ADVERTISEMENT

ವಿಜಯಪುರ: ಜಮೀನು ದಾರಿ ಸಮಸ್ಯೆ ಪರಿಹಾರಕ್ಕೆ ಕಾನೂನು ತಿದ್ದುಪಡಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:43 IST
Last Updated 26 ಫೆಬ್ರುವರಿ 2026, 5:43 IST
ವಿಜಯಪುರದಲ್ಲಿ ಅಖಂಡ ಕರ್ನಾಟಕ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿ ಔದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರದಲ್ಲಿ ಅಖಂಡ ಕರ್ನಾಟಕ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿ ಔದ್ರಾಮ ಅವರಿಗೆ ಮನವಿ ಸಲ್ಲಿಸಲಾಯಿತು.   

ವಿಜಯಪುರ: ಜಮೀನು ದಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಬಜೆಟ್ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ಮಾಡಿ ತಹಶೀಲ್ದಾರರಿಗೆ ಸಂಪೂರ್ಣ ಅಧಿಕಾರ ವಹಿಸಿಕೊಡಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ‘ಜಮೀನು ದಾರಿ ಸಮಸ್ಯೆ ರಾಜ್ಯಾದಾದ್ಯಂತ ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಳ್ಳಿಗಳಲ್ಲಿ ಹೊಲಗಳ ದಾರಿಗಾಗಿ ನಿತ್ಯ ಕಲಹಗಳು ನಡೆಯುತ್ತಿವೆ. ಪೊಲೀಸರು ಇದನ್ನು ಸಿವಿಲ್ ಸ್ವರೂಪದ ಪ್ರಕರಣವೆಂದು ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸುತ್ತಾರೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಲು ಕನಿಷ್ಠ 10ರಿಂದ 12 ವರ್ಷಗಳ ಕಾಲ ಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚಾಗುವುದರೊಂದಿಗೆ, ತೀರ್ಪು ಬರುವವರೆಗೆ ಜಮೀನುಗಳು ಪಾಳು ಬೀಳುತ್ತವೆ’ ಎಂದರು.

‘ಈ ಸಮಸ್ಯೆಯಿಂದ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಕೆಲವೆಡೆ ದಾರಿಗಾಗಿ ಹಲ್ಲೆಗಳು, ಹೊಡೆದಾಟಗಳು ಮತ್ತು ಕೊಲೆ ಪ್ರಕರಣಗಳೂ ನಡೆದಿವೆ. 12 ವರ್ಷಗಳಿಂದ ಸಂಘ ಈ ವಿಷಯದಲ್ಲಿ ಹೋರಾಟ ನಡೆಸುತ್ತಿದೆ. ಹೋರಾಟದ ಕಾರಣ ಸರ್ಕಾರ ಸುತ್ತೋಲೆ ಹೊರಡಿಸಿ, ನಕ್ಷೆಯಲ್ಲಿ ಗುರುತಿಸಲಾದ ದಾರಿಗಳನ್ನು ತಹಶೀಲ್ದಾರರು ತಾಲ್ಲೂಕು ಮ್ಯಾಜಿಸ್ಟ್ರೇಟ್ ಅಧಿಕಾರದಡಿ ಬಿಡಿಸಿಕೊಡಬಹುದು ಎಂದು ತಿಳಿಸಿತ್ತು. ಆದಾಗ್ಯೂ, ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ’ ಎಂದು ದೂರಿದರು.

ADVERTISEMENT

ಹುಣಶ್ಯಾಳ ಪಿ.ಬಿ.ಯ ಸಂಗನಬಸವ ಸ್ವಾಮೀಜಿ, ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ವಾಲೀಕಾರ, ರೈತ ಮುಖಂಡ ವಿಠ್ಠಲ ಬಿರಾದಾರ, ಬಸವನ ಬಾಗೇವಾಡಿ ತಾಲೂಕು ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಲಂಕೇಶ ತಳವಾರ, ರೈತ ಮುಖಂಡ ಗುರಲಿಂಗಪ್ಪ ಪಡಲಸಗಿ, ರೈತ ಮುಖಂಡ ಹಣಮಂತ ಹಂದ್ರಾಳ, ಕಿರಣ ಮೇಲಿನಕೇರಿ, ದತ್ತಾತ್ರೇಯ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.