ADVERTISEMENT

ವಿಜಯಪುರ ಲೋಕಸಭೆ ಕ್ಷೇತ್ರ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

​ಪ್ರಜಾವಾಣಿ ವಾರ್ತೆ
Published 5 ಮೇ 2024, 7:16 IST
Last Updated 5 ಮೇ 2024, 7:16 IST

ವಿಜಯಪುರ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಬಹಿರಂಗ ಪ್ರಚಾರಕ್ಕೆ ಮೇ 5ರಂದು ಸಂಜೆ 6ಕ್ಕೆ ತೆರೆ ಬೀಳಲಿದೆ.

‘ಭಾನುವಾರ ಸಂಜೆ 6ರೊಳಗೆ ಎಲ್ಲ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಪರ ಪ್ರಚಾರಕರು ತಮ್ಮ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು. ಕ್ಷೇತ್ರದ ಮತದಾರರಲ್ಲದ ನಾಯಕರು ಜಿಲ್ಲೆ ಬಿಟ್ಟು ತೆರಳಬೇಕು. ನಂತರದ 48 ಗಂಟೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಟಿ.ಭೂಬಾಲನ್‌ ಮಾಹಿತಿ ನೀಡಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಎಂಟು ಅಭ್ಯರ್ಥಿಗಳು ಕಣದಲ್ಲಿ ಇದ್ದು, ಮೇ 7ರಂದು ಜಿಲ್ಲೆಯ ಮತದಾರರು ಭವಿಷ್ಯ ಬರೆಯಲಿದ್ದಾರೆ.

ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ಪರವಾಗಿ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ಶಾಸಕರಾದ ಯಶವಂತರಾಯಗೌಡ ಪಾಟೀಲ, ಅಶೋಕ ಮನಗೂಳಿ, ಸಿ.ಎಸ್‌.ನಾಡಗೌಡ, ವಿಠಲ ಕಟಕಧೋಂಡ ಹಾಗೂ ಶಾಸಕ ಲಕ್ಷ್ಮಣ ಸವದಿ, ಸಚಿವರಾದ ಎಚ್‌.ಸಿ.ಮಹಾದೇವಪ್ಪ, ಸಂತೋಷ ಲಾಡ್‌, ಎಚ್‌.ಕೆ.ಪಾಟೀಲ ಮತ್ತಿತರರು ಭರ್ಜರಿ ಪ್ರಚಾರ ನಡೆಸಿ, ಚುನಾವಣಾ ಕಣ ರಂಗೇರುವಂತೆ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ‍ರಮೇಶ ಜಿಗಜಿಣಗಿ ಪರವಾಗಿ ಬಾಗಲಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ, ಮಾಜಿ ಸಚಿವರಾದ ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಸೇರಿದಂತೆ ಅನೇಕರು ಪ್ರಚಾರ ನಡೆಸಿ, ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಜಾತಿ ಸಭೆ, ಸಮಾವೇಶಗಳು, ವಿವಿಧ ಸಂಘಟನೆಗಳ ಸಭೆಗಳು ಸೇರಿದಂತೆ ಪಾದಯಾತ್ರೆ, ಬೈಕ್‌ ರ‍್ಯಾಲಿ, ಮನೆಮನೆಗೆ ತೆರಳಿ ಕರಪತ್ರ ಹಂಚುವ ಕಾರ್ಯಗಳನ್ನು ಕಾಂಗ್ರೆಸ್‌, ಬಿಜೆಪಿ ನಡೆಸಿ, ಮತದಾರನ್ನು ತಮ್ಮತ್ತ ಸೆಳೆಯಲು ಯತ್ನಿಸಿವೆ.

ಎಸ್‌ಯುಸಿಐ ಪ್ರಚಾರ:

ಕಣದಲ್ಲಿರುವ ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಹೊರತಾಗಿ ಎಸ್‌ಯುಸಿಐ ಅಭ್ಯರ್ಥಿ ನಾಗಜ್ಯೋತಿ ಬಿ.ಎನ್‌. ಪರವಾಗಿ ಪಕ್ಷದ ಮುಖಂಡರು ಜಾಥಾ, ಪಾದಯಾತ್ರೆ ಮೂಲಕ ಮತಯಾಚನೆ ಜೊತೆಗೆ ಚುನಾವಣೆ ಕುರಿತು ಜನಜಾಗೃತಿ ಮೂಡಿಸಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.