
ವಿಜಯಪುರ: ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ 62 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಜನವೇದಿಕೆ ಮತ್ತು ಕರ್ನಾಟಕ ಜನಾರೋಗ್ಯ ಚಳವಳಿ ಸಂಘಟನೆ ಪದಾಧಿಕಾರಿಗಳು ಮಂಗಳವಾರ ಬೆಂಬಲ ನೀಡಿದರು. ವಿಜಯಪುರ ನಗರ, ಸಿಂದಗಿ ಮತ್ತು ಮುದ್ದೇಬಿಹಾಳ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಬೃಹತ್ ರಂಗೋಲಿಯನ್ನು ಬಿಡಿಸಿ, ಗಮನ ಸೆಳೆದರು.
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು, ಖಾಸಗಿ ಸಹಭಾಗಿತ್ವ ಕೈಬಿಡಬೇಕು ಹಾಗೂ ಸರ್ಕಾರಿ ಆಸ್ಪತ್ರೆಯನ್ನು ಉಳಿಸಿ ಎಂದು ಆಗ್ರಹಿಸಿ ವಿಜಯಪುರ ನಗರದ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ರಂಗೋಲಿ ಚಳವಳಿ ನಡೆಸಿದರು.
ಜಿಲ್ಲೆಯ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಸ್ವಸಹಾಯ ಸಂಘದ ಮಹಿಳೆಯರು ರಂಗೋಲಿ ಮೂಲಕವೇ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜನಾರೋಗ್ಯ ಚಳವಳಿಯ ಮುಖಂಡರಾದ ಅಖಿಲಾ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ವಿವಿಧ ರೀತಿಯಲ್ಲಿ ಚಳವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ರಂಗೋಲಿ ಚಳವಳಿ ಕೂಡ ಹೋರಾಟದ ಒಂದು ಭಾಗ ಎಂದು ಹೇಳಿದರು.
ಸರ್ಕಾರ ವೈದ್ಯಕೀಯ ಕಾಲೇಜನ್ನು ಸ್ಥಾಪನೆ ಮಾಡಲು ಖಾಸಗಿಯವರಿಗೆ ಒಪ್ಪಿಸಿದರೆ ಮುಂದೊಂದು ದಿನ ನಮ್ಮ ಸರ್ಕಾರಿ ಜಿಲ್ಲಾಸ್ಪತ್ರೆಯನ್ನು ಕೂಡ ಖಾಸಗಿಯವರು ಕಬಳಿಸಿಕೊಳ್ಳುವ ಹುನ್ನಾರ ಇದರಲ್ಲಿದೆ. 150 ಎಕರೆ ಜಾಗ ಹೊಂದಿರುವ ಏಕೈಕ ಜಿಲ್ಲೆ ವಿಜಯಪುರವಾಗಿದ್ದು, ಇಲ್ಲಿ ಎಲ್ಲಾ ರೀತಿಯ ಸುಸಜ್ಜಿತವಾದ ಜಾಗವಿದೆ, ಈ ಜಾಗವನ್ನು ನಾವು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಮಾರಾಟ ಮಾಡಲು ಬಿಡುವುದಿಲ್ಲ, ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಬೆಳೆಸಬೇಕಾಗುತ್ತದೆ ಎಂದು ಹೇಳಿದರು.
ಕಾರ್ಪೊರೇಟ್ ಮನೆತನಗಳಿಗೆ ಸಹಾಯ ಮಾಡುತ್ತಾ ನಮ್ಮ ಜಿಲ್ಲೆಗೆ ದ್ರೋಹ ಎಸಗುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಮುಖ್ಯಮಂತ್ರಿಯವರು ನಿಯೋಗಕ್ಕೆ ಭರವಸೆ ನೀಡಿ ಲಿಖಿತ ಆದೇಶ ಹೊರಡಿಸಿದರೆ ಮಾತ್ರ ಹೋರಾಟ ಅಂತ್ಯವಾಗಲಿದೆ. ಇಲ್ಲವಾದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ
–ಭರತ್ ಕುಮಾರ್ ಎಚ್.ಟಿ. ಸದಸ್ಯ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ವಿಜಯಪುರ
ನಿಯೋಗದಿಂದ ಸಿಎಂ ಭೇಟಿ ಇಂದು
ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎಂದು ಆಗ್ರಹಿಸಿ ಹೋರಾಟ ಕೈಗೊಂಡಿರುವ ಪ್ರಮುಖರ ನಿಯೋಗವು ನ.19ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಯನ್ನು ಮಂಡಿಸಲಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲ ಮತ್ತು ಶಿವಾನಂದ ಪಾಟೀಲರ ನೇತೃತ್ವದಲ್ಲಿ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಪದಾಧಿಕಾರಿಗಳಾದ ಭಗವಾನ್ ರೆಡ್ಡಿ ಅನಿಲ್ ಹೊಸಮನಿ ಅರವಿಂದ ಕುಲಕರ್ಣಿ ಅಕ್ರಂ ಮಾಶಾಳಕರ ಸಿದ್ದಲಿಂಗ ಬಾಗೇವಾಡಿ ಶ್ರೀನಾಥ ಪೂಜಾರಿ ಭೋಗೇಶ್ ಸೊಲ್ಲಾಪುರ ಸುರೇಶ ಜೇಬಿ ಲಲಿತಾ ಬಿಜ್ಜರಗಿ ಫಯಾಜ್ ಕಲಾದಗಿ ಜಗದೇವ ಸೂರ್ಯವಂಶಿ ಸುರೇಶ ಬಿಜಾಪುರ ಹಾಗೂ ಸಿದ್ದನಗೌಡ ಪಾಟೀಲ ಅರವಿಂದ ಮಾಲಗತ್ತಿ ಜೆ.ಬಿ.ಪಾಟೀಲ ಮತ್ತಿತರರು ಈ ನಿಯೋಗದಲ್ಲಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.