ADVERTISEMENT

ವಿಜಯಪುರ | ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿ: ಕೊಲೆ ಆರೋಪಿ ಕಾಲಿಗೆ ಗುಂಡು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 15:38 IST
Last Updated 14 ಅಕ್ಟೋಬರ್ 2025, 15:38 IST
   

ವಿಜಯಪುರ: ಬಂಧಿಸಲು ಮುಂದಾದ ಪೊಲೀಸರ ಮೇಲೆ ಬೈಕ್‌ ಹಾಯಿಸಿ ದಾಳಿ ನಡೆಸಲು ಯತ್ನಿಸಿದ ಕೊಲೆ ಆರೋಪಿ ಕಾಲಿಗೆ ಗುಂಡು ಹೊಡೆದು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ತಾಲ್ಲೂಕಿನ ಕನ್ನೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದ ಸಾಗರ ಬೆಳ್ಳುಂಡಗಿ ಹಾಗೂ ಇಸಾಕ್ ಖರೇಷಿ ಕೊಲೆ ಪ್ರಕರಣ ಐವರು ಆರೋಪಿಗಳು ಸ್ಥಳವೊಂದರಲ್ಲಿ ಅಡಗಿಕೊಂಡಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ಅಕ್ಷಯ ಶಿವಾನಂದ ಜುಲಜುಲೆ ಎಂಬಾತ ಪೊಲೀಸರ ಮೇಲೆ ಬೈಕ್‌ ಹಾಯಿಸಿ ದಾಳಿ ನಡೆಸಲು ಮುಂದಾಗಿದ್ದು, ಘಟನೆಯಲ್ಲಿ ಇಬ್ಬರು ಪೊಲೀಸ್‌ ಸಿಬ್ಬಂದಿಗೆ ತೀವ್ರವಾಗಿ ಗಾಯವಾಗಿದೆ. ಈ ಸಂದರ್ಭದಲ್ಲಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸ್‌ ಇನ್‌ಸ್ಪೆಕ್ಟರ್‌ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಗಾಯಗೊಂಡಿರುವ ಇಬ್ಬರು ಪೊಲೀಸ್‌ ಸಿಬ್ಬಂದಿ ಹಾಗೂ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಅಕ್ಷಯ ಶಿವಾನಂದ ಜುಲಜುಲೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಂಡಿದ್ದಾರೆ ಎಂದರು.

ADVERTISEMENT

ಇನ್ನುಳಿದ ಕೊಲೆ ಆರೋಪಿಗಳಾದ ಭರತ, ಸಂಜಯ್, ಸಂತೋಷ, ಮಲ್ಲನಗೌಡನನ್ನು ಬಂಧಿಸಿ, ಕೋರ್ಟ್‌ಗೆ ಹಾಜರು ಪಡಿಸಲಾಗಿದೆ ಎಂದು ಹೇಳಿದರು.

2023ರಲ್ಲಿ ಕನ್ನೂರಿನ ಸಾಗರ ಬೆಳ್ಳುಂಡಗಿ ಹಾಗೂ ಇಸಾಕ್ ಖರೇಷಿ ಅದೇ ಗ್ರಾಮದ ಈರನಗೌಡ ಪಾಟೀಲ್ ಮೇಲೆ ಹಲ್ಲೆ ಮಾಡಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈರನಗೌಡ ಎಂಟು‌ ತಿಂಗಳ‌ ಬಳಿಕ‌ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದರು. ಈ ಪ್ರಕರಣಕ್ಕೆ ಪ್ರತೀಕಾರವಾಗಿ‌ ಈರನಗೌಡ ಸಹೋದರ ಮಲ್ಲನಗೌಡ ಮತ್ತು ಆತನ ಮಕ್ಕಳು ಸೇರಿಕೊಂಡು ಸಾಗರ ಹಾಗೂ ಇಸಾಕ್‌ನನ್ನು ಅಕ್ಟೋಬರ್‌ 14ರಂದು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.