
ವಿಜಯಪುರ: ‘ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿ, ಸಚಿವ ಸಂಪುಟ ಸಭೆ ಅನುಮೋದಿಸುವವರೆಗೂ ಅನಿರ್ದಿಷ್ಟಾವಧಿ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೋರಾಟ ಸಮಿತಿ ಸ್ಪಷ್ಟಪಡಿಸಿದೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಸದಸ್ಯರಾದ ವಿ.ಸಿ.ನಾಗಠಾಣ, ಅನಿಲ ಹೊಸಮನಿ, ‘ವಿಜಯಪುರದಲ್ಲಿ ಉದ್ದೇಶಿತ ಖಾಸಗಿ ಸಹಭಾಗಿತ್ವ(ಪಿಪಿಪಿ) ಕೈಬಿಟ್ಟು, ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ. ಮುಖ್ಯಮಂತ್ರಿ ಬಳಿಗೆ ಮತ್ತೊಮ್ಮೆ ನಿಯೋಗ ಕೊಂಡೊಯ್ಯುತ್ತೇನೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಹೇಳಿಕೆ ಸ್ವಾಗತಿಸುತ್ತೇವೆ ಮತ್ತು ಅಭಿನಂದಿಸುತ್ತೇವೆ’ ಎಂದು ಹೇಳಿದರು.
‘ಸಚಿವ ಎಂ.ಬಿ.ಪಾಟೀಲರ ಮೇಲೆ ಸಂಪೂರ್ಣ ವಿಶ್ವಾಸ ಇರುವುದರಿಂದ ಹೋರಾಟಗಾರರು ಮತ್ತೊಮ್ಮೆ ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗುವ ಅಗತ್ಯವಿಲ್ಲ. ಜಿಲ್ಲೆಯ ಇಬ್ಬರು ಸಚಿವರು, ಇನ್ನುಳಿದ ಶಾಸಕರ ಬೆಂಬಲದೊಂದಿಗೆ ಸಿಎಂ ಮನವೊಲಿಸಿ ಮುಂದಿನ ಒಂದು ಅಥವಾ ಎರಡನೇ ಸಚಿವ ಸಂಪುಟದಲ್ಲಿ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯವನ್ನು ಚರ್ಚಿಸಿ, ಅನುಮೋದನೆ ಕೊಡಿಸಲಿ’ ಎಂದು ಮನವಿ ಮಾಡಿದರು.
‘ಜನವರಿ 9ರಂದು ಮುಖ್ಯಮಂತ್ರಿಯವರು ವಿಜಯಪುರಕ್ಕೆ ಬರುವುದರೊಳಗೆ ಸರ್ಕಾರ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯ ಅಧಿಕೃತವಾಗಿ ಘೋಷಣೆಯಾಗಬೇಕು. ಇಲ್ಲವಾದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
‘ಹೋರಾಟವು ಡಿ.26ಕ್ಕೆ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲರ ಮನೆ ಎದುರು ಧರಣಿ ನಡೆಸಲು ಈಗಾಗಲೇ ನಿರ್ಧರಿಸಲಾಗಿತ್ತು. ಆದರೆ, ಎಂ.ಬಿ.ಪಾಟೀಲರು ಪಿಪಿಪಿ ಮುಗಿದ ಅಧ್ಯಾಯ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಘೋಷಣೆ ಮಾಡಿರುವುದರಿಂದ ಅವರ ಮಾತಿಗೆ ಬೆಲೆ ಕೊಟ್ಟು, ಸಚಿವರ ಮನೆ ಎದುರು ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ. ಒಂದು ವೇಳೆ ನಮ್ಮ ಬೇಡಿಕೆಗೆ ಸ್ಪಂದನೆ ಸಿಗದಿದ್ದರೇ ಸಚಿವರ ಮನೆ ಎದುರು ಧರಣಿ ನಡೆಸುವುದು ನಿಶ್ಚಿತ’ ಎಂದರು.
‘ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡುವ ಜೊತೆಗೆ ಶೀಘ್ರವಾಗಿ ಕಾಲೇಜು ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಬೇಕು, ಅಗತ್ಯ ಕ್ರಮಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯೊಳಗೆ ಕಾಲೇಜು ಕಾರ್ಯಾರಂಭ ಮಾಡಬೇಕು’ ಎಂದು ಆಗ್ರಹಿಸಿದರು.
‘ಹೋರಾಟದ ವೇದಿಕೆಯು ಪಕ್ಷಾತೀತ, ಜಾತ್ಯತೀತವಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಎಪಿ, ಸಿಪಿಎಂ, ಸಿಪಿಐ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು, ದಲಿತಪರ ಸಂಘಟನೆಗಳು, ರೈತ ಸಂಘಟನೆ, ಕನ್ನಡಪರ ಸಂಘಟನೆಗಳು ಸೇರಿದಂತೆ ಜಿಲ್ಲೆಯ ಎಲ್ಲ ಸಂಘ, ಸಂಸ್ಥೆಗಳ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡು ಬೆಂಬಲಿಸಿದ್ದಾರೆ. ಈ ಹೋರಾಟ ಯಾವ ಪಕ್ಷ, ಸರ್ಕಾರ ಅಥವಾ ವ್ಯಕ್ತಿ ವಿರುದ್ಧವಲ್ಲ. ವೇದಿಕೆಯಲ್ಲಿ ಮಾತನಾಡಿದ ಕೆಲವರು ರಾಜಕೀಯ ಆರೋಪ ಮಾಡಿರಬಹುದು, ಅದಕ್ಕೂ ಹೋರಾಟಕ್ಕೂ ಸಂಬಂಧವಿಲ್ಲ. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದರು.
ಹೋರಾಟ ಸಮಿತಿ ಪ್ರಮುಖರಾದ ಅರವಿಂದ ಕುಲಕರ್ಣಿ, ಅಕ್ರಂ ಮಾಶ್ಯಾಳಕರ, ಎಚ್.ಟಿ.ಭರತ್‌ಕುಮಾರ್, ಲಲಿತಾ ಬಿಜ್ಜರಗಿ, ಸುರೇಶ ಬಿಜಾಪುರ, ಶ್ರೀನಾಥ ಪೂಜಾರಿ, ಬೋಗೇಶ ಸೋಲಾಪುರ, ಸುರೇಖಾ ರಜಪೂತ, ಕೆ.ಎಫ್. ಅಂಕಲಗಿ, ಗೀತಾ ಎಚ್. ಇದ್ದರು.
ವಿಜಯಪುರಕ್ಕೆ ಪಿಪಿಪಿ ಕೈಬಿಟ್ಟಿದ್ದೇವೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುತ್ತೇವೆ ಎಂದು ಸಿಎಂ ಸಚಿವರು ಕೇವಲ ಬಾಯ್ಮಾತಲ್ಲಿ ಹೇಳಿದರೆ ಸಾಲದು ಸಚಿವ ಸಂಪುಟದಲ್ಲಿ ಅಧಿಕೃತವಾಗಿ ಘೋಷಣೆಯಾಗಬೇಕು–ವಿ.ಸಿ. ನಾಗಠಾಣ ಸದಸ್ಯ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ
ಪಿಪಿಪಿ ಬಿಜೆಪಿ ಕೂಸಿರಬಹುದು. ಆದರೆ ಕಾಂಗ್ರೆಸ್ ಸರ್ಕಾರ ಆ ಕೂಸನ್ನು ಎತ್ತಿ ಆಡಿಸುತ್ತಿರುವುದು ಏಕೆ? ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇಡೀ ಕಾಂಗ್ರೆಸಿಗರು ಖಾಸಗಿಕರಣದ ವಿರುದ್ಧ ಧ್ವನಿ ಎತ್ತಿರುವಾಗ ರಾಜ್ಯ ಸರ್ಕಾರ ಪಿಪಿಪಿ ಪರ ಏಕೆ?–ಅನಿಲ ಹೊಸಮನಿಸದಸ್ಯ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ ಹತ್ತಾರು ಮಹಿಳೆಯರು ಮೈಕೊರೆಯುವ ಚಳಿಯಲ್ಲಿ ಬುಧವಾರ ಆಹೋರಾತ್ರಿ ಧರಣಿ ನಡೆಸುವ ಮೂಲಕ ಗಮನ ಸೆಳೆದರು. ಮೈಕೊರೆಯುವ ಚಳಿಯಲ್ಲಿ ಜನರು ಮನೆಯಿಂದ ಹೊರಬರಲು ಅಂಜುವ ಸ್ಥಿತಿಯಲ್ಲಿ ಅದರಲ್ಲೂ ರಾತ್ರಿ ವೇಳೆ ಲಲಿತಾ ಬಿಜ್ಜರಗಿ ನೇತೃತ್ವದಲ್ಲಿ ಮಹಿಳೆಯರು ರಾತ್ರಿಯಿಡೀ ಹೋರಾಟ ಮಾಡಿರುವುದು ಮೆಚ್ಚುಗೆಗೆ ಕಾರಣವಾಯಿತು. ತಡರಾತ್ರಿ ವರೆಗೂ ಕ್ರಾಂತಿಗೀತೆಗಳನ್ನು ಹಾಡುತ್ತಾ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು. ಹೋರಾಟ ಸ್ಥಳದಲ್ಲೇ ಬೆಂಕಿ ಕಾಯಿಸಿ ಚಳಿಯಿಂದ ರಕ್ಷಣೆ ಪಡೆದರು.
ಆಹೋರಾತ್ರಿ ಧರಣಿಯಲ್ಲಿ ಸುರೇಖಾ ರಜಪೂತ ಮೀನಾಕ್ಷಿ ನೀಲಾಂಬಿಕ ಬಿರಾದಾರ ಸುನಿತಾ ಮೋರೆ ಜಯಶ್ರೀ ಚಲವಾದಿ ಕಾಮಿನಿ ಕಸಬೇ ಸೋನಾಕ್ಷಿ ರೇಣುಕಾ ಕೋಟ್ಯಾಳ ಮಾಲನ್ ಮುಜಾವರ್ ಹುಸೇನ್ ಬಾನು ಮಂಜುಳಾ ಸುಬೇದಾರ್ ಅನಸೂಯ ಗೋರ್ಪಡೆ ಕಾಶಿಬಾಯಿ ಕಾಂಬಳೆ ಭಾಗ್ಯಶ್ರೀ ಗೀತಾ ಪಾಟೀಲ್ ಕುಸುಮಾ ಹಜಾರಿ ಲಾಲ್ ಬಿ ವಾಲಿಕಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.