
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬೀದಿನಾಯಿಗಳು ಜನರಲ್ಲಿ ಭಯ ಹುಟ್ಟಿಸಿವೆ.
ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ, ಚಡಚಣ ಸೇರಿದಂತೆ ಬಹುತೇಕ ನಗರ, ಪಟ್ಟಣಗಳ ಬೀದಿ, ಕೇರಿ, ಓಣಿಗಳಲ್ಲಿ ಜನರನ್ನು ಬಿಟ್ಟರೆ ನಾಯಿಗಳೇ ಹೆಚ್ಚು ಕಾಣಿಸುತ್ತಿವೆ. ಜಿಲ್ಲೆಯಲ್ಲಿ 19,936ಕ್ಕೂ ಅಧಿಕ ಬೀದಿ ನಾಯಿಗಳು ಇವೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.
ದಿನದಿಂದ ದಿನಕ್ಕೆ ಬೀದಿ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಪ್ರತಿ ದಿನ ಹತ್ತಾರು ಜನರು ಬೀದಿನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ಅಲ್ಲದೇ, ಈಗಾಗಲೇ ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ.
2025ರಲ್ಲಿ 32,317 ಜನರಿಗೆ ಬೀದಿ ನಾಯಿಗಳು ಕಚ್ಚಿವೆ. 2024ರಲ್ಲಿ 25 ಸಾವಿರಕ್ಕೂ ಅಧಿಕ ಹಾಗೂ 2023ರಲ್ಲಿ 22 ಸಾವಿರಕ್ಕೂ ಅಧಿಕ ಜನರಿಗೆ ನಾಯಿ ಕಚ್ಚಿವೆ. ಮೂರು ವರ್ಷಗಳ ಅಂಕಿ–ಅಂಶಗಳನ್ನು ನೋಡಿದಾಗ ವರ್ಷದಿಂದ ವರ್ಷಕ್ಕೆ ನಾಯಿಗಳ ಕಡಿತದ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಿಜಯಪುರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಬೀದಿನಾಯಿಗಳ ಕಡಿತಕ್ಕೆ ಒಳಗಾದ ಜಿಲ್ಲೆ ಎಂದು ದಾಖಲೆ ಬರೆದಿದೆ.
ವಾಯು ವಿಹಾರಕ್ಕೆ ಹೋಗಲು ಜನರು ಹೆದರುವಂತಾಗಿದೆ. ಮಕ್ಕಳನ್ನು ಮನೆಯಿಂದ ಹೊರಗಡೆ ಆಟವಾಡಿಸಲು ಕಳುಹಿಸಲು, ಶಾಲೆಗೆ, ಟ್ಯೂಷನ್‌ಗೆ ಒಬ್ಬರನ್ನೇ ಕಳುಹಿಸಲು ಅಂಜುತ್ತಿದ್ದಾರೆ. ರಸ್ತೆಯಲ್ಲಿ ಬೈಕ್ ಸವಾರರು ಹೋಗುವಾಗ ಏಕಾಏಕಿ ಬೆನ್ನಟ್ಟುವುದರಿಂದ ಸವಾರರು ಬಿದ್ದು ಗಾಯಗೊಂಡ ಪ್ರಕರಣಗಳೂ ನಡೆದಿವೆ.
ಮಾಂಸದ ಅಂಗಡಿಯವರು, ಬಾರ್ ರೆಸ್ಟೋರೆಂಟ್, ಹೋಟೆಲ್‌ನವರು ಸರಿಯಾಗಿ ತ್ಯಾಜ್ಯ ವಿಲೇವಾರಿ ಮಾಡದೇ, ನಗರಗಳ ಹೊರವಲಯದ ರಸ್ತೆಗಳ ಬದಿ, ಖಾಲಿ ಜಾಗದಲ್ಲಿ ಎಸೆಯುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶಾಲೆ, ಆಸ್ಪತ್ರೆ ಹಾಗೂ ಬಸ್ ನಿಲ್ದಾ ಣಗಳಲ್ಲಿ ಆಶ್ರಯ ಪಡೆದಿರುವ ಬೀದಿ ನಾಯಿಗಳನ್ನು ತೆರವುಗೊಳಿಸಿ, ಅವುಗಳನ್ನು ಪುನವರ್ಸತಿ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ನಿರ್ದೇಶನವು ಜಿಲ್ಲೆಯಲ್ಲಿ ಇನ್ನೂ ಪಾಲನೆಯಾಗಿಲ್ಲ.
‘ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮ ಮತ್ತು ನಾಯಿಗಳಿಗೆ ಸಾಮೂಹಿಕವಾಗಿ ರೇಬಿಸ್ ತಡೆ ಲಸಿಕೆ ನೀಡಲು ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ವಿಜಯಪುರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನೆ ನಿರ್ದೇಶಕ ಬದ್ರುದ್ದಿನ್ ಸೌದಾಗರ ತಿಳಿಸಿದ್ದಾರೆ.
ಶಾಲಾ, ಕಾಲೇಜು, ಆಸ್ಪತ್ರೆ, ಬಸ್ ನಿಲ್ದಾಣ, ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಆಶ್ರಯ ಪಡೆದಿರುವ ಬೀದಿನಾಯಿಗಳನ್ನು ತೆರವುಗೊಳಿಸಲು ಸುಪ್ರೀಂಕೋರ್ಟ್ ನಿರ್ದೇಶನದಂತೆ ಈಗಾಗಲೇ ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ. ಅವುಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಕ್ರಮಕ್ಕೆ ಮುಂದಾಗಲಾಗಿದೆ. ಈ ಸಂಬಂಧ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ವಿಜಯಪುರ ಪಾಲಿಕೆ ವ್ಯಾಪ್ತಿಯಲ್ಲಿ 8322 ನಾಯಿಗಳಿಗೆ ಈಗಾಗಲೇ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. 1062 ರೇಬಿಸ್ ಲಸಿಕೆ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಲಕ್ಕಣ್ಣವರ ತಿಳಿಸಿದರು.
ಒಂದು ನಾಯಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ಕನಿಷ್ಠ ₹1850 ಖರ್ಚು ತಗಲುತ್ತದೆ. ಜಿಲ್ಲೆಯಲ್ಲಿ ಸುಮಾರು 19,936 ಸಾವಿರಕ್ಕೂ ಅಧಿಕ ನಾಯಿಗಳಿವೆ. ಇಷ್ಟೊಂದು ಬೀದಿನಾಯಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಇದು ನಗರ ಸ್ಥಳೀಯ ಸಂಸ್ಥೆಗಳಿಗೆ ಹೊರೆಯಾಗಲಿದೆ. ಹೀಗಾಗಿ ಜಿಲ್ಲೆಯ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳು ಇದುವರೆಗೂ ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಹಿಂದೇಟು ಹಾಕುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಬೀದಿ ನಾಯಿಗಳು ವಿಜಯಪುರ ಪಾಲಿಕೆ ವ್ಯಾಪ್ತಿಯಲ್ಲಿ 15525 ಬೀದಿ ನಾಯಿಗಳಿವೆ. ಆದರೆ, ಒಂದೇ ಒಂದು ಎಬಿಸಿ(ಪ್ರಾಣಿ ಜನನ ನಿಯಂತ್ರಣ) ಕೇಂದ್ರವಿದೆ. ಬೀದಿ ನಾಯಿಗಳನ್ನು ಹಿಡಿಯುವ ವಾಹನ ಕೂಡ ಒಂದೇ ಇದೆ. 10 ಜನ ಸಿಬ್ಬಂದಿ ಇದ್ದಾರೆ. ಜಿಲ್ಲೆಯ ಇನ್ನುಳಿದ ನಗರ, ಪಟ್ಟಣಗಳಲ್ಲಿ ಈ ಯಾವ ಸೌಲಭ್ಯಗಳೂ ಇಲ್ಲವಾಗಿವೆ.
ವಿಜಯಪುರ ಜಿಲ್ಲೆಯಲ್ಲಿ 2025ರ ಜನವರಿ 1ರಿಂದ ಡಿಸೆಂಬರ್ 31ರ ವರೆಗೆ 32317 ಜನರಿಗೆ ಬೀದಿ ನಾಯಿಗಳು ಕಚ್ಚಿವೆ. ಇದರಲ್ಲಿ ಐದು ಜನ ಸಾವಿಗೀಡಾಗಿದ್ದಾರೆ-ಡಾ.ಸಂಪತ್ ಗುಣಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ವಿಜಯಪುರ
ಶಾಲಾ ಕಾಲೇಜು ಆಸ್ಪತ್ರೆ ಬಸ್ ನಿಲ್ದಾಣ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಆಶ್ರಯ ಪಡೆದಿರುವ ಬೀದಿನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಕ್ರಮಕ್ಕೆ ಮುಂದಾಗಲಾಗಿದೆ-ಬದ್ರುದ್ದಿನ್ ಸೌದಾಗರ ಯೋಜನಾ ನಿರ್ದೇಶಕ ನಗರಾಭಿವೃದ್ಧಿ ಕೋಶ ವಿಜಯಪುರ
ವಿಜಯಪುರ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸರ್ವೇ ಮಾಡಲಾಗಿದೆ. ಅವುಗಳಿಗೆ ಪ್ರತಿ ದಿನ ಆಹಾರ ನೀರು ಪೂರೈಕೆ 35 ಸ್ಥಳಗಳನ್ನು ಗುರುತಿಸಲಾಗಿದೆ-ಡಾ.ಲಕ್ಕಣ್ಣವರಆರೋಗ್ಯಾಧಿಕಾರಿಮಹಾನಗರ ಪಾಲಿಕೆ ವಿಜಯಪುರ
ವಿಜಯಪುರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹82.50 ಲಕ್ಷ ಕಾಯ್ದಿರಿಸಲಾಗಿದೆ.–ವಿಜಯ್ ಮೆಕ್ಕಳಕಿ ಆಯುಕ್ತ ಪಾಲಿಕೆ ವಿಜಯಪುರ
ವಿಜಯಪುರ ನಗರದ ಸೊಲ್ಲಾಪುರ ರಸ್ತೆ ಬಾಗಲಕೋಟೆ ರಸ್ತೆಯಲ್ಲಿ ರಾತ್ರಿ ವೇಳೆ ಓಡಾಡುವುದಕ್ಕೆ ಹೆದರಿಕೆಯಾಗುತ್ತಿದೆ. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದು ಅವುಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು-ಸಂಗಮೇಶ ಬಿರಾದಾರ ವಿಜಯಪುರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.