ADVERTISEMENT

ವಿಜಯಪುರ: ‘ಕೌಶಲ್ಯ ಕರ್ನಾಟಕ’ ಯೋಜನೆಗೆ ಗರ

ಕಾರ್ಯಾದೇಶ ವಿಳಂಬ: ಔದ್ಯೋಗಿಕ ಕೌಶಲ ತರಬೇತಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2025, 4:48 IST
Last Updated 19 ಏಪ್ರಿಲ್ 2025, 4:48 IST
LOGO
LOGO   

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ಗ್ರಾಮೀಣ ಮತ್ತು ತಳಮಟ್ಟದ ನಿರುದ್ಯೋಗಿಗಳಿಗೆ ಅವಶ್ಯವಾಗಿದ್ದ ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಮುಖ್ಯಮಂತ್ರಿಗಳ ‘ಕೌಶಲ್ಯ ಕರ್ನಾಟಕ’ ಕಾರ್ಯಕ್ರಮಕ್ಕೆ ಸಕಾಲದಲ್ಲಿ ಕಾರ್ಯಾದೇಶ ನೀಡದ ಕಾರಣ ತರಬೇತಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಸಾವಿರಾರು ನಿರುದ್ಯೋಗಿಗಳಿಗೆ ದಿಕ್ಕು ತೋಚದಂತಾಗಿದೆ.

‘ನಿರುದ್ಯೋಗಿಗಳನ್ನು ಗುರುತಿಸಿ ಮತ್ತು ಶಿಕ್ಷಣ ಮೊಟಕುಗೊಳಿಸಿ ಉದ್ಯೋಗ ಪಡೆಯುವುದರಲ್ಲಿ ಹಿಂದೆ ಇರುವ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಅವರಿಗೆ ಇಷ್ಟವಾದ ವೃತ್ತಿ ಕೌಶಲದ ತರಬೇತಿ ನೀಡಿ ಸ್ವಯಂ ಉದ್ಯೋಗ ಮಾಡಲು ಹಾಗೂ ಸ್ಥಳೀಯವಾಗಿ ಕೆಲಸ ಮಾಡಲು ಅನೂಕೂಲವಾಗಿದ್ದ ಯೋಜನೆಯನ್ನು ಸರ್ಕಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ’ ಎಂಬ ಆರೋಪಗಳು ಕೇಳಿ ಬಂದಿವೆ.

ಎಂಟನೇ ತರಗತಿ, ಎಸ್.ಎಸ್.ಎಲ್.ಸಿ., ಪಿಯುಸಿ ಓದಿದ ಅಭ್ಯರ್ಥಿಗಳಿಗೆ ಡಾಟಾ ಎಂಟ್ರಿ ಆಪರೇಟರ್, ಐಟಿ ಹೆಲ್ಪ್‌ಡೆಸ್ಕ್ ಅಟೆಂಡೆಂಟ್, ಟೈಲರಿಂಗ್ ವೃತ್ತಿ ತರಬೇತಿ, ಫ್ಯಾಶನ್ ಡಿಸೈನರ್, ಆಟೊಮೋಟಿವ್ ಸೇಲ್ಸ್ ಲೀಡ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತಿತ್ತು.

ADVERTISEMENT

ಉತ್ತರ ಕರ್ನಾಟಕ ಭಾಗದಲ್ಲಿನ ಯುವಜನರಿಗೆ ಉದ್ಯೋಗ ನೀಡುವ ಯಾವುದೇ ದೊಡ್ಡ ಕಂಪನಿಯಿಲ್ಲ. ಬೆಂಗಳೂರಿನಂತಹ ಮಹಾನಗರದಲ್ಲಿ ಉದ್ಯೋಗ ಮಾಡಲು ಹೋದರೆ ಅಲ್ಲಿ ಜೀವನವೆಚ್ಚ ದುಬಾರಿ. ಈ ಯೋಜನೆಯನ್ನು ನಂಬಿ ಹೂಡಿಕೆ ಮಾಡಿರುವ ತರಬೇತಿ ಸಂಸ್ಥೆಗಳ ಮುಖ್ಯಸ್ಥರುಗಳು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

‘ಸರ್ಕಾರದ ನಿಯಮಾನುಸಾರ ತರಬೇತಿ ಕೇಂದ್ರಗಳಿಗೆ ಲಕ್ಷಗಟ್ಟಲೆ ರೂಪಾಯಿ ಹೂಡಿಕೆ ಮಾಡಿದ್ದೇವೆ. ಅಲ್ಲದೆ ಅಧಿಕಾರಿಗಳು, ತರಬೇತಿ ಸಂಸ್ಥೆಗಳ ಮುಖ್ಯಸ್ಥರಿಗೆ  ಮೂರು ವರ್ಷಗಳಿಂದ ಅನುದಾನ ನೀಡದೇ ಸತಾಯಿಸಲಾಗುತ್ತಿದೆ. ತರಬೇತಿಗಳು ನಡೆಯಲಿವೆ ಎಂದು ನಂಬಿಸುತ್ತ ತರಬೇತಿಗೆ ಸಂಬಂಧಿಸಿದ ಎಲ್ಲ ಪರಿಶೀಲನೆ ಮತ್ತು ತರಬೇತಿ ಪಡೆದ ನಂತರ ಉದ್ಯೋಗವನ್ನು ನೀಡಲು ದೃಢೀಕರಿಸುವುದಕ್ಕಾಗಿ ಸ್ಥಳೀಯ ಮತ್ತು ದೊಡ್ಡ ದೊಡ್ದ ಕಂಪನಿ, ಕೈಗಾರಿಕೆಗಳಿಗೆ ಲೆಟರ್ ಆಫ್ ಇಂಟೆಂಟ್ (ಎಲ್ಒಐ) ನೀಡಲು ಕೋರಿ ಎಂಟು ತಿಂಗಳುಗಳು ಕಳೆದರೂ ಯಾವುದೇ ತರಬೇತಿಗೆ ಅನುಮತಿ ನೀಡುತ್ತಿಲ್ಲ’ ಎನ್ನುವುದು ಕೇಂದ್ರಗಳನ್ನು ನಡೆಸುತ್ತಿರುವವರ ಆರೋಪ.

‘ರಾಜ್ಯದಲ್ಲಿ ಸುಮಾರು 500ಕ್ಕೂ ಹೆಚ್ಚಿನ ತರಬೇತಿ ಸಂಸ್ಥೆಗಳ ಮುಖಂಡತ್ವದಲ್ಲಿ 1,200ಕ್ಕೂ ಹೆಚ್ಚಿನ ತರಬೇತಿ ಕೇಂದ್ರಗಳು 20 ಸಾವಿರಕ್ಕೂ ಅಧಿಕ ಸಿಬ್ಬಂದಿ ಬೀದಿಗೆ ಬಿದ್ದಂತಾಗಿದೆ. ಶೇ 90ರಷ್ಟು ತರಬೇತಿ ಸಂಸ್ಥೆಗಳು ಖಾಸಗಿ ಕಟ್ಟಡದಲ್ಲಿ ತರಬೇತಿ ಸಂಸ್ಥೆಗಳನ್ನು ನಡೆಸುತ್ತಿದ್ದು, ಬಾಡಿಗೆ ಕಟ್ಟಲು ಹಾಗೂ ವಿದ್ಯುತ್ ಬಿಲ್ ಮತ್ತಿತರ ಖರ್ಚು ವೆಚ್ಚ ನಿಭಾಯಿಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಮುಖ್ಯಮಂತ್ರಿಗಳ ಕೌಶಲ ಕರ್ನಾಟಕ ತರಬೇತಿ ಕೇಂದ್ರಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಶರಣಬಸ್ಸು ಚಲವಾದಿ.

ಸಮಸ್ಯೆಗಳ ಪರಿಹಾರಕ್ಕೆ ಒಕ್ಕೂಟದಿಂದ 2023ರಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದಾಗ ಇಲಾಖೆಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಶೀಘ್ರವೇ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಈವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಮುಖ್ಯಮಂತ್ರಿಗಳಿಗೂ ಮೂರು ಬಾರಿ ಮನವಿ ಮಾಡಿದರೂ ನಿರ್ಲಕ್ಷಿಸಿದ್ದಾರೆ ಎಂದು ಅವರು ಆಕ್ಷೇಪಿಸಿದ್ದಾರೆ. ನಿಗಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ವಿಜಯಪುರ ಜಿಲ್ಲೆಯವರೇ ಆದ ಕಾಂತಾ ನಾಯಕ ಸಮಸ್ಯೆ ಪರಿಹರಿಸಲು ವಿಫಲರಾಗಿದ್ದು, ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರುತ್ತಿದ್ದಾರೆ.

ರಬೇತಿ ಕೇಂದ್ರಗಳಿಗೆ ಕಾರ್ಯಾದೇಶ ನೀಡುವ ವಿಚಾರ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು. ಈ ಬಗ್ಗೆ ನಾನು ಏನೂ ಹೇಳಲಾರೆ
ಕಾಂತಾ ನಾಯಕ ಅಧ್ಯಕ್ಷೆ ಕೌಶಲ್ಯಾಭಿವೃದ್ಧಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.