ADVERTISEMENT

ವಿಜಯಪುರ: ಕೋವಿಡ್‌ ಮೂರನೇ ಅಲೆಗೆ ಮೊದಲ ಸಾವು

ಒಂದೇ ದಿನ 107 ಕೋವಿಡ್‌ ಪಾಸಿಟಿವ್‌ ಪ್ರಕರಣ; ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 12:12 IST
Last Updated 14 ಜನವರಿ 2022, 12:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಿಜಯಪುರ: ಕೋವಿಡ್‌ ಮೂರನೇ ಅಲೆಗೆ ಜಿಲ್ಲೆಯಲ್ಲಿ ಶುಕ್ರವಾರ ಮೊದಲ ಸಾವು ಸಂಭವಿಸಿದೆ. ಕೋವಿಡ್‌ ಪೀಡಿತ ಗರ್ಭಿಣಿಯೊಬ್ಬರು ಸಾವಿಗೀಡಾಗಿದ್ದಾರೆ.

ಕೋವಿಡ್ ಸೋಂಕಿತ ಯೋಗಾಪುರ ನಿವಾಸಿಯಾಗಿದ್ದ 21 ವರ್ಷ ವಯೋಮಾನದ ಮಹಿಳೆ (ರೋಗಿ ಸಂಖ್ಯೆ 3140105) ಚಿಕಿತ್ಸೆ ಫಲಕಾರಿಯಾಗದೆ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ತಿಳಿಸಿದ್ದಾರೆ.

ಮಹಿಳೆ ತೀವ್ರ ಉಸಿರಾಟದ ತೊಂದರೆ, ಜ್ವರದಿಂದ ಬಳಲಿ ಜ.9 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಜ.11 ರಂದು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ ಒಂದು, ಎರಡನೇ ಅಲೆ ಸೇರಿದಂತೆ ಇದುವರೆಗೆ 496 ಜನ ಸಾವಿಗೀಡಾಗಿದ್ದಾರೆ.

ADVERTISEMENT

ನಗರದಲ್ಲೇ ಹೆಚ್ಚು:ಶುಕ್ರವಾರ ಒಂದೇ ದಿನ 107 ಜನರಿಗೆ ಕೋವಿಡ್‌ ಪಾಸಿಟಿವ್‌ ದೃಡಪಟ್ಟಿದೆ. ವಿಜಯಪುರ ನಗರದಲ್ಲಿ 60, ವಿಜಯಪುರ ಗ್ರಾಮೀಣ 4, ಬಬಲೇಶ್ವರ 1, ಬಸವನ ಬಾಗೇವಾಡಿ 6, ಕೊಲ್ಹಾರ 5, ನಿಡಗುಂದಿ 2, ಇಂಡಿ 5, ಚಡಚಣ 1, ಮುದ್ದೇಬಿಹಾಳ 13, ತಾಳಿಕೋಟೆ 2, ಸಿಂದಗಿ 5, ದೇವರ ಹಿಪ್ಪರಗಿ 1 ಮತ್ತು ಇತರೆ ಜಿಲ್ಲೆಗೆ ಸಂಬಂಧಿಸಿದ 2 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿದ್ದು, ಒಂದು ವಾರದ ಈಚೆಗೆ ಕೋವಿಡ್‌ ಸೋಂಕು ದುಪ್ಪಟ್ಟಾಗಿದೆ. ಕಳೆದ ಒಂದು ವಾರದ ಕೋವಿಡ್‌ ಪಾಸಿಟಿವಿಟಿ ರೇಟ್‌ 2.72 ಇದೆ. ಗುರುವಾರ ಪಾಸಿಟಿವಿಟಿ ರೇಟ್‌ 5.42 ಆಗಿದ್ದು, ಶುಕ್ರವಾರ ಕೋವಿಡ್‌ ಪಾಸಿಟಿವಿಟಿ ರೇಟ್‌ 5.1 ಆಗಿತ್ತು.

131 ಮಕ್ಕಳಿಗೆ ಸೋಂಕು:ಜನವರಿ 1 ರಿಂದ 13ರ ವರೆಗೆ ಜಿಲ್ಲೆಯಲ್ಲಿ 18 ವರ್ಷದೊಳಗಿನ 131 ಮಕ್ಕಳಿಗೆ ಕೋವಿಡ್‌ ಸೋಂಕು ದೃಡವಾಗಿದೆ.

ವಾರಾಂತ್ಯ ಕರ್ಫ್ಯೂ:ಈ ಶನಿವಾರ ಮತ್ತು ಭಾನುವಾರವೂ ವಾರಂತ್ಯ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಸದ್ಯದ ಸ್ಥಿತಿಗತಿಯಲ್ಲಿ ಶಾಲಾ, ಕಾಲೇಜುಗಳ ತರಗತಿಗಳು ಯಥಾ ರೀತಿ ಮುಂದುವರಿಯಲಿವೆ. ತರಗತಿ ಬಂದ್‌ ಮಾಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.