ನಾಲತವಾಡ: ಪಟ್ಟಣದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಮುಖ್ಯ ಪ್ರವೇಶ ದ್ವಾರ ಪ್ರತಿ ಸೋಮವಾರ ಸಂತೆ ದಿನ ಬಂದ್ ಆಗುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ನಿತ್ಯ ಸಹಸ್ರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರುತ್ತಿರೆ. ಆದರೆ, ಸೋಮವಾರ ಈ ಸಂಖ್ಯೆ ದ್ವಿಗುಣ ಕೊಂಡಿರುತ್ತದೆ. ನಿಲ್ದಾಣದ ಒಳಗೆ ಹೋಗಲು ಮತ್ತು ಹೊರ ಬರಲು ಪರದಾಡುವಂತಾಗಿದೆ.
ಬಸ್‌ಗಳ ಆಗಮನ ಮತ್ತು ನಿರ್ಗಮನದ ದಾರಿಯಲ್ಲಿಯೇ ಪ್ರಯಾಣಿಕರು ನಡೆದಾಡುವಂತಾಗಿದೆ. ಬಸ್‌ಗಳು ಬರುವ ಹಾಗೂ ಹೋಗುವಾಗ ಆಯ ತಪ್ಪಿದರೆ ಪ್ರಯಾಣಿಕರಿಗೆ ತೊಂದರೆ ತಪ್ಪಿದ್ದಲ್ಲ. ಬಸ್‌ಗಳಷ್ಟೇ ಅಲ್ಲ ಬಹಳಷ್ಟು ಸಂಖ್ಯೆಯಲ್ಲಿ ಖಾಸಗಿ ವಾಹನಗಳೂ ಇದೇ ದಾರಿಯನ್ನು ಬಳಸುತ್ತಿರುವುದರಿಂದ ಪಡಿಪಾಟಲು ಅಷ್ಟಿಷ್ಟಲ್ಲ ಎಂದು ಪ್ರಯಾಣಿಕರು ಸಮಸ್ಯೆ ತೋಡಿಕೊಂಡರು.
ಆಗಿದ್ದೇನು:
ಪ್ರಯಾಣಿಕರಿಗಾಗಿಯೇ ಇರುವ ಮುಖ್ಯ ಪ್ರಮೇಶ ದ್ವಾರಕ್ಕೆ ಅಡ್ಡಲಾಗಿ ಒಳಗೆ ಹೋಗುವುದಕ್ಕೂ ಜಾಗ ಇಲ್ಲದಂತೆ ಮೆಟ್ಟಿಲುಗಳ ಮುಂದೆ ಸೋಮವಾರ ಸಂತೆಯ ದಿನ ಮಿಠಾಯಿ ಅಂಗಡಿಗಳನ್ನು ಸಾಲಾಗಿ ಹಾಕಿಕೊಂಡು ಭರ್ಜರಿ ವ್ಯಾಪಾರ ಮಾಡುವವರಿಂದ ದಾರಿ ಬಂದ್ ಆಗುತ್ತದೆ. ಇದರಿಂದ ಒಳ ಬರಲು ಮತ್ತು ಹೊರ ಹೋಗಲು ಅಪಾಯಕಾರಿ ಮಾರ್ಗ ಅನುಸರಿಸಬೇಕಿದೆ. ಒಂದು ವೇಳೆ ಈ ಅಂಗಡಿಯ ಪಕ್ಕದಲ್ಲಿಯೇ ಕೊಸರಾಡಿ ಹೋದರೆ ಕಾಯ್ದ ಎಣ್ಣೆ ಕಡಾಯಿಗೆ ಪ್ರಯಾಣಿಕರು ಬೀಳುವ ಸಾಧ್ಯತೆ ಇದೆ!
ಉಪಯೋಗ ಇಲ್ಲದ ಮುಖ್ಯ ಪ್ರವೇಶ ದ್ವಾರ ಇರುವುದಾದರೂ ಏತಕ್ಕೆ? ಎಂದು ಲೊಟಗೇರಿ ಗ್ರಾಮದ ಪ್ರಯಾಣಿಕರಾದ ಲಕ್ಕಪ್ಪ ನಾಗರಬೆಟ್ಟ ಪ್ರಶ್ನಿಸಿದರು.
ಪ್ರಯಾಣಿಕರು ಏರುವ ಪಾವಟಿಗೆಗೆ ಅಡ್ಡಲಾಗಿ ಬಜಿ, ಜಿಲೇಬಿ, ಸೇವು ಸೇರಿದಂತೆ ಅನೇಕ ಪದಾರ್ಥಗಳನ್ನು ಕರಿದು ಮಾರಾಟ ಮಾಡುವ ಅಂಗಡಿಗಳನ್ನು ಹಾಕ ಬೇಡಿ ಎಂದು ಸ್ಥಳೀಯ ಬಸ್ ಕಂಟ್ರೋಲರ್ ಹೇಳಿದರೆ ಅಂಗಡಿಕಾರರು ಜಗಳಕ್ಕಿಳಿಯುತ್ತಾರೆ.
‘ನಿಮ್ಮದು ಏನಿದ್ದರೂ ಬಸ್ ನಿಲ್ದಾಣದ ಒಳಗೆ ಅಧಿಕಾರ. ಬಸ್ ನಿಲ್ದಾಣದ ಪಾವಟಿಗೆ ದಾಟಿ ನಿಮ್ಮ ಅಧಿಕಾರವಿಲ್ಲ’ ಎಂದು ಗದರಿಸಿದ ಪ್ರಸಂಗವೂ ನಡೆದಿದೆ.
ಈ ಕುರಿತು ಮಾತನಾಡಿದ ಮಿಠಾಯಿ ವ್ಯಾಪಾರಿಯೊಬ್ಬರು, ಬೇರೆ ಕೆಲಸವಿಲ್ಲದ ಕಾರಣ ಕರಿದ ಕಮರು ಪದಾರ್ಥಗಳನ್ನು ಘಾಟಿನಲ್ಲಿ ತಯಾರಿಸಿ ಜೀವನ ಸಾಗಿಸುತ್ತಿದ್ದೇವೆ. ಸಂತೆ ವ್ಯಾಪಾರಕ್ಕೆ ಪರ್ಯಾಯ ಜಾಗವಿಲ್ಲ. ಇದಕ್ಕೆ ಅಧಿಕಾರಿಗಳೇ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಮಕ್ಕಳು ಮಹಿಳೆಯರು ವೃದ್ಧರು ಬಸ್ ನಿಲ್ದಾಣದ ಒಳಳಕ್ಕೆ ಹೋಗಬೇಕೆಂದರೆ ಬಹಳಷ್ಟು ತೊಂದರೆ ಇದೆ. ಪೋಲಿಸ್ ಅಧಿಕಾರಿಗಳು ಗಮನಹರಿಸಬೇಕುರಾಜಶೇಖರ ಜಾವೂರ ನಾಲತವಾಡ
ಮುಖ್ಯದ್ವಾರದ ಮುಂದೆ ಸೋಮವಾರ ಅಂಗಡಿ ಹಾಕದಂತೆ ಈ ಹಿಂದೆಯೆ ಬೀದಿ ವ್ಯಾಪಾರಿಗಳಿಗೆ ಬಸ್ ಕಂಟ್ರೋಲರ್ ಸಲ ಸೂಚಿಸಿದ್ದರು. ಕೇಳುತ್ತಿಲ್ಲ. ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೈಗೊಳ್ಳಬೇಕುಬಾಬು ಬಡಿಗೇರ ಎಂಜಿನಿಯರ್ ನಾಲತವಾಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.