ADVERTISEMENT

ವಿಜಯಪುರ: ಬಿ.ಎಲ್.ಡಿ.ಇ ‘ಆರೋಗ್ಯ ವಾಹಿನಿ’ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 4:11 IST
Last Updated 10 ನವೆಂಬರ್ 2025, 4:11 IST
ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಿಂದ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಆರೋಗ್ಯ ವಾಹಿನಿ ಬಸ್ ಸೇವೆಗೆ ಚಾಲನೆ ನೀಡಿದರು  
ವಿಜಯಪುರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಿಂದ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಆರೋಗ್ಯ ವಾಹಿನಿ ಬಸ್ ಸೇವೆಗೆ ಚಾಲನೆ ನೀಡಿದರು     

ವಿಜಯಪುರ: ಗ್ರಾಮೀಣ ಬಡ ಜನರಿಗೆ ಸುಲಭವಾಗಿ ಆರೋಗ್ಯ ಸೇವೆಯನ್ನು ಒದಗಿಸಲು ಬಿ.ಎಲ್.ಡಿ.ಇ ಆರೋಗ್ಯ ವಾಹಿನಿ ಕಾರ್ಯ ನಿರ್ವಹಿಸಲಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಹೇಳಿದರು.

ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಕಾಲೇಜು ಹಾಗೂ ಸಂಶೋಧನೆ ಕೇಂದ್ರದಲ್ಲಿ ಎರಡು ನೂತನ ‘ಆರೋಗ್ಯ ವಾಹಿನಿ’ ಬಸ್ ಸೇವೆಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ಪಾತ್ರವೂ ಮುಖ್ಯವಾಗಿದೆ. ಎಲ್ಲರೂ ನಿಷ್ಠೆ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಸಿಬ್ಬಂದಿಗೆ ಸೂಚನೆ ನೀಡಿದರು.

ADVERTISEMENT

ಸಮಕುಲಾಧಿಪತಿ ಡಾ.ವೈ.ಎಂ. ಜಯರಾಜ ಮಾತನಾಡಿ, ಕುಲಾಧಿಪತಿ ಬಸನಗೌಡ ಎಂ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಈ ವಾಹಿನಿಗಳಿಗೆ ಚಾಲನೆ ನೀಡಲಾಗಿದೆ. ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ.ಬಿ. ಪಾಟೀಲ ಮತ್ತು ಕುಲಾಧಿಪತಿಗಳ ಕನಸಿನ ಯೋಜನೆ ಇದಾಗಿದೆ. ಈ ಆರೋಗ್ಯ ವಾಹಿನಿ ಬಸ್‌ಗಳು ದೂರದ ಊರಿನಿಂದ ಬರುವ ಗ್ರಾಮೀಣ ಬಡ ರೋಗಿಗಳಿಗೆ ಅನುಕೂಲ ಒದಗಿಸಲಿವೆ. ವಿಜಯಪುರ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಗ್ರಾಮೀಣ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಹಂಗಾಮಿ ಕುಲಪತಿ ಡಾ.ಅರುಣ ಚಂ. ಇನಾಮದಾರ ಮಾತನಾಡಿ, ಆಸ್ಪತ್ರೆಯ ವೈದ್ಯರು ಇನ್ನೂ ಹೆಚ್ಚಿನ ಕಾಳಜಿ ವಹಿಸಿ ಬಡ ರೋಗಿಗಳ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಡೀಮ್ಡ್ ವಿವಿ ಕುಲಸಚಿವ ಡಾ.ಆರ್.ವಿ. ಕುಲಕರ್ಣಿ, ಕಾಲೇಜಿನ ಪ್ರಭಾರ ಪ್ರಾಚಾರ್ಯೆ ಡಾ.ತೇಜಸ್ವಿನಿ ವಲ್ಲಭ, ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ.ರಾಜೇಶ ಹೊನ್ನುಟಗಿ ಇದ್ದರು.

ಸಸಿ ನೆಟ್ಟು ಜನ್ಮದಿನ ಆಚರಣೆ

ವಿಜಯಪುರ: ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಎಂ.ಪಾಟೀಲ ಅವರ ಜನ್ಮದಿನವನ್ನು ಭಾನುವಾರ ಸಸಿ ನೆಡುವ ಮೂಲಕ ಆಚರಿಸಲಾಯಿತು. ವೈದ್ಯಕೀಯ ಕಾಲೇಜಿನ ಪ್ರೊ.ಕುಸಾಲ ದಾಸ ಮಾತನಾಡಿ ಬಸನಗೌಡ ಎಂ. ಪಾಟೀಲ ಅವರು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಶಿಕ್ಷಣ ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಾನವೀಯ ಮೌಲ್ಯಗಳಡಿ ಕೆಲಸ ಮಾಡುತ್ತಿದ್ದಾರೆ. ಸಂಸ್ಥೆ ಮತ್ತು ಡೀಮ್ಡ್ ವಿಶ್ವವಿದ್ಯಾಲಯವನ್ನು ಉತ್ತುಂಗಕ್ಕೆ ಒಯ್ಯಲಿದ್ದಾರೆ ಎಂದು ಹೇಳಿದರು. ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯ ವೀರೇಂದ್ರ ಗುಚ್ಚೆಟ್ಟಿ ಮುಖಂಡ ಸುರೇಶ ಗೊಣಸ ಡೀಮ್ಡ್ ವಿವಿ ರಿಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಮಹಾಂತೇಶ ಬಿರಾದಾರ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಹೇಶ ವಿ. ಶಟಗಾರ  ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.