ADVERTISEMENT

ವಿಜಯಪುರ: ಪಾಲಿಕೆ ಗದ್ದುಗೆ ಬಿಜೆಪಿ ಪಾಲಿಗೆ ಗಗನಕುಸುಮ!

ಭಗ್ನಗೊಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ

ಬಸವರಾಜ ಸಂಪಳ್ಳಿ
Published 28 ಜನವರಿ 2025, 4:52 IST
Last Updated 28 ಜನವರಿ 2025, 4:52 IST
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ ನಡೆಸಿ ಹೊರಬಂದ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ ಟಿ.ಭೂಬಾಲನ್‌ –ಪ್ರಜಾವಾಣಿ ಚಿತ್ರ
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆ ನಡೆಸಿ ಹೊರಬಂದ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ ಟಿ.ಭೂಬಾಲನ್‌ –ಪ್ರಜಾವಾಣಿ ಚಿತ್ರ   

ವಿಜಯಪುರ: ‘ಅಂತೂ, ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ’ ಎಂಬ ಗಾಧೆ ಮಾತು ವಿಜಯಪುರ ಮಹಾನಗರ ಪಾಲಿಕೆ ಅಧಿಕಾರದ ವಿಷಯದಲ್ಲಿ ಬಿಜೆಪಿ ಪಾಲಿಗೆ ಅಕ್ಷರಶಃ ನಿಜ ಎನಿಸಿದೆ. 

ಹೌದು, ಮಹಾನಗರ ಪಾಲಿಕೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಿದ್ದರೂ ಮೇಯರ್‌, ಉಪಮೇಯರ್‌ ಗದ್ದುಗೆ ಏರಲು ಬಿಜೆಪಿಗೆ ಇದುವರೆಗೂ ಸಾಧ್ಯವಾಗಿಲ್ಲ. ಸೋಮವಾರ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಕಮಲಪಾಳೆಯಕ್ಕೆ ನಿರಾಶೆಯಾಗಿದೆ. ಬಿಜೆಪಿಯ ಬಹು ವರ್ಷಗಳ ಕನಸನ್ನು ಸಚಿವ ಎಂ.ಬಿ.ಪಾಟೀಲ ಮತ್ತೆ ಛಿದ್ರಗೊಳಿಸಿದ್ದಾರೆ.

‘ಎಂ.ಬಿ.ಪಾಟೀಲ ಎದುರು ಹಾಕಿಕೊಂಡು ಮಹಾನಗರ ಪಾಲಿಕೆ ಗದ್ದುಗೆ ಏರುವುದು ಬಿಜೆಪಿಗೆ ಸುಲಭದ ಮಾತಲ್ಲ' ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ADVERTISEMENT

ಈ ಬಾರಿ ಮಹಾನಗರ ಪಾಲಿಕೆ ಗದ್ದುಗೆ ಏರುವುದು ನೂರಕ್ಕೆ ನೂರು ಶತಸಿದ್ಧ ಎಂದು ಆಸೆಗಣ್ಣಿನಿಂದ ಬಿಜೆಪಿ ಕಾಯುತ್ತಿತ್ತು. ಬಹುಮತ ಸಾಬೀತು ಪಡಿಸುವ ಸಲುವಾಗಿ ನಾಲ್ಕು ತಿಂಗಳ ಹಿಂದೆಯೇ ವಿಧಾನ ಪರಿಷತ್‌ ಸದಸ್ಯರಾದ ಕೇಶವ ಪ್ರಸಾದ್‌, ಎನ್‌.ರವಿಕುಮಾರ್‌ ಅವರ ಹೆಸರನ್ನು ವಿಜಯಪುರ ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿ, ಹೊಸ ದಾಳ ಉರುಳಿಸಿತ್ತು. ಅಲ್ಲದೇ, ಕಾಂಗ್ರೆಸ್‌ ಪಾಳೆಯದಲ್ಲಿದ್ದ ಮೂವರು ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕಿತ್ತು. ಆದರೂ ಕೂಡ ಗದ್ದುಗೆ ಏರಲು ಸಾಧ್ಯವಾಗಿಲ್ಲ.

ಬಿಜೆಪಿ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕೂಡ ವಿಧಾನ ಪರಿಷತ್‌ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೆದಾರ, ಎ.ವಸಂತ ಕುಮಾರ್ ಮತ್ತು ಬಿಲ್ಕಿಸ್‌ ಬಾನು ಅವರನ್ನು ಕರೆತಂದು ವಿಜಯಪುರ ಪಾಲಿಕೆ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿದೆ. ಆದರೆ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್‌ ಮೊರೆ ಹೋಗಿರುವ ಪರಿಣಾಮ ಕಾಂಗ್ರೆಸ್‌ ಗೆಲುವಿಗೆ ಅಡಚಣೆಯಾಗಿದೆ. 

ಕಾಂಗ್ರೆಸ್‌ಗೆ ಅಧಿಕಾರ ಸಿಗದಿದ್ದರೂ ಬಿಜೆಪಿಗೆ ಸುಲಭವಾಗಿ ಗದ್ದುಗೆ ಸಿಗದಂತೆ ಮಾಡುವಲ್ಲಿ ಸಚಿವ ಎಂ.ಬಿ.ಪಾಟೀಲ ಯಶಸ್ವಿಯಾಗಿದ್ದಾರೆ. 

‘ಪಾಲಿಕೆ ಅಧಿಕಾರ ಹಿಂದೆಯೂ ನಮ್ಮದಿತ್ತು. ಇಂದು ನಮ್ಮದಿದೆ. ಮುಂದೆಯೂ ನಮ್ಮದೇ ಇರಲಿದೆ’ ಎಂದು ಎರಡು ದಿನಗಳ ಹಿಂದೆ ಹೇಳಿದ್ದರು. ಅಂತೆಯೇ, ಪಾಲಿಕೆ ಅಧಿಕಾರವನ್ನು ಮರಳಿ ಪಡೆಯಲು ಹೊಸ ತಂತ್ರ ರೂಪಿಸಿದ್ದು, ಯಶಸ್ವಿಯಾಗುವರೇ ಎಂಬುದು ಕಾದುನೋಡಬೇಕಿದೆ.  

ಮಹಾನಗರ ಪಾಲಿಕೆ ಮೇಯರ್‌, ಉಪ ಮೇಯರ್ ಚುನಾವಣೆ ವಿವಾದ ಏನಿದ್ದರೂ ಕೋರ್ಟ್‌ನಲ್ಲೇ ಇತ್ಯರ್ಥವಾಗಬೇಕೇ ಹೊರತು, ಬೇರಾರಿಂದಲೂ ಸಾಧ್ಯವಿಲ್ಲ ಎಂಬಷ್ಟು ಜಟಿಲ ಪರಿಸ್ಥಿತಿ ಎದುರಾಗಿದೆ. ಇದೀಗ ಎಲ್ಲರ ಚಿತ್ತ ಜನವರಿ 29ರಂದು ಕೋರ್ಟ್‌ ನೀಡುವ ತೀರ್ಪಿನತ್ತ ನೆಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.