ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವಂತೆ ಆಗ್ರಹಿಸಿ ಹೋರಾಟ ಸಮಿತಿಯಿಂದ ಜವಳಿ, ಕಬ್ಬು, ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಉದ್ದೇಶಿತ ಖಾಸಗಿ ಸಹಭಾಗಿತ್ವದಡಿ ವೈದ್ಯಕೀಯ ಕಾಲೇಜು ಆರಂಭಿಸುವ ಹುನ್ನಾರವನ್ನು ಸರ್ಕಾರ ಕೈ ಬಿಡಬೇಕು. ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವಂತೆ ಆಗ್ರಹಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬುದು ನನ್ನ ನಿಲುವು ಕೂಡ. ಪಿಪಿಪಿ ಮಾದರಿಗೆ ನನ್ನ ವಿರೋಧವೂ ಇದೆ. ಈ ಸಂಬಂಧ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಭರವಸೆ ನೀಡಿದರು.
‘ಪಿಪಿಪಿ ಮಾದರಿ ವಿರೋಧಿಸಿ ಹೋರಾಟ ಸಮಿತಿ ಹೋರಾಟಕ್ಕೆ ಇಳಿದರೆ ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ನಾನೂ ಹೋರಾಟದಲ್ಲಿ ಪಾಲ್ಗೊಳ್ಳಲು ಸಿದ್ಧನಿದ್ದೇನೆ’ ಎಂದು ತಿಳಿಸಿದರು.
ವಿಜಯಪುರ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಸಂಚಾಲಕ ಸಮಿತಿ ಸದಸ್ಯರಾದ ಬಿ.ಭಗವಾನರೆಡ್ಡಿ, ಅರವಿಂದ ಕುಲಕರ್ಣಿ, ನಾಸಿರ್, ಮಲ್ಲಿಕಾರ್ಜುನ ಕೆಂಗನಾಳ, ಗೀತಾ ಎಚ್, ಭರತಕುಮಾರ ಎಚ್. ಟಿ, ಬಾಬುರಾವ್, ಫಯಾಜ್ ಕಲಾದಗಿ, ಸಿದ್ದಲಿಂಗ ಬಾಗೇವಾಡಿ, ಸಿದ್ದರಾಮ ಹಿರೇಮಠ, ಶ್ರೀಕಾಂತ, ಲಲಿತಾ ಬಿಜ್ಜರಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.