ADVERTISEMENT

ವಿಜಯಪುರ: ಫಲ–ಪುಷ್ಪದಲ್ಲಿ ಅರಳಿದ ಮೋಹಕ ಕಲಾಕೃತಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 4:37 IST
Last Updated 14 ಜನವರಿ 2026, 4:37 IST
ವಿಜಯಪುರ ನಗರದ ತೋಟಗಾರಿಕೆ ಇಲಾಖೆಯ ಬಸವವನ ಆವರಣದಲ್ಲಿ ಆಯೋಜಿಸಿರುಬ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಕಣ್ಮನ ಸೆಳೆದ ಹೂವಿನಿಂದ ತಯಾರಿಸಿರುವ ಗೋಳಗುಮ್ಮಟ ಪ್ರತಿಕೃತಿ ಪ್ರಜಾವಾಣಿ ಚಿತ್ರಗಳು: ಸಂಜೀವ ಅಕ್ಕಿ
ವಿಜಯಪುರ ನಗರದ ತೋಟಗಾರಿಕೆ ಇಲಾಖೆಯ ಬಸವವನ ಆವರಣದಲ್ಲಿ ಆಯೋಜಿಸಿರುಬ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಕಣ್ಮನ ಸೆಳೆದ ಹೂವಿನಿಂದ ತಯಾರಿಸಿರುವ ಗೋಳಗುಮ್ಮಟ ಪ್ರತಿಕೃತಿ ಪ್ರಜಾವಾಣಿ ಚಿತ್ರಗಳು: ಸಂಜೀವ ಅಕ್ಕಿ   

ವಿಜಯಪುರ: ಇಲ್ಲಿನ ತೋಟಗಾರಿಕೆ ಇಲಾಖೆಯ ಬಸವವನ ಆವರಣದಲ್ಲಿ ಮಂಗಳವಾರ ಆರಂಭವಾಗಿರುವ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ.

ವಿವಿಧ ಹೂ-ಹಣ್ಣು ಹಾಗೂ ತರಕಾರಿಗಳಿಂದ ನಿರ್ಮಿಸಿದ ಅಪರೂಪದ ಕಲಾಕೃತಿಗಳು ಆಕರ್ಷಣೆಯ ಕೇಂದ್ರಬಿಂದು ಆಗಿವೆ. ವಿಭಿನ್ನ ಆಲೋಚನೆ, ಸೃಜನಶೀಲತೆ ಹಾಗೂ ನೈಸರ್ಗಿಕ ಸೌಂದರ್ಯವನ್ನು ಸೃಷ್ಟಿಸುವ ಸನ್ನಿವೇಶವನ್ನು ಈ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದ್ದು, ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ಪಡೆಯುತ್ತಿದೆ. 

ಹೂವಿನಲ್ಲಿ ಅರಳಿದ ಗೋಳಗುಮ್ಮಟ, ಗಿಡದಲ್ಲಿ ಕುಳಿತ ನಾಟ್ಯ ಮಯೂರಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಹೂವಿನಲ್ಲಿ ಮೂಡಿಬಂದ ಡಾಲ್ಫಿನ್, ಪುಷ್ಪ ಮಾರಾಟಕ್ಕೆ ಬಂದ ಪುಷ್ಪಲತಾ ಚಿತ್ರ, ನೀರಿನಿಂದ ಹೊರಬಂದ ಹಂಸ ಮುಂತಾದ ಕಲಾಕೃತಿಗಳು ಗಮನ ಸೆಳೆಯುತ್ತಿವೆ. 

ADVERTISEMENT

ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದ ಭೌಗೋಳಿಕ ಮಾನ್ಯತೆ ಪಡೆದ ಇಂಡಿ ಲಿಂಬೆ, ವಿವಿಧ ಬಗೆಯ ಹೂಗಳಿಂದ ನಿರ್ಮಾಣವಾದ ಕಲಾ ಕೃತಿಗಳು, ಆರೋಗ್ಯ ಸಂದೇಶ ಸಾರುವ ಹಣ್ಣುಗಳ ಕಲಾಕೃತಿ, ತರಕಾರಿಯಲ್ಲಿ ಸೃಷ್ಟಿಸಿದ ಮಹಾಪುರುಷರ ಆಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ. 

ಹೂವಿನಲ್ಲಿ ಅರಳಿದ ಅಳಿಲು, ಹಸಿ ಈರುಳ್ಳಿಯಲ್ಲಿ ಉದ್ಭವಿಸಿದ ತೋಟದ ಮನೆ, ಕಲಾಕೃತಿಗಳು ಕಲಾವಿದರ ವೈವಿಧ್ಯಮಯ ಕಲ್ಪನೆಗೆ ಸಾಕ್ಷೀಕರಿಸಿವೆ. ಸಿರಿಧಾನ್ಯದಲ್ಲಿ ಮೂಡಿಬಂದ ಸ್ವಾಮಿ ವಿವೇಕಾನಂದ, ರಾಜಗಿರಿ ಬೀಜಗಳಿಂದ ಮೂಡಿಬಂದ ಜಾಂಬವಂತ ಆಕರ್ಷಣೀಯವಾಗಿವೆ. 

ಕುಟುಂಬ ಸಮೇತರಾಗಿ ಪ್ರದರ್ಶನ ವೀಕ್ಷಣೆಗೆ ಬಂದವರು ಸೆಲ್ಪಿ ತೆಗೆದುಕೊಂಡು ಆನಂದಿಸಿದರು. ಜೋಡಿ ಸೆಲ್ಫಿ ಪಾಯಿಂಟ್, ಪಕ್ಷಿ ಸೆಲ್ಫಿ ಪಾಯಿಂಟ್‌ಗಳನ್ನು ಈ ಪ್ರದರ್ಶನದಲ್ಲಿ ರೂಪಿಸಲಾಗಿದೆ. ಪ್ರಕೃತಿ, ಕಲೆ, ಆರೋಗ್ಯ, ಸಾಮಾಜಿಕ ಸಂದೇಶ ಸೇರಿದಂತೆ ಎಲ್ಲವನ್ನೂ ಒಂದುಗೂಡಿಸಿ ವಿಜಯಪುರದ ಸಾಂಸ್ಕೃತಿಕ ವೈಭವಕ್ಕೆ ಹೊಸ ಆಯಾಮ ನೀಡಿದೆ.

ಶಾಲಾ ಮಕ್ಕಳಿಗೆ ತೋಟಗಾರಿಕೆ ವಿಷಯಗಳ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಜಿಲ್ಲೆಯ ರೈತರು ಬೆಳೆದ ಎಲ್ಲ ಬಗೆಯ ಹಣ್ಣು, ತರಕಾರಿ ಹಾಗೂ ಪುಷ್ಪಗಳ ಪ್ರದರ್ಶನ ಏರ್ಪಡಿಸಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಾಗರಿಕರು, ಗೃಹಿಣಿಯರಿಗೆ ಬೋನ್ಸಾಯ್‌ ಗಿಡಗಳ ಬೇಸಾಯ, ಅಣಬೆ ಬೇಸಾಯ, ಕೈತೋಟ, ಸಾವಯವ ಕೃಷಿಗೆ ಅರಿವು ಮೂಡಿಸಲಾಗಿದೆ.

ವಿಜಯಪುರ ನಗರದ ತೋಟಗಾರಿಕೆ ಇಲಾಖೆಯ ಬಸವವನ ಆವರಣದಲ್ಲಿ ಆರಂಭವಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ತರಕಾರಿಗಳಿಂದ ತಯಾರಿಸಿರುವ ಚಕ್ರ  
ವಿಜಯಪುರ ನಗರದ ತೋಟಗಾರಿಕೆ ಇಲಾಖೆಯ ಬಸವವನ ಆವರಣದಲ್ಲಿ ಆರಂಭವಾಗಿರುವ ಫಲಪುಷ್ಪ ಪ್ರದರ್ಶನವನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು  –ಪ್ರಜಾವಾಣಿ ಚಿತ್ರ 

ಬೆಳಿಗ್ಗೆ 9.30 ರಿಂದ ರಾತ್ರಿ 8.30ರ ವರೆಗೆ ಪ್ರದರ್ಶನ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ರೈತರಿಂದ ನೇರವಾಗಿ ಸಾರ್ವಜನಿಕರಿಗೆ ಮಾರಾಟ

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಪರೂಪದ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ವೀಕ್ಷಣೆ ಮಾಡಬೇಕು
ರಾಹುಲ್‌ ಭಾವಿದೊಡ್ಡಿ ಜಂಟಿ ನಿರ್ದೇಶಕ ತೋಟಗಾರಿಕೆ ಇಲಾಖೆ  

ರೈತರಿಂದ ನೇರ ಖರೀದಿಗೆ ವ್ಯವಸ್ಥೆ

ರೈತರಿಗೆ ಮಾಹಿತಿ ನೀಡಲು ತೋಟಗಾರಿಕೆ ಸೇವಾ ಕೇಂದ್ರ ವಿವಿಧ ಯಂತ್ರೋಪಕರಣ ಹನಿ ನೀರಾವರಿ ಉಪಕರಣಗಳು ಇತರೆ ಪರಿಕರ ಮಳಿಗೆಗಳನ್ನೂ ಸ್ಥಾಪಿಸಲಾಗಿದೆ.  ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ ದ್ರಾಕ್ಷಿ ದಾಳಿಂಬೆ ಮತ್ತು ಡ್ರ್ಯಾಗನ್ ಫ್ರೂಟ್ ಬೆಳೆಗಳಲ್ಲಿ ಹವಾಮಾನ ಅಧಾರಿತ ಸಮಗ್ರ ಬೇಸಾಯ ಪದ್ಧತಿ ಜೇನು ಸಾಕಣೆ ತರಬೇತಿ ಹಾಗೂ ತಾಳೆ ಬೆಳೆಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸಂಕ್ರಾಂತಿ ಹಬ್ಬಕ್ಕೆ ಬೇಕಾಗುವ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.