
ಎಂ.ಬಿ.ಪಾಟೀಲ
ವಿಜಯಪುರ: ‘ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಮುಂದಾಳತ್ವವವನ್ನು ನಾನೇ ವಹಿಸಿಕೊಳ್ಳುತ್ತೇನೆ. ಜಿಲ್ಲೆಗೆ ಕಾಲೇಜನ್ನು ಮಂಜೂರು ಮಾಡಿಸಿಕೊಂಡು ಬರಲು ಎಲ್ಲ ಪ್ರಯತ್ನ ಮಾಡುತ್ತೇನೆ, ಈ ಸಮಸ್ಯೆಯನ್ನು ನಾನೇ ಬಗೆಹರಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ನಡೆಯುತ್ತಿರುವ ಹೋರಾಟದ ಕುರಿತು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಸಚಿವರ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ‘ನಾನು ಕೂಡ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಪರವಾಗಿದ್ದೇನೆ, ಈ ವಾರದಲ್ಲೇ ಮತ್ತೊಮ್ಮೆ ಮುಖ್ಯಮಂತ್ರಿಯವರ ಬಳಿಗೆ ಹೋರಾಟಗಾರರ ನಿಯೋಗ ಕರೆದೊಯ್ದು, ಅವರನ್ನು ಒಪ್ಪಿಸುತ್ತೇನೆ’ ಎಂದರು.
‘ಉದ್ದೇಶಿತ ಪಿಪಿಪಿ ಮಾದರಿ ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.
‘ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂಬ ಜಿಲ್ಲೆಯ ಜನತೆಯ ಬೇಡಿಕೆ, ಹೋರಾಟದ ಕುರಿತು ಈಗಾಗಲೇ ಸಚಿವ ಸಂಪುಟ ಸಭೆ, ವಿಧಾನಸಭಾ ಅಧಿವೇಶನದಲ್ಲಿ ಚರ್ಚೆಯಾಗಿದೆ. ಮುಖ್ಯಮಂತ್ರಿಯವನ್ನು ಒಮ್ಮೆ ಭೇಟಿಯಾಗಿ ಚರ್ಚಿಸಲಾಗಿದೆ. ಮುಖ್ಯಮಂತ್ರಿ ಅವರೂ ಸಹ ಪಿಪಿಪಿ ಕೈಬಿಡುವುದಾಗಿ ಹೇಳಿದ್ದಾರೆ’ ಎಂದರು.
‘ಇಂದೇ ಸರ್ಕಾರಿ ವೈದ್ಯಕೀಯ ಕಾಲೇಜು ಆಗಬೇಕು, ನಾಳೆಯೇ ಆಗಬೇಕು, ಲಿಖಿತವಾಗಿ ಬರೆದುಕೊಡಬೇಕು ಎಂದು ಹೋರಾಟಗಾರರು ಸರ್ಕಾರಕ್ಕೆ ಹೇಳುವುದು ಸರಿಯಲ್ಲ. ಕಾಲೇಜು ಸ್ಥಾಪನೆಗೆ ಕಾಲಾವಕಾಶ ಬೇಕಾಗುತ್ತದೆ’ ಎಂದು ಹೇಳಿದರು.
‘ಸಿಎಂ ಬಳಿಗೆ ಈ ಹಿಂದೆ ನಿಯೋಗ ಕರೆಯ್ದಾಗ ಹೋರಾಟಗಾರರಿಗೆ ಎಲ್ಲಿಯೂ ಅವಮಾನ ಆಗಿಲ್ಲ. ಸಿಎಂ ಅವರು ಅಂದು ಕಾರ್ಯಕ್ರಮಗಳ ಒತ್ತಡದಲ್ಲಿ ಇದ್ದರು. ಅವರ ಪತ್ನಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಇದ್ದರು. ಹೀಗಾಗಿ ನಿಯೋಗದೊಂದಿಗೆ ಚರ್ಚಿಸಲು ಹೆಚ್ಚು ಸಮಯ ಇರಲಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ರಾಜ್ಯ ಸರ್ಕಾರ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನೇಕರು ವಿರೋಧ ಮಾಡುತ್ತಿದ್ದಾರೆ. ಆದರೆ, ಈಗ ಕೇಂದ್ರ ಸರ್ಕಾರವೇ ರಾಷ್ಟ್ರದಾದ್ಯಂತ ಪಿಪಿಪಿ ಮಾದರಿಯಲ್ಲಿ 11 ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿದೆ. ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಹೇಳಿದರು.
‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರು ಪೇಪೆಂಟ್ ಗಿರಾಕಿಗಳು’ ಎಂಬ ಶಾಸಕ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ ಅವರು, ‘ಹೋರಾಟಗಾರರನ್ನು ಅವಮಾನಿಸುವುದು ಸರಿಯಲ್ಲ, ಯತ್ನಾಳ ಯಾರನ್ನು ಬಿಟ್ಟಿದ್ದಾರೆ, ಇತ್ತೀಚೆಗೆ ನನ್ನ ವಿರುದ್ಧವೂ ಆರೋಪ ಮಾಡಿದ್ದಾರೆ. ಅವರ ಆರೋಪಗಳಿಗೆ ಉತ್ತರಿಸಲು ಹೋದರೆ ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಅಂತ ದಿನಕ್ಕೆ ನಾಲ್ಕು ಬಾರಿ ಪತ್ರಿಕಾಗೋಷ್ಠಿ ಮಾಡಬೇಕಾಗುತ್ತದೆ’ ಎಂದು ಕುಟುಕಿದರು.
ಮೂರ್ತಿ ಅನಾವರಣ ಜ.9ಕ್ಕೆ: ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾಗಿರುವ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಮತ್ತು ನಾಮಫಲಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 9ಕ್ಕೆ ಅನಾವರಣ ಮಾಡಲಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
ಅದೇ ದಿನ ಮುಖ್ಯಮಂತ್ರಿಯವರು ವಿಜಯಪುರ ಸೈಕ್ಲಿಂಗ್ ವೆಲೋಡ್ರೋಮ್ ಅನ್ನು ಉದ್ಘಾಟಿಸಲಿದ್ದಾರೆ. ಪಾಲಿಕೆಗೆ ನೀಡಿರುವ ₹150 ಕೋಟಿ ಅನುದಾನದ ವಿವಿಧ ಕಾಮಗಾರಿಗಳಿಗೆ ಹಾಗೂ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಕಿತ್ತೂರು ರಾಣಿ ಚನ್ನಮ್ಮ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಅಂದಿನ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗರೆಡ್ಡಿ, ಶಿವಾನಂದ ಪಾಟೀಲ ಹಾಗೂ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ ಜಿಲ್ಲಾಧಿಕಾರಿ ಡಾ.ಆನಂದ ಕೆ., ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ, ಕೆಕೆಆರ್‌ಟಿಸಿ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಕಾಂಗ್ರೆಸ್ ಮುಖಂಡರಾದ ವಿದ್ಯಾರಾಣಿ ತುಂಗಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.