ವಿಜಯಪುರ: ಭೀಮಾ ನದಿಯ ಪ್ರವಾಹದಿಂದ ಸಂತ್ರಸ್ತರಾದವರಿಗೆ ಆಲಮೇಲ ತಾಲ್ಲೂಕಿನ ದೇವರನಾವದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಸಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭಾನುವಾರ ಭೇಟಿ ನೀಡಿ, ಪರಿಶೀಲಿಸಿದರು.
ಕಾಳಜಿ ಕೇಂದ್ರಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದ ಅವರು, ಸಂತ್ರಸ್ಥರೊಂದಿಗೆ ಮಾತನಾಡಿದರು.
‘ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ನಿಮ್ಮ ಜೊತೆಗಿದ್ದು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದೆ. ಜನ, ಜಾನುವಾರಗಳ ಪ್ರಾಣ ಹಾನಿಯಾಗದಂತೆ ಸಕಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಸಚಿವರು ಹೇಳಿದರು.
ಸಂತ್ರಸ್ತರಿಗೆ ಊಟೋಪಚಾರ ಹಾಗೂ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ಕಾಳಜಿ ಕೇಂದ್ರಕ್ಕೆ ನಮ್ಮನ್ನು ಸ್ಥಳಾಂತರಿಸಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಿದ್ದಾರೆ’ ಎಂದು ಸಂತ್ರಸ್ತ ಕುಟುಂಬದರು ಹೇಳಿದರು.
ಕುಮಸಗಿ ಗ್ರಾಮದ ಹತ್ತಿರ ಹರಿಯುವ ಭೀಮಾ ನದಿ ತೀರಕ್ಕೆ ಭೇಟಿ ನೀಡಿ, ಪ್ರವಾಹ ಪರಿಸ್ಥಿತಿಯ ಕುರಿತು ಅವಲೋಕಿಸಿದರು. ದೇವರ ನಾವದಗಿ ಗ್ರಾಮದ ಶರಣಪ್ಪ ಯರಗಲ್ ಅವರ ಕಬ್ಬಿನ ತೋಟಕ್ಕೆ ಭೇಟಿ ನೀಡಿ, ಬೆಳೆ ಹಾನಿ ವೀಕ್ಷಿಸಿದರು.
ಸೇತುವೆ ದುರಸ್ತಿಗೆ ಕ್ರಮ: ‘ದೇವಣಗಾಂವ ಸೇತುವೆ ದುರಸ್ತಿ ಬಗ್ಗೆ ಅಲ್ಲಿನ ಜನರು ಆಗ್ರಹಿಸಿದ್ದು, ಇದನ್ನು ದುರಸ್ತಿಗೊಳಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ನಿರಾಶ್ರಿತರಿಗೆ ಸೂರು ಕಲ್ಪಿಸಲು ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ಅಗತ್ಯ ಕ್ರಮ ವಹಿಸುತ್ತೇವೆ’ ಎಂದು ಸಚಿವರು ಭರವಸೆ ನೀಡಿದರು.
‘ಪುನರ್ವಸತಿ ಕೇಂದ್ರಕ್ಕೆ ಎಲ್ಲರೂ ಕಡ್ಡಾಯವಾಗಿ ಬರಲು ಒಪ್ಪಿದರೆ ಮಾತ್ರ ಹೊಸ ವ್ಯವಸ್ಥೆ ಮಾಡಲಾಗುವುದು. ತಾರಾಪುರ ಮತ್ತು ತಾವರಖೇಡ ಗ್ರಾಮಗಳಲ್ಲಿನ ಪುನರ್ವಸತಿ ಕೇಂದ್ರಗಳಿಗೆ ಅರ್ಧಕ್ಕೂ ಹೆಚ್ಚು ಜನರು ಹೋಗಿಯೇ ಇಲ್ಲ. ಹೊಸದಾಗಿ ಮಾಡುವ ಪುನರ್ವಸತಿ ಕೇಂದ್ರದಲ್ಲಿ ಎಲ್ಲರೂ ಬರಬೇಕು’ ಎಂದಾಗ ಸಂತ್ರಸ್ತರು ಒಪ್ಪಿಕೊಂಡರು.
ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇದ್ದರು.
ದೇವಣಗಾಂವ ಸೇತುವೆ ದುರಸ್ತಿಗೆ ಕ್ರಮ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸೂಚನೆ ಪುನರ್ವಸತಿ ಕೇಂದ್ರಕ್ಕೆ ಬರಲು ಸಂತ್ರಸ್ತರು ಒಪ್ಪಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.