ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಜನ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳತೊಡಗಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಯಿತು. ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿಚೌಕಿ ಮಾರ್ಗವಾಗಿ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.
ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕೇ ಬೇಕು, ಖಾಸಗಿ ಸಹಭಾಗಿತ್ವ ಬೇಡವೇ ಬೇಡ, ಪಿಪಿಪಿ ಮಾದರಿ ಕೈಬಿಡಿ ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು.
ಹೋರಾಟ ಸಮಿತಿ ಸದಸ್ಯ ಬಿ.ಭಗವಾನ್ ರೆಡ್ಡಿ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಗೆ ಸೂಕ್ತವಾದ 149 ಎಕರೆಗೂ ಹೆಚ್ಚು ಸ್ಥಳಾವಕಾಶ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿದೆ. ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯೂ ಇದೆ. ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಇಲ್ಲ, ಸರ್ಕಾರ ಇದನ್ನು ಗಮನಿಸಬೇಕು, ಪಿಪಿಪಿ ಮಾದರಿಯನ್ನು ಯಾವ ಕಾರಣಕ್ಕೂ ವಿಜಯಪುರದಲ್ಲಿ ತರಲು ಬಿಡುವುದಿಲ್ಲ, ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಅಣ್ಣರಾಯ ಈಳಗೇರ ಮಾತನಾಡಿ, ‘ಒಂದು ವೇಳೆ ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಆರಂಭವಾದರೆ ಅಲ್ಲಿ ಬಡ ಮತ್ತು ಮಧ್ಯಮ ವರ್ಗದ ಹಾಗೂ ಜನಸಾಮಾನ್ಯರ ಮಕ್ಕಳು ಕಲಿಯಲು ಸಾಧ್ಯವಾಗುವುದಿಲ್ಲ ಮತ್ತು ಇದು ಮುಂದೆ ಕ್ರಮೇಣ ಸಂಪೂರ್ಣ ಖಾಸಗೀಕರಣಗೊಂಡು ಬಡವರ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುತ್ತದೆ. ನಾವೆಲ್ಲರೂ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಅಕ್ರಂ ಮಾಶಾಳಕ್ಕರ್, ಅನಿಲ ಹೊಸಮನಿ, ಅರವಿಂದ ಕುಲಕರ್ಣಿ, ಚಂದ್ರಶೇಖರ ಘಂಟೆಪ್ಪಗೋಳ, ಫಾದರ್ ಕೆವಿನ್, ಮಲ್ಲಿಕಾರ್ಜುನ ಕೆಂಗನಾಳ, ಲಲಿತಾ ಬಿಜ್ಜರಗಿ, ಜಗದೇವ್ ಸುರ್ಯವಂಶಿ, ಶ್ರೀನಾಥ್ ಪೂಜಾರಿ, ಬೋಗೇಶ್ ಸೊಲಾಪುರ, ದಸ್ತಗಿರಿ ಉಕ್ಕಲಿ, ಶಿವಬಾಳಮ್ಮ ಕೊಂಡಗೂಳಿ, ಗೀತಾ ಎಚ್, ಕಾವೇರಿ ರಜಪೂತ, ಸಿದ್ದಲಿಂಗ ಬಾಗೇವಾಡಿ, ಮಹಾದೇವಿ ಧರ್ಮಶೆಟ್ಟಿ, ಶಶಿಕಲಾ ಮ್ಯಾಗೇರಿ, ಸುರೇಖಾ ರಜಪೂತ, ಅನುಸೂಯ ಕಾಂಬಳೆ, ಮಲ್ಲಿಕಾರ್ಜುನ ಬಟಗಿ, ಬಾಬುರಾವ್ ಬೀರಕಬ್ಬಿ, ಸಿದ್ರಾಮ ಹಿರೇಮಠ, ಶಿವಾನಂದ, ಗಂಗಮ್ಮ ಉಳ್ಳಗಡ್ಡಿ, ಪ್ರಭುಗೌಡ ಪಾಟೀಲ, ಅಬ್ದುಲ್ ರೆಹಮಾನ್ ಬಿದರಕುಂದಿ, ಫಯಾಜ್ ಕಲಾದಗಿ, ಅಕ್ಷಯ ಅಜಮನಿ, ವಿ.ಎ.ನಾಗಠಾಣ, ಚಂದ್ರಶೇಖರ ಲಂಡಿ, ಮಲ್ಲಿಕಾರ್ಜುನ, ಸುರೇಶ ಬಿಜಾಪುರ, ಸಂಘರ್ಷ ಹೊಸಮನಿ, ಸಂಗಮೇಶ ಸಗರ, ಸಿದ್ದನಗೌಡ ಪಾಟೀಲ, ಲಕ್ಷ್ಮಣ ಕಂಬಾಗಿ, ರೆಹಮಾನ್, ವಾಸುದೇವ ಕಾಳೆ, ಜಬೀನಾ ಖಾನಂ, ವೆಂಕಟೇಶ ಇದ್ದರು.
ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಲ್ಲಾ ಮಕ್ಕಳು ಕಡಿಮೆ ಹಣದಿಂದ ವೈದ್ಯಕೀಯ ಶಿಕ್ಷಣ ಪಡೆಯಬಹುದು ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡೋಣಸುಭಾಷ್ ಯಾದವಾಡ ಸಾಹಿತಿ
ಪಿಪಿಪಿ ಮಾದರಿ ತರುತ್ತಿರುವುದನ್ನು ಎಲ್ಲಾ ಜಿಲ್ಲೆಗಳಲ್ಲಿಯೂ ವಿರೋಧಿಸುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಕರಣ ಮಾಡಲು ಅವಕಾಶ ಮಾಡಿಕೊಟ್ಟಂತೆಟೀನ ಸೇವೂರ್ಹೋರಾಟಗಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.