥರ ನೀರಿನ ದಾಹ ತಣಿಸುತ್ತಿದ್ದ ಗ್ರಾಮದ ಏಕೈಕ ಬಾವಿ ಆಗಿತ್ತು. ಅಂದಿನಿಂದ ಇಂದಿನವರೆಗೂ ಬಾವಿ ಬತ್ತಿದ ಉದಾಹರಣೆಯಿಲ್ಲ.

ಗ್ರಾಮ ಪ್ರವೇಶಿ ಸುತ್ತಿದ್ದಂತೆ ವೃತ್ತದಲ್ಲಿರುವ ಈ ಬಾವಿಗೆ ಸದ್ಯ ಗ್ರಾಮಸ್ಥರು ಮೋಟರ್ ಅಳವಡಿಸಿದ್ದು, ಪಕ್ಕದ ಲ್ಲಿರುವ ಧೋಬಿ ಘಾಟ್‌ಗೆ ಗ್ರಾಮಸ್ಥರ ದಿನ ಬಳಕೆಗೆ ಹಾಗೂ ಗಿಡಗಳಿಗೆ ನೀರುಣಿಸಲು ಇದೇ ನೀರನ್ನು ಉಪಯೋಗಿಸಲಾಗುತ್ತಿದೆ. ಬೇಸಿಗೆಯಲ್ಲಿ ಜನರ ಬಳಕೆಗೆ ಈ ಬಾವಿ ನೀರೇ ಆಧಾರ. ಇಂತಹ ಮಹತ್ವ ಹೊಂದಿರುವ ಬಾವಿ ಮೇಲೆ ಸ್ಥಾಪನೆಗೊಂಡಿರುವ ಗಣೇಶ ವೃತ್ತ ನೋಡುಗರ ಗಮನ ಸೆಳೆಯುತ್ತಿದೆ.

ADVERTISEMENT

ಬಾವಿ ಪಕ್ಕದಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಸ್ಥಾಪನೆಗೊಂಡು 100 ವರ್ಷ ಪೂರೈಸಿದ ಹಿನ್ನೆಲೆ 2009ರಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೇರಿ ಶಾಲೆಯ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅದಕ್ಕಾಗಿ ಸಂಗ್ರಹವಾದ ಹಣದಲ್ಲಿ ಉಳಿದಿರುವ ಹಣದಿಂದ ಶತಮಾನೋತ್ಸವ ಸವಿನೆನಪಿಗಾಗಿ ಏನನ್ನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದು ಯೋಚಿಸಿದಾಗ ಹೊಳೆದಿದ್ದೆ ಗ್ರಾಮದಲ್ಲಿ ವೃತ್ತ ನಿರ್ಮಿಸುವ ಯೋಚನೆ.

ಅದರಂತೆ ಶತಮಾನೋತ್ಸವ ದೇಣಿಗೆ ಸಂಗ್ರಹದ ಜತೆಗೆ ಇನ್ನೊಂದಷ್ಟುಹಣವನ್ನು ಸಂಗ್ರಹಿಸಿ 2017ರಲ್ಲಿ ಸುಮಾರು ₹12 ಲಕ್ಷ ಖರ್ಚು ಮಾಡಿ, ಬಾವಿಗೆ ದಕ್ಕೆ ಆಗದಂತೆ ಸುತ್ತಲು ಕಾಲಂಗಳನ್ನು ಹಾಕಿ, ಸುಂದರವಾದ ದೇವಸ್ಥಾನ ನಿರ್ಮಿಸಿ ಅದರೊಳಗೆ ಭವ್ಯವಾದ ಚತುರ್ಮುಖ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅದನ್ನು ನಡೆದಾಡುದ ದೇವರು ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆಗೊಳಿಸಿದ್ದು ವಿಶೇಷ. ಸದ್ಯ ಪ್ರತಿ ನಿತ್ಯ ಪೂಜೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ವೃತ್ತ ನಿರ್ಮಾಣದ ಕುರಿತು ಮಾಹಿತಿ ನೀಡಿದರು.

*
ಶಾಲೆ ಶತಮಾನೋತ್ಸವದ ಸವಿನೆನಪಿಗಾಗಿ ಬಾವಿಯ ಮೇಲೆ ನಿರ್ಮಾಣಗೊಂಡಿರುವ ಗಣೇಶ ವೃತ್ತ ಗ್ರಾಮದ ಮೆರುಗು ಹೆಚ್ಚಿಸಿದೆ. ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ
-ಹನುಮಂತ ನ್ಯಾಮಗೊಂಡ, ಗ್ರಾಮದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.