ADVERTISEMENT

ವಿಜಯಪುರ: ಜೋಡೆತ್ತಿನ ಬಂಡಿಗಳ ಸಮಾವೇಶ 30ರಂದು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:00 IST
Last Updated 28 ಡಿಸೆಂಬರ್ 2025, 5:00 IST
ಎಸ್.ಜೆ. ನಾಡಗೌಡ
ಎಸ್.ಜೆ. ನಾಡಗೌಡ   

ವಿಜಯಪುರ: ‘ಸಿದ್ಧೇಶ್ವರ ಸ್ವಾಮೀಜಿ ಜನ್ಮಭೂಮಿ ಬಿಜ್ಜರಗಿಯಲ್ಲಿ ಡಿ.30 ರಂದು ವೈಕುಂಠ ಏಕಾದಶಿಯಂದು 330 ಜೋಡೆತ್ತಿನ ಬಂಡಿಗಳ ಸಮಾವೇಶ ಹಾಗೂ ಬಸವ ತತ್ವದಡಿಯಲ್ಲಿ ಸ್ವಾವಲಂಬಿ ಗ್ರಾಮ ನಿರ್ಮಾಣಕ್ಕೆ ಸಂಬಂಧಿಸಿದ ವೈಜ್ಞಾನಿಕ ಚಿಂತನ– ಮಂಥನ ಸಮಾವೇಶ ನಡೆಯಲಿದೆ, ಕೀನ್ಯಾ ಸೇರಿದಂತೆ ಹಲವು ಭಾಗಗಳಿಂದ ಪರಿಣತರು ಭಾಗವಹಿಸಿ ಅನುಭವ ಹಂಚಿಕೊಳ್ಳಲಿದ್ದಾರೆ’ ಎಂದು ಕೃಷಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎಸ್.ಜೆ. ನಾಡಗೌಡ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹತ್ವಪೂರ್ಣವಾಗಿರುವ ಈ ಸಮಾವೇಶಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ, ನಂದಿ ಕೂಗು ಅಭಿಯಾನದ ಅಡಿಯಲ್ಲಿ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ 3ನೇ ಪುಣ್ಯಸ್ಮರಣೆ ಅಂಗವಾಗಿ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಮುಗಳಖೋಡ ಮಠದ ಮುರಘರಾಜೇಂದ್ರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರಗುವುದು’ ಎಂದರು.

‘ರೈತ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಯುವ ಸನ್ಯಾಸಿ ಶಶಿಕಾಂತ ಗುರುಜಿ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನುಡಿಗಳನ್ನಾಡಲಿದ್ದಾರೆ, ಜೋಡೆತ್ತಿನ ಕೃಷಿಯ ಕುರಿತು ವಿಶೇಷ ಒಲವು ಹೊಂದಿರುವ ಕರ್ನಾಟಕ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕ ವೆಂಕನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕೀನ್ಯಾ ದೇಶದಲ್ಲಿ ಬೃಹತ್ ಕೃಷಿ ಉದ್ದಿಮೆ ಸ್ಥಾಪಿಸುವುದರ ಜೊತೆಗೆ ನಂದಿ ಸಂತತಿ ರಕ್ಷಣೆಯಲ್ಲಿ ಹೆಸರುವಾಸಿಯಾಗಿರುವ ಮಲ್ಲಿಕಾರ್ಜುನ ಕೋರಿ ಅವರು ಬಸವ ತತ್ವದಿಂದ ಸ್ವಾವಲಂಬಿ ಗ್ರಾಮ ನಿರ್ಮಿಸುವ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಕರ್ನಾಟಕ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕ ವೆಂಕನಗೌಡ ಪಾಟೀಲ ಮಾತನಾಡಿದರು. ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಸಂಗಮೇಶ ಕಾಮನ್ನವರ, ಬಸವರಾಜ ಬಿರಾದಾರ, ಬಸವರಾಜ ಕೋನರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.