ವಿಜಯಪುರ: ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆ ಪ್ರಚುರಪಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಅನುಭವ ಮಂಟಪ-ಶರಣರ ವೈಭವ ರಥಯಾತ್ರೆ’ಯು ಶುಕ್ರವಾರ ಸಂಜೆ ನಗರಕ್ಕೆ ಆಗಮಿಸಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಥಯಾತ್ರೆಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿಕೊಂಡರು.
ವಿಜಯಪುರಕ್ಕೆ ಆಗಮಿಸಿದ ರಥಯಾತ್ರೆಯು ಅಂಬೇಡ್ಕರ್ ವೃತ್ತದಿಂದ ಸಾಗಿ ಬಸವೇಶ್ವರ ವೃತ್ತ, ಗಾಂಧಿವೃತ್ತ, ಶಿವಾಜಿ ಸರ್ಕಲ್ ಮೂಲಕ ಸಾಗಿದ ರಥಯಾತ್ರೆಯು ತಿಕೋಟಾ ಮಾರ್ಗವಾಗಿ ಬೆಳಗಾವಿ ಜಿಲ್ಲೆಗೆ ತೆರಳಿತು.
ಅನುಭವ-ಮಂಟಪ ಮಾದರಿ ರಥದಲ್ಲಿ ಜಗಜ್ಯೋತಿ ಬಸವೇಶ್ವರ, ಗೌತಮ ಬುದ್ಧ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಶಿವಶರಣೆ ಅಕ್ಕ ಮಹಾದೇವಿ, ಸಂತ ಶಿಶುನಾಳ ಶರೀಫ, ಗುರುನಾನಕ, ಭಗವಾನ ಮಹಾವೀರ, ನಾರಾಯಣ ಗುರು, ಏಸು ಕ್ರಿಸ್ತರ ಪ್ರತಿಮೆಗಳನ್ನೊಳಗೊಂಡಿದೆ.
ಏಪ್ರಿಲ್ 29 ಹಾಗೂ 30ರ ವರೆಗೆ ಕೂಡಲಸಂಗಮದಲ್ಲಿ ಆಯೋಜಿಸಿರುವ ಬಸವ ಜಯಂತಿ ಅಂಗವಾಗಿ ಅನುಭವ ಮಂಟಪ- ಬಸವಾದಿ ಶರಣರ ವೈಭವ ಕಾರ್ಯಕ್ರಮದ ಅಂಗವಾಗಿ ಈ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಚುನಾವಣಾ ತಹಶೀಲ್ದಾರ್ ಪ್ರೇಮಸಿಂಗ್ ಪವಾರ, ವಿಜಯಪುರ ಗ್ರೇಡ್-2 ತಹಶೀಲ್ದಾರ್ ಐ.ಎಚ್. ತುಂಬಗಿ, ವಿ.ಸಿ.ನಾಗಠಾಣ, ಅಭಿಷೇಕ ಚಕ್ರವರ್ತಿ, ವಿದ್ಯಾವತಿ ಅಂಕಲಗಿ, ಭೀಮರಾಯ ಜಿಗಜಿಣಗಿ, ಸೋಮನಗೌಡ ಕಲ್ಲೂರ, ರವಿ ಕಿತ್ತೂರ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.