
ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ವಿಜಯಪುರ: ಮೈಯಲ್ಲಿ ಗಾಳಿ (ದೆವ್ವ) ಹೊಕ್ಕಿದೆ ಎಂದು ಮಹಿಳೆಯೊಬ್ಬರ ತಲೆ ಕೂದಲು ಕಿತ್ತು ಗಾಯ ಮಾಡಿ, ಮೌಢ್ಯ ಮೆರೆದಿರುವ ಘಟನೆ ತಾಲ್ಲೂಕಿನ ಹೊನ್ನುಟಗಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆ ಜ್ಯೋತಿ ದಳವಾಯಿ(31) ಎಂಬುವವರು ತನ್ನ ಪತಿ ದುಂಡೇಶ ದಳವಾಯಿ, ಮಾವ ಬಸಪ್ಪ ದಳವಾಯಿ, ಅತ್ತೆ ಸತ್ಯವ್ವ ದಳವಾಯಿ ಹಾಗೂ ದೆವ್ವ ಬಿಡಿಸುವ(ಮಾಟಗಾತಿ) ಕೊಲ್ಹಾರ ತಾಲ್ಲೂಕಿನ ಮುಳವಾಡದ ಮಂಗಳ ಕೋಲಕಾರ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ವಿವರ: ‘ಮೂವರು ಹೆಣ್ಣು ಮಕ್ಕಳನ್ನು ಹೆತ್ತಿದ್ದೇನೆ ಎಂಬ ಕಾರಣಕ್ಕೆ ಪತಿ, ಅತ್ತೆ, ಮಾವ ಸೇರಿಕೊಂಡು ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ, ಇತ್ತೀಚೆಗೆ ವಿನಃ ಕಾರಣ ನಿನ್ನ ಮೈಯಲ್ಲಿ ಗಾಳಿ ಹೊಕ್ಕಿದ್ದು, ದೇವರಿಗೆ ಕೇಳಿಸಬೇಕು ಎಂದು ಹೇಳುತ್ತಿದ್ದರು. ನನಗೆ ಏನೂ ಆಗಿಲ್ಲ ಎಂದರೂ ಕೇಳದೇ ನವೆಂಬರ್ 25ರಂದು ಮುಳವಾಡದಿಂದ ಮಂಗಳ ಕೋಲಕಾರ ಎಂಬುವವರನ್ನು ಮನೆಗೆ ಕರೆಯಿಸಿ ಗಾಳಿ(ದೆವ್ವ) ಬಿಡಿಸುತ್ತೇವೆ ಎಂದು ನನ್ನನ್ನು ಮನೆಯೊಳಗೆ ಕೂಡಿಹಾಕಿ, ತಲೆಯ ಕೂದಲನ್ನು ಬ್ಲೇಡಿನಿಂದ ಕತ್ತರಿಸಿ, ಕಾಲಿನಿಂದ ಒದ್ದು ದೈಹಿಕ ಹಿಂಸೆ ನೀಡಿ ದೌರ್ಜನ್ಯ ಮೆರೆದಿದ್ದಾರೆ’ ಎಂದು ಜ್ಯೋತಿ ದೂರಿನಲ್ಲಿ ತಿಳಿಸಿದ್ದಾರೆ.
‘ಕೂದಲು ಕಿತ್ತಿರುವುದರಿಂದ ತಲೆಯಲ್ಲಿ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ತವರು ಮನೆಯಲ್ಲಿ ಇದ್ದೇನೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಡಿ.1ರಂದು ನೀಡಿರುವ ದೂರಿನಲ್ಲಿ ಜ್ಯೋತಿ ದಳವಾಯಿ ಒತ್ತಾಯಿಸಿದ್ದಾರೆ.
‘ಮಹಿಳೆ ವಿರುದ್ಧ ದೌರ್ಜನ್ಯ ಎಸಗಿ, ಮೌಢ್ಯ ಮೆರೆದಿರುವ ನಾಲ್ವರು ಆರೋಪಿಗಳ ವಿರುದ್ಧ ಈಗಾಗಲೇ ದೂರು ದಾಖಲಿಸಿಕೊಂಡು, ಹೇಳಿಕೆ ಪಡೆಯಲಾಗಿದೆ. ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.