ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಯಾವೊಬ್ಬ ರಾಜಕಾರಣಿಯ ಪರವೂ ಅಲ್ಲ. ಯಾವೊಬ್ಬ ರಾಜಕಾರಣಿಯ ವಿರುದ್ದವೂ ಅಲ್ಲ. ಅಂತೆಯೇ, ಯಾವುದೇ ಪಕ್ಷದ ಪರವೂ ಅಲ್ಲ, ವಿರುದ್ದವೂ ಅಲ್ಲ. ಇದು ಇಡೀ ಜಿಲ್ಲೆಯ ಜನರಪರವಾಗಿ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು ಒಂದಾಗಿ ನಡೆಸುತ್ತಿರುವ ಹೋರಾಟವಾಗಿದೆ ಎಂಬುದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಗಮನಿಸಬೇಕು ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿ ಮನವಿ ಮಾಡಿದೆ.
‘ಹೋರಾಟಗಾರರಿಗೆ ಕನಿಷ್ಠ ಪ್ರಜ್ಞೆಯೂ ಇಲ್ಲ, ಪಿಪಿಪಿ ಬಗ್ಗೆ ತಿಳಿವಳಿಕೆ ಇಲ್ಲ, ಯಾರದೋ ಪ್ರಚೋದನೆಯಿಂದ ಕುಳಿತಿದ್ದಾರೆ’ ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವರು ಹಗುರವಾಗಿ ಮಾತನಾಡಿರುವುದನ್ನು ಹೋರಾಟ ಸಮಿತಿಯು ಒಪ್ಪಿಕೊಳ್ಳುವುದಿಲ್ಲ, ಅಷ್ಟೇ ಅಲ್ಲ ಅವರ ಇಂತಹ ಮಾತುಗಳನ್ನು ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದೆ.
‘ಜನಪ್ರತಿನಿಧಿಗಳಾಗಿರುವ ಅದರಲ್ಲೂ ಒಂದು ಸರ್ಕಾರವನ್ನು ಪ್ರತಿನಿಧಿಸುವ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವ ಅವರು ಹೀಗೆ ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಅವರ ಇಂತಹ ಮಾತುಗಳು ಜನರ ಬಗ್ಗೆ ಮತ್ತು ಈ ಹಿಂದೆ ಸಮಾಜಕ್ಕೆ ಹಾಗೂ ದೇಶಕ್ಕಾಗಿ ಹೋರಾಡಿದ ಸಮಸ್ತ ಹೋರಾಟಗಾರರಿಗೆ ಅಗೌರವ ತೋರಿಸಿದಂತಾಗುತ್ತದೆ’ ಎಂದು ಹೋರಾಟ ಸಮಿತಿ ಹೇಳಿದೆ.
‘ನಮ್ಮ ಹೋರಾಟದಲ್ಲಿ ಯಾವುದೇ ಇತಿಮಿತಿಗಳಿದ್ದಲ್ಲಿ ಪ್ರಾಮಾಣಿಕವಾಗಿ ನಾವು ತಿದ್ದಿಕೊಳ್ಳಲು ತಯಾರಿದ್ದೇವೆ. ನಮ್ಮ ತಪ್ಪುಗಳನ್ನು ತೋರಿಸಿ, ತಿದ್ದಿ ಜಿಲ್ಲೆಯ ಜನರ ಹಿತಾಸಕ್ತಿಗಾಗಿ ನಡೆಯುತ್ತಿರುವ ಹೋರಾಟವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು’ ಎಂದು ಮನವಿ ಮಾಡುತ್ತೇವೆ ಎಂದು ಸಮಿತಿ ತಿಳಿಸಿದೆ.
‘ಜಿಲ್ಲೆಯ ಜನತೆ ಮತ್ತು ಹೋರಾಟಗಾರರು ರಾಜಕಾರಣಿಗಳ ಇಂತಹ ಮಾತಿಗೆ ತಲೆ ಕೆಡೆಸಿಕೊಳ್ಳದೆ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗುವವರೆಗೂ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಹೋಬಳಿ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲೂ ವಿಸ್ತಾರಗೊಳಿಸಲು ಹೋರಾಟ ಸಮಿತಿ ನಿರ್ಧರಿಸಿದೆ’ ಎಂದು ಹೇಳಿದೆ.
‘ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಧರಣಿ ಸ್ಥಳಕ್ಕೆ ಬಂದು ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ಸರ್ಕಾರಿ ವೈದ್ಯಕೀಯ ಕಾಲೇಜು ಪರವಾಗಿದ್ದೇನೆ. ಇದರ ಸ್ಥಾಪನೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಸುವೆ. ಜನಗಳ ಭಾವನೆಯನ್ನೂ ತಿಳಿಸುವೆ ಎಂದು ಹೇಳಿರುವುದು ಹೋರಾಟ ಸಮಿತಿಯು ಸ್ವಾಗತಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಅವರು ಆದಷ್ಟು ಬೇಗ ಕಾರ್ಯಪ್ರವೃತ್ತರಾಗಬೇಕು’ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದೆ.
13 ನೇ ದಿನದ ಹೋರಾಟದಲ್ಲಿ ವಿನಾಯಕ ಐಬಾಳ, ಬಾಬು ಬಿಜಾಪುರ, ಮೀರಸಾಬ ದಳವಾಯಿ, ಪೀರಸಾಬ ವಾಲೀಕರ, ಅವಿನಾಶ ಐಹೊಳೆ, ಹೋರಾಟ ಸಮಿತಿ ಸದಸ್ಯರಾದ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಅಪ್ಪಸಾಹೇಬ ಯರನಾಳ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಸುರೇಶ ಬಿಜಾಪುರ, ಸುರೇಶ್ ಜೀಬಿ,ಲಕ್ಷ್ಮಣ ಹಂದ್ರಾಳ, ಶ್ರೀನಾಥ ಪೂಜಾರಿ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್. ಟಿ, ಅಬ್ದುಲ ರಹಮಾನ್ ನಾಸಿರ್, ಜ್ಯೋತಿ ಮಿಣಜಗಿ, ಸಿದ್ದರಾಮ ಹಳ್ಳೂರ, ಜಯದೇವ ಸೂರ್ಯವಂಶಿ, ಬೋಗೇಶ್ ಸೋಲಾಪುರ್, ಗೀತಾ ಎಚ್, ಕಾವೇರಿ ರಜಪೂತ, ನೀಲಾಂಬಿಕಾ ಬಿರಾದರ ಭಾಗವಹಿಸಿದ್ದರು.
ವೈದ್ಯಕೀಯ ಕಾಲೇಜನ್ನು ಖಾಸಗೀಯವರಿಗೆ ಮಾರಾಟ ಮಾಡುವುದರ ಜೊತೆಗೆ ವೈದ್ಯಕೀಯ ಸೀಟುಗಳನ್ನು ಮುಂದೆ ಮಾರಿಕೊಳ್ಳುವ ಹುನ್ನಾರ ಇದರಲ್ಲಿ ಅಡಗಿದೆರವಿಕುಮಾರ್ ರಾಜ್ಯ ಕಾರ್ಯದರ್ಶಿ ಆಮ್ ಆದ್ಮಿ ಪಕ್ಷ
ಈ ದೇಶದ ಬೆನ್ನಲುಬಾಗಿರುವ ರೈತರ ಮಕ್ಕಳು ಕೂಡ ವೈದ್ಯಕೀಯ ಶಿಕ್ಷಣ ಪಡೆಯಲು ಸರ್ಕಾರಿ ವೈದ್ಯಕೀಯ ಕಾಲೇಜು ನಮ್ಮ ಜಿಲ್ಲೆಗೆ ಅವಶ್ಯಕತೆ ಇದೆಸಿದ್ದನಗೌಡ ಪಾಟೀಲಕರ್ನಾಟಕ ರಾಜ್ಯ ರೈತ ಸಂಘ
ಸರ್ಕಾರ ವೈದ್ಯಕೀಯ ಕಾಲೇಜನ್ನು ಖಾಸಗಿಯವರಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ. ನಮ್ಮ ಜನ ಆರೋಗ್ಯ ಚಳವಳಿಯು ಸಂಪೂರ್ಣ ಬೆಂಬಲ ಇದೆಟೀನಾ ಜೇವಿಯರ್ಕರ್ನಾಟಕ ಜನ ಆರೋಗ್ಯ ಚಳವಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.