ವಿಜಯಪುರ: ಆಲಮಟ್ಟಿಗೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಭರವಸೆ ನೀಡಬೇಕು ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ, ಉದ್ದೇಶಿತ ಪಿಪಿಪಿ ಮಾದರಿ ಕೈಬಿಡಬೇಕು, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಸಮಿತಿ ಸದಸ್ಯ ಬಿ.ಭಗವನ್ ರೆಡ್ಡಿ ಮಾತನಾಡಿ, ವಿಜಯಪುರದಲ್ಲಿ ಸರ್ಕಾರಿ ಕಾಲೇಜನ್ನು ಸಂಪೂರ್ಣವಾಗಿ ಸರ್ಕಾರವೇ ಜವಾಬ್ದಾರಿ ತೆಗೆದುಕೊಂಡು ಮಾಡಬೇಕು ಎಂದು ಆಗ್ರಹಿಸಿ ಸೆ.9ರಂದು ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಈ ರ‍್ಯಾಲಿಗೆ ಜಿಲ್ಲೆಯ ಎಲ್ಲಾ ಸಾಹಿತಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಅಣ್ಣರಾಯ ಈಳಗೇರ ಮಾತನಾಡಿ, ಯಾವುದೇ ಕಾರಣಕ್ಕೂ ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೆ. ಎಫ್. ಅಂಕಲಗಿ ಮಾತನಾಡಿ, ಈ ಹಿಂದೆ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗಲೇ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಸ್ತು ಎಂದಿದ್ದರು. ಜಿಲ್ಲೆಯ ಖಾಸಗಿ ಆಸ್ಪತ್ರೆಯವರು ಜಿಲ್ಲಾಸ್ಪತ್ರೆಯನ್ನು ಬಳಸಿಕೊಂಡು ಸ್ವತಂತ್ರವಾಗಿ ಬೆಳೆದು ನಿಂತಿವೆ. ರಾಜ್ಯದಲ್ಲಿ ಮಾದರಿ ಆಸ್ಪತ್ರೆ ಎಂದು ಹೆಸರಾಗಿರುವ ವಿಜಯಪುರ ಜಿಲ್ಲೆಗೆ ಕೂಡಲೇ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಅಕ್ರಂ ಮಾಶಾಳಕರ ಮಾತನಾಡಿ, ಆಲಮಟ್ಟಿಗೆ ಬಾಗಿನ ಸಲ್ಲಿಸಲು ಬರುತ್ತಿರುವ ರಾಜ್ಯದ ಮುಖ್ಯಮಂತ್ರಿ ಅವವನ್ನು ಭೇಟಿ ಮಾಡಿ ಮಾತನಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಸಂಚಲನಾ ಸಮಿತಿ ಸದಸ್ಯರಾದ ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಸುರೇಶ ಜೆ.ಬಿ. ಸಿ.ಬಿ ಪಾಟೀಲ, ಬಾಬುರಾವ್ ಬೀರಕಬ್ಬಿ, ಲಕ್ಷ್ಮಣ ಹಂದ್ರಾಳ, ಭರತಕುಮಾರ ಎಚ್. ಟಿ., ಚಂದ್ರಶೇಖರ ಗಂಟೆಪ್ಪಗೋಳ, ದಸ್ತಗೀರ ಉಕ್ಕಲಿ, ಶ್ರೀಕಾಂತ ಕೊಂಡಗೂಳಿ, ಗೀತಾ ಎಚ್, ಸಿದ್ರಮಯ್ಯ ಹಿರೇಮಠ, ಚನ್ನು ಕಟ್ಟಿಮನಿ, ಜಗದೇವ ಸೂರ್ಯವಂಶಿ, ಮಹಾದೇವ ಬನಸೋಡೆ, ವಿದ್ಯಾವತಿ ಅಂಕಲಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಜಿಲ್ಲೆಯ ವಿದ್ಯಾರ್ಥಿ ಯುವಕರು ಗಟ್ಟಿ ಧ್ವನಿಯಾಗಬೇಕು. ಒಂದು ವೇಳೆ ಖಾಸಗಿಯವರಿಗೆ ಅವಕಾಶ ಕೊಟ್ಟರೆ ಜಿಲ್ಲಾ ಬಂದ್ ಮಾಡುತ್ತೇವೆ-ಶ್ರೀನಾಥ ಪೂಜಾರಿ ಅಧ್ಯಕ್ಷ ದಲಿತ ವಿದ್ಯಾರ್ಥಿ ಪರಿಷತ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.