ADVERTISEMENT

ವಿಜಯಪುರ: ಡೇ-ಕೇರ್ ಕಿಮೊಥೆರಪಿ ಕೇಂದ್ರ ಆರಂಭ 

ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಯುಳ್ಳ ಕೇಂದ್ರಕ್ಕೆ ಸಚಿವ ದಿನೇಶ್‌ ಗುಂಡೂರಾವ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 4:40 IST
Last Updated 23 ಫೆಬ್ರುವರಿ 2025, 4:40 IST
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಕಿಮೊಥೆರಪಿ ಕೇಂದ್ರವನ್ನು ಶನಿವಾರ ಸಚಿವ ದಿನೇಶ ಗುಂಡುರಾವ್ ಉದ್ಘಾಟಿಸಿದರು
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಕಿಮೊಥೆರಪಿ ಕೇಂದ್ರವನ್ನು ಶನಿವಾರ ಸಚಿವ ದಿನೇಶ ಗುಂಡುರಾವ್ ಉದ್ಘಾಟಿಸಿದರು   

ವಿಜಯಪುರ: ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ-ಕೇರ್ ಕಿಮೊಥೆರಪಿಯನ್ನು ಆರಂಭಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ ಗುಂಡುರಾವ್ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಕಿಮೊಥೆರಪಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ವಿಜಯಪುರ ಹಾಗೂ ರಾಯಚೂರು ಜಿಲ್ಲೆಯಲ್ಲಿ ಕೇಂದ್ರ ಸ್ಥಾಪಿಸಲಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೇ-ಕೇರ್ ಕಿಮೊಥೆರಪಿಗಳನ್ನು ಮಾರ್ಚ್‌ ಅಂತ್ಯದೊಳಗೆ ಆರಂಭಿಸಲಾಗುವುದು ಎಂದರು.

ADVERTISEMENT

ಕಿಮೋಥೆರಪಿಗಾಗಿ ಕ್ಯಾನ್ಸರ್‌ ರೋಗಿಗಳು ವಿಜಯಪುರದಿಂದ ದೂರದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇತ್ತು. ಇದೀಗ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಕೇಂದ್ರದಲ್ಲಿಯೇ ಎಲ್ಲ ಚಿಕಿತ್ಸೆ ಸೌಲಭ್ಯ ಒದಗಿಸುವುದರಿಂದ ಇದು ತುಂಬ ಅನುಕೂಲಕರವಾಗಲಿದೆ ಎಂದು ಹೇಳಿದರು. 

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಯುಳ್ಳ ಕಿಮೋಥೆರಪಿ ಡೇ ಕೇರ್‌ ಕೇಂದ್ರ ತೆರೆಯುವ ಮೂಲಕ ಸರ್ಕಾರ ಅನುಕೂಲ ಕಲ್ಪಿಸಿದೆ. ಇದರೊಂದಿಗೆ ಮೆಮೊಗ್ರಾಫಿ ಕೇಂದ್ರವನ್ನು ಈ ಜಿಲ್ಲಾಸ್ಪತ್ರೆಯಲ್ಲಿ ಆರಂಭಗೊಂಡಿದ್ದು, ಸ್ತನ ಕ್ಯಾನ್ಸರ್ ಪ್ರಮಾಣವನ್ನು ಬಹಳಷ್ಟು ತಗ್ಗಿಸಬಹುದಾಗಿದೆ ಎಂದರು.

ಯಾವುದೇ ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹೆಚ್ಚಿದ್ದಲ್ಲಿ ರೋಗವನ್ನು ಗುಣಪಡಿಸಲು ಸಹಾಯಕವಾಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಸ್ತನ ಕ್ಯಾನ್ಸ್ ಪತ್ತೆ ಹಚ್ಚಿದ್ದಲ್ಲಿ ಗುಣಪಡಿಸಬಹುದಾಗಿದ್ದು, ಈ ನಿಟ್ಟಿನಲ್ಲಿ  ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚಲು ಅವಶ್ಯಕವಿರುವ ಯಂತ್ರೋಪಕರಣಗಳನ್ನು ಸಹ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಇದರಿಂದ ತಪಾಸಣೆಗೊಳಪಡಿಸಿ ರೋಗ ಪರೀಕ್ಷಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲೆಯ ಸಾರ್ವಜನಿಕರು ನಗರದ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಕಿಮೋಥೆರಪಿ ಹಾಗೂ ಮೆಮೊಗ್ರಾಫಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು  ಎಂದು ಅವರು ಹೇಳಿದರು.  

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಬಹುದಿನಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಜವಳಿ, ಕಬ್ಬು ಅಭಿವೃದ್ದಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ  ಶಿವಾನಂದ ಎಸ್.ಪಾಟೀಲ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಗಳ ನಿರ್ದೇಶಕಿ ಡಾ.ತ್ರಿವೇಣಿ ಎಂ.ಜಿ., ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಂಪತ್ ಗುಣಾರಿ ಉಪಸ್ಥಿತರಿದ್ದರು.

108 ಅಂಬುಲೆನ್ಸ್‌ ವ್ಯವಸ್ಥೆ ನಿರ್ವಹಿಸುತ್ತಿರುವ ಹಾಲಿ ಏಜೆನ್ಸಿಯಿಂದ ಸಾಕಷ್ಟು ದೂರು ಲೋಪ ಕಂಡುಬಂದಿದೆ. ಹೀಗಾಗಿ ಶೀಘ್ರದಲ್ಲೇ ಆಮೂಲಾಘ್ರವಾಗಿ ಬದಲಾಯಿಸಲಾಗುವುದು
ದಿನೇಶ ಗುಂಡುರಾವ್ ಸಚಿವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.