ADVERTISEMENT

ಪ್ರವಾಸಿ ತಾಣ ಮಾಡಲಾಗದ ಸಂಸದ: ರಮೇಶ ಜಿಗಜಿಣಗಿ ವಿರುದ್ಧ ಯಶವಂತರಾಯಗೌಡ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 5:26 IST
Last Updated 9 ಜುಲೈ 2025, 5:26 IST
<div class="paragraphs"><p>ಯಶವಂತರಾಯಗೌಡ ಪಾಟೀಲ</p></div>

ಯಶವಂತರಾಯಗೌಡ ಪಾಟೀಲ

   

ವಿಜಯಪುರ: ‘ಐತಿಹಾಸಿಕ ವಿಜಯಪುರವನ್ನು ವಿಶ್ವ ಪ್ರಸಿದ್ಧ ಪ್ರವಾಸಿ ಕೇಂದ್ರ(ಟೂರಿಜಂ ಹಬ್‌)ವಾಗಿ ಅಭಿವೃದ್ಧಿ ಮಾಡುವ ಅವಕಾಶವಿದ್ದರೂ ಮಾಡದ, ಗೋಳಗುಮ್ಮಟವನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೆ ಇದುವರೆಗೂ ಶ್ರಮಿಸದ ಸಂಸದ ರಮೇಶ ಜಿಗಜಿಣಗಿ ಅವರು ಕೇವಲ ರೈಲ್ವೆ ಸೇತುವೆ ಮಾಡಿರುವುದನ್ನೇ ದೊಡ್ಡದಾಗಿ ಬಿಂಬಿಸುತ್ತಿರುವುದು ಅವರ ರಾಜಕೀಯ ಹಿರಿತನಕ್ಕೆ ತಕ್ಕುದಲ್ಲ’ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಟ್ಟಿದ್ದರೂ ಉಪಯೋಗಕ್ಕೆ ಇಲ್ಲದಂತಾಗಿದೆ. ಮೊದಲು ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಕ್ರಮಕೈಗೊಳ್ಳಿ’ ಎಂದು ಸವಾಲು ಹಾಕಿದರು.

ADVERTISEMENT

‘ಆಲಮಟ್ಟಿ ಜಲಾಶಯವನ್ನು 519ರಿಂದ 524 ಮೀಟರ್‌ಗೆ ಎತ್ತರಿಸುವ ವಿಷಯವಾಗಿ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸದೇ ಇರುವುದು ನನಗೆ ಗೊತ್ತಿಲ್ಲ, ತಿಳಿದುಕೊಂಡು ಹೇಳುತ್ತೇನೆ’ ಎಂದಿರುವ ಸಂಸದ ಜಿಗಜಿಣಗಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ‘ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ ಜನರ ಬದುಕು ಈ ಯೋಜನೆಯಲ್ಲಿ ಅಡಗಿದೆ, ದಶಕಗಳ ಕನಸು ಇದಾಗಿದೆ. ಇಂತಹ ಮಹತ್ವದ ಯೋಜನೆ ಬಗ್ಗೆ ಜಿಲ್ಲೆಯ ಸಂಸದರಾಗಿ ನನಗೆ ಏನೂ ಗೊತ್ತಿಲ್ಲ ಎನ್ನುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು.

‘ನೆರೆಯ ಕಲಬುರ್ಗಿ ಜಿಲ್ಲೆಗೆ ಹೋಗಿ ಅಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಒಮ್ಮೆ ನೋಡಿಕೊಂಡು ಬನ್ನಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿ, ಸಚಿವರಾಗಿ ತಮ್ಮ ಅಧಿಕಾರವಧಿಯಲ್ಲಿ ಕಲಬುರ್ಗಿಗೆ ಕೇಂದ್ರೀಯ ವಿಶ್ವವಿದ್ಯಾಲಯ, ಇಎಸ್‌ಐ ಆಸ್ಪತ್ರೆ, 371 ಜೆ ಕಲಂ ಜಾರಿಗೆ ತಂದು ಅಭಿವೃದ್ಧಿ ಮಾಡಿದ್ದಾರೆ, ವಿಜಯಪುರಕ್ಕೆ ನೀವೇನು ತಂದಿದ್ದೀರಿ?’ ಎಂದು ತರಾಟೆಗೆ ತೆಗೆದುಕೊಂಡರು.

‘ಸೋತ ಒಂದಷ್ಟು ಮುಖಂಡರನ್ನು  ಅಕ್ಕಪಕ್ಕ ಕೂರಿಸಿಕೊಂಡು ಪತ್ರಿಕಾಗೋಷ್ಠಿ ಮಾಡಿ ಕಾಂಗ್ರೆಸಿನವರು ಏನೂ ಮಾಡಿಲ್ಲ ಎಂದು ಹೇಳಬೇಡಿ, ವಾಸ್ತವಿಕ ಅಂಶಗಳ ಬಗ್ಗೆ ಮಾತನಾಡಿ, ಪ್ರತಿಪಕ್ಷದ ಬಗ್ಗೆ ಟೀಕೆ, ಟಿಪ್ಪಣಿ ಇರಬೇಕು. ಆದರೆ, ಆರೋಗ್ಯಕರ ಟೀಕೆಗಳಿರಲಿ, ತೂಕದಿಂದ ಮಾತನಾಡಿ’ ಎಂದು ಸಲಹೆ ನೀಡಿದರು.

‘ಹೊನಗನಹಳ್ಳಿ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ವೇಳೆ ಯಾವೊಬ್ಬ ರೈಲ್ವೆ ಅಧಿಕಾರಿಗಳಿರಲಿಲ್ಲ, ಕ್ಷೇತ್ರದ ಸಚಿವರು, ಶಾಸಕರು ಇರಲಿಲ್ಲ, ಕೇವಲ ಸೋತ ಬಿಜೆಪಿ ಮುಖಂಡರೊಂದಿಗೆ ಹೋಗಿ ಉದ್ಘಾಟಿಸಿ ಬಿಜೆಪಿ ಕಾರ್ಯಕ್ರಮ ಮಾಡಿದ್ದೀರಿ. ನೀವು ಮಾಡಿದಂತೆ ನಾವು ಮಾಡುವುದಿಲ್ಲ, ನಿಮ್ಮನ್ನು ಕರೆದುಕೊಂಡೇ ಅಭಿವೃದ್ಧಿ ಕೆಲಸ ಮಾಡುತ್ತೇವೆ’ ಎಂದು ತಿವಿದರು.

‘ಇಂಡಿ ಕಾಲುವೆ ನವೀಕರಣ ಕಾರ್ಯ ನೀವೊಬ್ಬರೇ ಮಾಡಿರುವಂತೆ ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಅದರಲ್ಲಿ ಕೇಂದ್ರ, ರಾಜ್ಯ ಸರ್ಕಾರದ  ಪಾಲಿದೆ. ಈ ಯೋಜನೆ ಬಗ್ಗೆ ಕಾಳಜಿ ಇರುವುದರಿಂದಲೇ ಜೂನ್‌ 20ರಂದು ನಡೆದ ಸಿಡಬ್ಲ್ಯುಸಿ ಸಭೆಗೆ ರಾಜ್ಯ ಸರ್ಕಾರದ ಅಧಿಕಾರಿಗಳು ಹಾಜರಾಗಿದ್ದಾರೆ’ ಎಂದು ಹೇಳಿದರು.

‘ಇಂಡಿ ಕಾಲುವೆ ನವೀಕರಣಕ್ಕೆ ರಾಜ್ಯ ಸರ್ಕಾರದಿಂದ ಡಿಪಿಆರ್ ತ್ವರಿತವಾಗಿ‌ ಮಾಡುತ್ತೇವೆ, ನಮ್ಮ ಪಾಲಿನ ಅನುದಾನ ಕೊಡಿಸುತ್ತೇವೆ. ಈ ಬಗ್ಗೆ ಸಂಸದರು ಸವಾಲು ಹಾಕುವ, ಒತ್ತಾಯಿಸುವ ಅಗತ್ಯವಿಲ್ಲ, ಕೇಂದ್ರ, ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅಭಿವೃದ್ಧಿ ಮಾಡಬೇಕಾಗುತ್ತದೆ’ ಎಂದು ತಿರುಗೇಟು ನೀಡಿದರು.

ಟೀಕೆಗಳು ಸಾಯುತ್ತವೆ ನಾವು ಮಾಡಿರುವ ಕೆಲಸ ಉಳಿಯುತ್ತವೆ. ನಾನು ಬದ್ಧತೆಯಿಂದ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇನೆ. ಅಭಿವೃದ್ಧಿ ಕಾರ್ಯಗಳ‌ ಮೂಲಕ ಜನರ ಹೃದಯದ ಹತ್ತಿರ ಇದ್ದೇನೆ.
ಯಶವಂತರಾಯಗೌಡ ಪಾಟೀಲ, ಶಾಸಕ ಇಂಡಿ

‘ಜುಲೈ 14ರಂದು ಇಂಡಿಯಲ್ಲಿ ನಡೆಯುವ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಭಾಗವಹಿಸುವ ಸರ್ಕಾರಿ ಕಾರ್ಯಕ್ರಮಕ್ಕೆ ಸಂಸದರಿಗೆ ವೈಯಕ್ತಿಕವಾಗಿ ನಾನೇ ಆಹ್ವಾನ ನೀಡುತ್ತೇನೆ, ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಷಯ. ಯಾವ ಕಾರಣಕ್ಕಾಗಿ ಈ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುತ್ತೇನೆ ಎಂದು ಹೇಳಿದ್ದಾರೋ ತಿಳಿಯದು’ ಎಂದು ಹೇಳಿದರು.

‘ಜಿಲ್ಲಾ ಕೇಂದ್ರವಾಗುವುದಕ್ಕೆ ಬೇಕಿರುವಷ್ಟು ಮೂಲಸೌಕರ್ಯವನ್ನು ತಾಲ್ಲೂಕು ಕೇಂದ್ರವಾದ ಇಂಡಿಗೆ ಒದಗಿಸಿದ್ದೇನೆ. ಕ್ಷೇತ್ರದ ಜನರು ಅವಕಾಶ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಕ್ಷೇತ್ರದ ಅಭಿವೃದ್ಧಿಗಾಗಿ ಜನತೆಗೆ ನಾನು ಕೊಟ್ಟ ಮಾತಿನಂತೆ ಕೆಲಸ ಮಾಡುತ್ತಿದ್ದೇನೆ, ಅದಕ್ಕಾಗಿಯೇ ಜನರು ಮತ್ತೆ ಮತ್ತೆ ನನ್ನನ್ನು ಆಯ್ಕೆ ಮಾಡುತ್ತಿದ್ದಾರೆ’ ಎಂದರು.

‘ಹೊರ್ತಿ–ರೇವಣ ಸಿದ್ಧೇಶ್ವರ ಏತನೀರಾವರಿ ಯೋಜನೆಗೆ ಅಂದಿನ ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ಅನುನೋದನೆ ನೀಡಿದ್ದಾರೆ. ಆದರೆ, ಅನುದಾನವನ್ನು ನಮ್ಮ ಸರ್ಕಾರ ಕೊಟ್ಟಿದೆ. ಸಂಸದ ರಮೇಶ ಜಿಗಜಿಣಗಿ ಅವರಿಗೆ ಮಾಹಿತಿ ಕೊರತೆ ಇದ್ದರೆ ಅಂದು ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರನ್ನು ಕೇಳಲಿ’ ಎಂದು ಟಾಂಗ್ ನೀಡಿದರು.

ನಾನು ಸನ್ಯಾಸಿ ಅಲ್ಲ: ವೈಆರ್‌ಪಿ

ವಿಜಯಪುರ: ‘ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರಿಗೆ ಜಿಲ್ಲೆ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ ಸತ್ಯ ಮತ್ತು ವಾಸ್ತವಿಕ ವಿಷಯವನ್ನು ಗಮನಕ್ಕೆ ತಂದಿದ್ದೇನೆ. ಚುನಾವಣೆ ಪೂರ್ವದಲ್ಲಿ ನನಗೆ ಕೊಟ್ಟ ಮಾತನ್ನು ಅವರಿಗೆ ನೆನಪಿಸಿದ್ದೇನೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಮುಖ್ಯಮಂತ್ರಿ ಬದಲಾವಣೆಯಾಗುತ್ತಾರಾ? ನೀವು ಸಚಿವರಾಗುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ಪಕ್ಷದ ಹೈಕಮಾಂಡ್‌ ಹಾಗೂ ಶಾಸಕರು ಎಲ್ಲವನ್ನೂ ತೀರ್ಮಾನಿಸಲಿದ್ದಾರೆ. ನಾನು ಸನ್ಯಾಸಿ ಅಲ್ಲ ಆಕಾಂಕ್ಷೆಗಳಿವೆ’ ಎಂದು ಮಾರ್ಮಿಕವಾಗಿ ಹೇಳಿದರು.

‘ಸುರ್ಜೇವಾಲ ಅವರು ಪಕ್ಷದಲ್ಲಿ ಆಂತರಿಕ ಸಭೆ ನಡೆಸುತ್ತಿರುವುದು ಬಹಳ ಸ್ವಾಗತಾರ್ಹ ಕೆಲಸ. ಶಾಸಕರ ಆಹವಾಲುಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಇದೆ’ ಎಂದರು. ‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಒಬ್ಬ ಪರಿಪೂರ್ಣ ರಾಜಕಾರಣಿಯಾಗಿದ್ದಾರೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಘಟನಾ ಚತುರ ಇದ್ದಾರೆ’ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.