ADVERTISEMENT

ವಿಜಯಪುರ | ವೈದ್ಯಕೀಯ ಕಾಲೇಜು: ಖಾಸಗಿ ಸಹಭಾಗಿತ್ವಕ್ಕೆ ವಿರೋಧ

ಬಸವರಾಜ ಸಂಪಳ್ಳಿ
Published 23 ಆಗಸ್ಟ್ 2025, 3:13 IST
Last Updated 23 ಆಗಸ್ಟ್ 2025, 3:13 IST
ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ
ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ   

ವಿಜಯಪುರ: ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ವಿಧಾನಮಂಡಲ ಅಧಿವೇಶನದಲ್ಲಿ ಘೋಷಣೆ ಮಾಡಿರುವುದಕ್ಕೆ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಸರ್ಕಾರದ ಗಮನಸೆಳೆದು ಒತ್ತಾಯಿಸಿದ್ದರು. ಅಲ್ಲದೇ, ಅವರು ಇದೇ ಸಂದರ್ಭದಲ್ಲಿ ‘ಖಾಸಗಿ ಸಹಭಾಗಿತ್ವ ಆಗಿರುವುದರಿಂದ ನಾನೂ ಟೆಂಡರ್‌ನಲ್ಲಿ ಭಾಗವಹಿಸುತ್ತೇನೆ. ₹500 ಕೋಟಿ ಹೂಡಿಕೆ ಮಾಡುತ್ತೇನೆ, ನಮ್ಮ ಸಚಿವ ಎಂ.ಬಿ.ಪಾಟೀಲರು ಕೊಡುತ್ತಾರೆ’ ಎಂದು ಹೇಳಿಕೆ ನೀಡಿರುವುದು ಜಿಲ್ಲೆಯ ವಿವಿಧ ಜನಪರ, ಪ್ರಗತಿಪರ, ದಲಿತ, ರೈತ, ವಿದ್ಯಾರ್ಥಿ ಸಂಘಟನೆಗಳನ್ನು ಕೆರಳಿಸಿದೆ.   

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂಬ ಕೂಗು ದಶಕದಿಂದ ಕೇಳಿಬರುತ್ತಿದ್ದರೂ ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದ ರಾಜ್ಯ ಸರ್ಕಾರ ಇದುವರೆಗೂ ಬೇಡಿಕೆಗೆ ಸ್ಪಂದಿಸಿರಲಿಲ್ಲ.

ADVERTISEMENT

ಜಿಲ್ಲೆಯ ಜನಪ್ರತಿನಿಧಿಗಳಾದವರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುತುವರ್ಜಿ ವಹಿಸುವ ಬದಲು ಸರ್ಕಾರಿ ಕಾಲೇಜು ಸ್ಥಾಪನೆಗೆ ಮಣ್ಣುಕೊಟ್ಟು, ಸ್ವಂತ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಸಕ್ತಿ ವಹಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಜಿಲ್ಲಾಸ್ಪತ್ರೆ ಆವರಣದಲ್ಲಿ 131 ಎಕರೆ 31 ಗುಂಟೆ ಖಾಲಿ ಜಾಗದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಜಿಲ್ಲಾಸ್ಪತ್ರೆಯಿಂದ 2018 ರಿಂದಲೇ ಪ್ರಸ್ತಾವನೆ ಸಲ್ಲಿಸುತ್ತಿದ್ದರೂ ಮಂಜೂರು ಮಾಡಿಲ್ಲದಿರುವುದು ಜಿಲ್ಲೆಯ ಜನತೆಯನ್ನು ಕೆರಳಿಸಿತ್ತು. ಇದೀಗ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಸಚಿವರು ಹೇಳಿರುವುದು ಬೆಂಕಿಗೆ ತುಪ್ಪು ಸುರಿದಂತಾಗಿದೆ. 

‘ಜಿಲ್ಲೆಯ ಜನಪ್ರತಿನಿಧಿಗಳ ಜನ ವಿರೋಧಿ ಧೋರಣೆ ಖಂಡಿಸಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹೋರಾಟ ರೂಪಿಸುತ್ತೇವೆ’ ಎಂದು ಅನೇಕರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಸಕಲ ಸೌಲಭ್ಯ:

ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಸಕಲ ಸೌಲಭ್ಯಗಳಿವೆ.  ಸುಮಾರು 149 ಎಕರೆ 12 ಗುಂಟೆ ವಿಸ್ತೀರ್ಣದಲ್ಲಿದ್ದು, ರಾಜ್ಯದಲ್ಲಿ ಇಷ್ಟೊಂದು ಸ್ವಂತ ಜಾಗ ಹೊಂದಿರುವ ಏಕೈಕ ಸರ್ಕಾರಿ ಆಸ್ಪತ್ರೆ ಆಗಿದೆ.

ಪ್ರತಿ ದಿನಕ್ಕೆ ಅಂದಾಜು 1,500ಕ್ಕೂ ಹೆಚ್ಚು ಒಳ ರೋಗಿ ಹಾಗೂ ಹೊರರೋಗಿಗಳ ದಾಖಲಾತಿ ಇರುತ್ತದೆ. ರೋಗಿಗಳ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ನುರಿತ ತಜ್ಞರಿಂದ ಉಪಚಾರ ನೀಡಲಾಗುತ್ತಿದೆ.

ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ದೊಡ್ಡ ಕಟ್ಟಡ, ಪಂಚಕರ್ಮ ಮತ್ತು ಪ್ರಕೃತಿ ಚಿಕಿತ್ಸಾಲಯ ಸೌಲಭ್ಯ ಕಟ್ಟಡ, 670 ಬೆಡ್‌ಗಳ ಜನರಲ್ ಆಸ್ಪತ್ರೆ, 150 ಬೆಡ್‌ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ, 60 ಬೆಡ್‌ಗಳ ಟ್ರಾಮಾ ಸೆಂಟರ್, ತುರ್ತು ನಿಗಾ ಘಟಕ, ಆಕ್ಸಿಜನ್ ಪ್ಲಾಂಟ್, ತುರ್ತು ಅಪಘಾತ ಘಟಕ, ಹೈಟೆಕ್ ಶವಾಗಾರ ಸಾರ್ವಜನಿಕರ ಸೇವೆಯಲ್ಲಿದೆ. ಈಗಾಗಲೇ ಬಿ.ಎಸ್‌ಸಿ ನರ್ಸಿಂಗ್ ಕಾಲೇಜು ಇತರೆ ವೃತ್ತಿಪರ ಪ್ಯಾರಾ ಮೆಡಿಕಲ್ ಕೋರ್ಸ್ ಕಟ್ಟಡ ಹೊಂದಿ, ಕಾರ್ಯನಿರ್ವಹಿಸುತ್ತಿವೆ.

ಶಾಸಕ ಯತ್ನಾಳರು ಆಸ್ಪತ್ರೆವೊಂದನ್ನು ತೆರೆದಿರಬಹುದು ಅವರ ಬಳಿ ಸಾಕಷ್ಟು ಹಣ ಇರಬಹುದು ಹಾಗಂತ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಅನುಭವ ಇಲ್ಲ ಅವರ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭ ಬೇಡ 
ಶ್ರೀನಾಥ ಪೂಜಾರಿ ಅಧ್ಯಕ್ಷ ದಲಿತ ವಿದ್ಯಾರ್ಥಿ ಪರಿಷತ್‌ ವಿಜಯಪುರ
ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದೊಂದಿಗೆ ವೈದ್ಯಕೀಯ ಕಾಲೇಜು ಸ್ಥಾಪನೆ ಬೇಡ. ಒಂದು ವೇಳೆ ಖಾಸಗಿಯವರ ಕಪಿಮುಷ್ಟಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಿದರೆ ಡೊನೇಷನ್ ಹಾವಳಿ ಹೆಚ್ಚಾಗಿ ಶ್ರೀಮಂತರ ಸೊತ್ತಾಗುತ್ತದೆ 
ಸಂಗಮೇಶ ಸಗರ ಅಧ್ಯಕ್ಷ ಜಿಲ್ಲಾ ಘಟಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ಜಿಲ್ಲಾಸ್ಪತ್ರೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಆರಂಭಕ್ಕೆ ವಿರೋಧ ಇದೆ. ಈ ಸಂಬಂಧ ಸಮಾನ ಮನಸ್ಕರ ಸಭೆ ಕರೆದು ಶೀಘ್ರದಲ್ಲೇ ಹೋರಾಟ ರೂಪಿಸುತ್ತೇವೆ
–ಅರವಿಂದ ಕುಲಕರ್ಣಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಖಂಡ ಕರ್ನಾಟಕ ರೈತ ಸಂಘ
ವಿಜಯಪುರದಲ್ಲಿ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಸರ್ಕಾರಿ ವೈದ್ಯಕೀಯ ಕಾಲೇಜು ಅಗತ್ಯ ಇದೆಯೇ ಹೊರತು ಖಾಸಗಿ ಸಹಭಾಗಿತ್ವ ಬೇಡ 
–ಸಿದ್ದಲಿಂಗ ಬಾಗೇವಾಡಿ ರಾಜ್ಯ ಕಾರ್ಯದರ್ಶಿ ಎಐಡಿವೈಓ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.