ADVERTISEMENT

ವಿಜಯಪುರ | ಕಸ ಕಂಡರೆ ಚಿತ್ರ ಕಳುಹಿಸಿ ಅಭಿಯಾನ: ಜಿಲ್ಲಾಧಿಕಾರಿ ಡಾ.ಆನಂದ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:26 IST
Last Updated 21 ಆಗಸ್ಟ್ 2025, 5:26 IST
ವಿಜಯಪುರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಕಸ ಕಂಡರೆ ಫೋಟೋ ಕಳುಹಿಸಿ ಅಭಿಯಾನದ ವಾಟ್ಸ್‌ ಆ್ಯಪ್‌ ನಂಬರ್‌ಗಳು 
ವಿಜಯಪುರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಕಸ ಕಂಡರೆ ಫೋಟೋ ಕಳುಹಿಸಿ ಅಭಿಯಾನದ ವಾಟ್ಸ್‌ ಆ್ಯಪ್‌ ನಂಬರ್‌ಗಳು    

ವಿಜಯಪುರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬಡಾವಣೆ, ರಸ್ತೆ ಬದಿ, ಉದ್ಯಾನ, ಖಾಲಿ ನಿವೇಶನಗಳಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸಾರ್ವಜನಿಕರ ಸಹಕಾರದೊಂದಿಗೆ ದೂರು ಸ್ವೀಕರಿಸಿದ 24 ಗಂಟೆಯೊಳಗೆ ವಿಲೇವಾರಿ ಮಾಡಲು ‘ಕಸ ಕಂಡರೆ ಫೋಟೋ ಕಳುಹಿಸಿ’ ಎಂಬ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ ಕೆ. ತಿಳಿಸಿದ್ದಾರೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಈ ಅಭಿಯಾನದ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸುವಂತೆ ಅವರು ಸೂಚನೆ ನೀಡಿದ್ದಾರೆ.

‘ಕಸ ಕಂಡರೆ ಫೋಟೋ ಕಳುಹಿಸಿ’ ಅಭಿಯಾನ ಯಶಸ್ವಿಗೊಳಿಸಲು ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಂಡಾಗ ತಕ್ಷಣದ ಫೋಟೋ ಮೂಲಕ ದೂರು ಸಲ್ಲಿಸುವ ವ್ಯವಸ್ಥೆ ಕಲ್ಪಿಸುವುದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛ ನಗರ ನಿರ್ಮಾಣ, ದೂರು ಬಂದ 24 ಗಂಟೆಯೊಳಗೆ ಪರಿಹಾರ ಒದಗಿಸುವ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವುದು, ದೂರುಗಳಿಂದ ಬಂದ ಡೇಟಾವನ್ನು ವಿಶ್ಲೇಷಿಸಿ ಬ್ಲಾಕ್‍ಸ್ಪಾಟ್ ಏರಿಯಾ ಗುರುತಿಸಿ ಭವಿಷ್ಯದ ಕ್ಲೀನಿಂಗ್ ಪ್ಲಾನ್‍ನಲ್ಲಿ ಸೇರಿಸುವ ಅಭಿಯಾನದ ಉದ್ದೇಶವಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕಸ ಕಂಡರೆ ಫೋಟೋ ಕಳುಹಿಸಿ’ ಮೊಬೈಲ್‌ ಸಂಖ್ಯೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದು, ಫೇಸ್‍ಬುಕ್, ವಾಟ್ಸ್‌ ಆ್ಯಪ್‌, ಇನ್ಸ್ಟಾಗ್ರಾಂನಲ್ಲಿ ಪೋಸ್ಟರ್, ವಿಡಿಯೋ ಶೇರ್ ಮಾಡುವುದು, ನಗರ ಸ್ಥಳೀಯ ಸಂಸ್ಥೆಯ ಅಧಿಕೃತ ವೆಬ್‍ಸೈಟ್-ಮೆಸೆಜ್ ಫಾರ್ಮನಲ್ಲಿ ಮಾಹಿತಿ, ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು, ವಿವಿಧ ಕಡೆಗಳಲ್ಲಿ ಜಾಗೃತಿಗೆ ಫ್ಲೆಕ್ಸ್ ಅಳವಡಿಸುವುದು, ಕಮ್ಯೂನಿಟಿ ಮೊಬಲೈಜರ್ ಬಳಕೆ ಮಾಡಿಕೊಂಡು ಡೋರ್-ಟು-ಡೋರ್ ಕ್ಯಾಂಪಸ್ ಮೂಲಕ ಪ್ರಚಾರ ಮಾಡುವಂತೆ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ ಎಂದರು.

ದೂರು ಸಲ್ಲಿಕೆ ವಿಧಾನ:

ಸಾರ್ವಜನಿಕರು ಫೋಟೋ ತೆಗೆದು ವಾಟ್ಸ್‌ ಆ್ಯಪ್‌ ಸಂಖ್ಯೆಗೆ ಕಳುಹಿಸುವ ಸಂದರ್ಭದಲ್ಲಿ ಸ್ಥಳದ ಹೆಸರು ಅಥವಾ ಲ್ಯಾಂಡ್ ಮಾರ್ಕ್, ಕಸದ ಪ್ರಕಾರ (ಹೊರಬಿದ್ದ ತ್ಯಾಜ್ಯ, ಪ್ಲಾಸ್ಟಿಕ್, ಮಲಮೂತ್ರ, ನಿರ್ಮಾಣ ತ್ಯಾಜ್ಯ ಇತ್ಯಾದಿ) ನಮೂದಿಸಬೇಕು.

ಉತ್ತಮ ಸ್ಥಳೀಯ ಸಂಸ್ಥೆಗೆ ಪುರಸ್ಕಾರ:

ಈ ಅಭಿಯಾನದಲ್ಲಿ ಮೊದಲ ಮೂರು ತಿಂಗಳಲ್ಲಿ ಉತ್ತಮ ಸಾಧನೆ ಮಾಡಿದ ತಂಡ ಹಾಗೂ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ಜಿಲ್ಲಾಡಳಿತದಿಂದ ಪುರಸ್ಕಾರ ಮಾಡಲಾಗುವುದು. ಸರಿಯಾದ ಮತ್ತು ಹೆಚ್ಚು ದೂರು ಕಳುಹಿಸಿದ ನಾಗರಿಕರಿಗೆ ‘ಕ್ಲೀನ್ ಸಿಟಿ ಚಾಂಪಿಯನ್’ ಪ್ರಶಸ್ತಿ ಪತ್ರವನ್ನು ನಗರ ಸ್ಥಳೀಯ ಸಂಸ್ಥೆಯಿಂದ ನೀಡಿ ವೆಬ್‍ಸೈಟ್‍ದಲ್ಲಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.