ADVERTISEMENT

ವಿಜಯಪುರ: ಕರ್ಕಶ ಸೈಲೆನ್ಸರ್ ಸದ್ದಡಗಿಸಿದ ಪೊಲೀಸರು

ರೋಡ್‌ ರೋಲರ್‌ ಉರುಳುಸಿ 453 ಶಬ್ಧಕಾರಕ ಸೈಲೆನ್ಸರ್‌ ನಾಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 3:48 IST
Last Updated 21 ಫೆಬ್ರುವರಿ 2026, 3:48 IST
ವಿಜಯಪುರ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ವಶಪಡಿಸಿಕೊಂಡ ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಶುಕ್ರವಾರ ರೋಡ್‌ ರೋಲರ್‌ ಹತ್ತಿಸಿ, ಸಾಮೂಹಿಕವಾಗಿ ನಾಶ ಪಡಿಸಲಾಯಿತು  
ವಿಜಯಪುರ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ವಶಪಡಿಸಿಕೊಂಡ ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಶುಕ್ರವಾರ ರೋಡ್‌ ರೋಲರ್‌ ಹತ್ತಿಸಿ, ಸಾಮೂಹಿಕವಾಗಿ ನಾಶ ಪಡಿಸಲಾಯಿತು     

ವಿಜಯಪುರ: ಶಬ್ದಮಾಲಿನ್ಯ ಮತ್ತು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಬೈಕುಗಳನ್ನು ಸೀಜ್‌ ಮಾಡಿ, ವಶಪಡಿಸಿಕೊಂಡ ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಶುಕ್ರವಾರ ಸಾಮೂಹಿಕವಾಗಿ ನಾಶ ಪಡಿಸಲಾಯಿತು.

ನಗರದ ಸೊಲ್ಲಾಪುರ ರಸ್ತೆಯ ದರ್ಗಾ ಜೈಲ್‌ ಸರ್ಕಲ್‌ ಬಳಿ ಸಿಸಿ ರಸ್ತೆ ಮೇಲೆ ಸೈಲೆನ್ಸರ್‌ಗಳನ್ನು ಸಾಲಾಗಿ ಇಟ್ಟು, ಅವುಗಳ ಮೇಲೆ ರೋಡ್‌ ರೋಲರ್‌ಗಳನ್ನು ಹತ್ತಿಸಿ, ಪುಡಿಗಟ್ಟಲಾಯಿತು. 

‘ಜಿಲ್ಲೆಯಾದ್ಯಂತ ಒಂದು ತಿಂಗಳು ವಿಶೇಷ ಕಾರ್ಯಾಚರಣೆ ನಡೆಸಿ, ಬೈಕುಗಳಿಗೆ ಅಳವಡಿಸಿದ್ದ 453 ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಅವುಗಳನ್ನು ನಾಶಪಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ADVERTISEMENT

‘ಕರ್ಕಶ ಶಬ್ದಕಾರಕ ಬೈಕುಗಳನ್ನು ರಾತ್ರಿ ವೇಳೆ ಯುವಕರು ಓಡಿಸುವುದರಿಂದ ಹಿರಿಯ ನಾಗರಿಕರಿಗೆ, ಅನಾರೋಗ್ಯ ಪೀಡಿತರಿಗೆ ತೀವ್ರ ಸಮಸ್ಯೆಯಾಗುತ್ತಿತ್ತು. ಅಲ್ಲದೇ, ಆಸ್ಪತ್ರೆ, ಶಾಲೆ, ಕಾಲೇಜುಗಳ ಬಳಿ, ಜನಸಂದಣಿ ಇರುವ ಸ್ಥಳಗಳು, ಟ್ರಾಫಿಕ್‌ಗಳಲ್ಲೂ ಸಮಸ್ಯೆ ಜಾಸ್ತಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಯಿತು’ ಎಂದರು.

‘ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಅವಳಡಿಸಿಕೊಂಡಿದ್ದ ಬೈಕ್‌ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ಕೂಡ ನೀಡಲಾಗಿದೆ. ಅಲ್ಲದೇ, ಶಬ್ದ ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗುವ ಸೈಲೆನ್ಸರ್‌ಗಳನ್ನು ಬೈಕುಗಳಿಗೆ ಅಳವಡಿಸುವ ವರ್ಕ್‌ಶಾಪ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಇನ್ನೂ ಯಾರಾದರೂ ಇಂತಹ ಮಾರ್ಪಡಿಸಿದ ಸೈಲೆನ್ಸರ್‌ಗಳನ್ನು ಬೈಕುಗಳಿಗೆ ಅಳವಡಿಸಿದ್ದರೆ ತಕ್ಷಣ ತೆರವು ಮಾಡಬೇಕು. ಒಂದು ವೇಳೆ ಕಂಡುಬಂದರೆ ಅಂತವರ ಬೈಕುಗಳನ್ನು ವಶಪಡಿಸಿಕೊಂಡು ಸೈಲೆನ್ಸರ್‌ ಕಿತ್ತು ಹಾಕುವ ಜೊತೆಗೆ ದಂಡ ವಿಧಿಸುವ ಕಾರ್ಯಾಚರಣೆ ನಿರಂತರವಾಗಿರಲಿದೆ’ ಎಂದರು.

‘ಇನ್ನು ಮುಂದೆ ಮಾರ್ಪಡಿಸಿದ ಸೈಲೆನ್ಸರ್‌ಗಳು ಕಂಡುಬಂದರೆ ಇಂತವರ ವಿರುದ್ಧ ದೂರು ದಾಖಲಿಸುವ ಜೊತೆಗೆ ಡ್ರೈವಿಂಗ್‌ ಲೈಸನ್ಸ್‌ ರದ್ದು ಪಡಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಇದ್ದರು.

ಅಪ್ರಾಪ್ತರು ಬೈಕ್‌ ಓಡಿಸಿದರೆ ಪೋಷಕರಿಗೆ ದಂಡ 

ವಿಜಯಪುರ: ‘ಬೈಕ್‌ ಓಡಿಸುವ 18 ವರ್ಷ ಒಳಗಿನ ಅಪ್ರಾಪ್ತರ ವಿರುದ್ಧವೂ ಫೆಬ್ರುವರಿ ಅಂತ್ಯದಿಂದ ಮಾರ್ಚ್‌ ಅಂತ್ಯದ ವರೆಗೆ ಒಂದು ತಿಂಗಳು ಜಿಲ್ಲೆಯಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ  ಅಂತವರ ತಂದೆ ತಾಯಿ ಪೋಷಕರ ವಿರುದ್ಧ ದೂರು ದಾಖಲಿಸಿ ದಂಡ ಹಾಕಲಾಗುವುದು. ಅಲ್ಲದೇ ಮೂರು ವರ್ಷ ಕಠಿಣ ಶಿಕ್ಷೆ ಇರಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಎಚ್ಚರಿಕೆ ನೀಡಿದರು. ‘ಲೇಸನ್ಸ್‌ ಇಲ್ಲದವರು ಬೈಕ್‌ ಓಡಿಸಿ ಅಪಘಾತವಾದರೆ ವಿಮೆ ಸೌಲಭ್ಯ ಸಿಗುವುದಿಲ್ಲ ಅಪಘಾತ ಸಂಭವಿಸಿ ಜೀವಕ್ಕೆ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮುಂದಾಗುವ ಅನಾಹುತ ತಪ್ಪಿಸುವ ಉದ್ದೇಶದಿಂದ ಬೈಕ್‌ ಚಲಾಯಿಸುವ ಅಪ್ರಾಪ್ತರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು. ಪೋಷಕರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಸೂಚಿಸಿದರು.

ಜಾಗೃತಿ ಕಾರ್ಯಾಗಾರ: ‘ಫೆ 25ರಂದು ವಿಜಯಪುರ ನಗರದ ಕಂದಗಲ್‌ ಹನುಮಂತರಾಯ ರಂಗ ಮಂದಿರದಲ್ಲಿ ಪೊಲೀಸ್‌ ಇಲಾಖೆಯಿಂದ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಅಪಘಾತ ಕಡಿಮೆ ಮಾಡುವ ಉದ್ದೇಶದಿಂದ ಜಾಗೃತಿ ಮೂಡಿಸಲಾಗುವುದು. ಹೆಲ್ಮೆಟ್‌ ಧರಿಸುವ ಮಹತ್ವವನ್ನು ತಿಳಿಸಲಾಗುವುದು ಹಾಗೂ ವಾಹನಗಳ ಇನ್‌ಶ್ಯೂರೆನ್ಸ್‌ ಕಂಪನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ’ ಎಂದರು.

ಜಿಲ್ಲೆಯಲ್ಲಿ ಇನ್ನು ಮುಂದೆ ಮಾರ್ಪಡಿಸಿದ ಸೈಲೆನ್ಸರ್‌ ಬೈಕುಗಳಿಗೆ ಅಳವಡಿಸಿರುವುದು ಕಂಡುಬಂದಲ್ಲಿ ಅವರ ವಿರುದ್ಧ ದಂಡ ದೂರು ದಾಖಲಿಸುವ ಜೊತೆಗೆ ಡ್ರೈವಿಂಗ್‌ ಲೈಸೆನ್ಸ್‌ ರದ್ದು ಪಡಿಸಲಾಗುವುದು 
ಲಕ್ಷ್ಮಣ ನಿಂಬರಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.