ಬಸವನಬಾಗೇವಾಡಿ: ಪ್ರತ್ಯೇಕ ಕೊಳವೆಬಾವಿ ಕೊರೆಯಿಸಿ ಗ್ರಾಮಸ್ಥರಿಗೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ನಿಡಗುಂದಿ ತಾಲ್ಲೂಕಾಡಳಿತಕ್ಕೆ ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಲ್ಯಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಗ್ರಾಮಸ್ಥರು ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಪರಿಶ್ರಮದಿಂದ ಸದ್ಯ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಗ್ರಾಮದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ.
ಸಮಸ್ಯೆಗೆ ಕಾರಣವಾದ ಹಳ್ಳದ ಬಳಿಯ ಕೊಳವೆಬಾವಿ ಸ್ಥಗಿತಗೊಳಿಸಿ, ಗ್ರಾಮದ ಎಲ್ಲಾ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಿ ಮರು ಪರೀಕ್ಷೆಗೊಳಪಡಿಸಲಾಗಿದೆ. ಮತ್ತೊಂದು ಕೊಳವೆ ಬಾವಿಯಿಂದ ಗ್ರಾಮದ ಓವರ್ ಹೆಡ್ ಟ್ಯಾಂಕ್‌ಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರಿನ ಸಂಪರ್ಕ ಕಲ್ಪಿಸಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗಿದೆ.
‘ಸದ್ಯ ಓವರ್ ಹೆಡ್ ಟ್ಯಾಂಕ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರಿನ ಸಂಪರ್ಕ ಕಲ್ಪಿಸಿರುವ ಕೊಳವೆ ಬಾವಿಯೂ ಸಹ ಗ್ರಾಮದ ಹಳ್ಳದ ಬಳಿಯೇ ಇದೆ. ಇದರಿಂದ ತೀವ್ರ ಮಳೆಯಾಗಿ ಆ ಕೊಳವೆಬಾವಿಗೂ ಕೊಳಚೆ ನೀರು ಸೇರುವ ಸಾಧ್ಯತೆ ಇದೆ. ಇದರಿಂದ ಮತ್ತೆ ಸಮಸ್ಯೆಯಾಗದಂತೆ ತಾಲ್ಲೂಕು ಆಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮದ ಬೇರೆ ಸೂಕ್ತ ಜಾಗದಲ್ಲಿ ಕೊಳವೆಬಾವಿ ಕೊರೆಯಿಸಿ ಆ ಮೂಲಕ ಓವರ್ ಹೆಡ್ ಟ್ಯಾಂಕ್ ಹಾಗೂ ಆರ್.ಓ ಘಟಕಕ್ಕೆ ನೀರಿನ ಸಂಪರ್ಕ ಕಲ್ಪಿಸಬೇಕು. ಇದರಿಂದ ಗ್ರಾಮಕ್ಕೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರು ಕಲ್ಪಿಸಿದಂತಾಗುತ್ತದೆ. ಅವಶ್ಯವಿದ್ದರೆ ಕೊಳವೆಬಾವಿ ಕೊರೆಯಲು ಗ್ರಾಮಸ್ಥರು ಜಾಗದ ನೆರವು ನೀಡಲು ಸಿದ್ದವಾಗಿದ್ದೇವೆ’ ಎಂದು ಗ್ರಾಮದ ಮುಖಂಡ ಅವಣ್ಣ ಗ್ವಾತಗಿ ‘ಪ್ರಜಾವಾಣಿ’ ಗೆ ತಿಳಿಸಿದರು.
ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಟಗಿ ಹಾಗೂ ಬ್ಯಾಲ್ಯಾಳ ಗ್ರಾಮಗಳನ್ನು ಹೊರತುಪಡಿಸಿ ಉಳಿದ ಕೊಡಗಾನೂರ, ರಾಜನಾಳ, ಅರೇಶಂಕರ, ಬಿದ್ನಾಳ, ಜೀರಲಬಾವಿ, ಮುದ್ದಾಪುರ ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡು ಬಹುದಿನಗಳಾಗಿವೆ.
ಕೂಡಲೇ ತಾಲ್ಲೂಕಾಡಳಿತ ಈ ಗ್ರಾಮಗಳ ಶುದ್ಧ ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಎಲ್ಲಾ ಗ್ರಾಮಸ್ಥರಿಗೂ ಶುದ್ಧ ಕುಡಿಯುವ ನೀರು ಕಲ್ಪಿಸುವ ಕೆಲಸ ಮಾಡಬೇಕು ಎಂದು ಗ್ರಾಮಸ್ಥರಾದ ವಿಠಲ ಅಸ್ಕಿ ಹಾಗೂ ಮಹಾಂತೇಶ ಬೇವನೂರು ಆಗ್ರಹಿಸಿದ್ದಾರೆ.
‘ಜಾಗ ಕೊಟ್ಟರೆ ಪ್ರತ್ಯೇಕ ಕೊಳವೆಬಾವಿ’:
ಹಾಲ್ಯಾಳ ಗ್ರಾಮದಲ್ಲಿ ಸದ್ಯ ಸಂಪರ್ಕ ಕಲ್ಪಿಸಿರುವ ಕೊಳೆವೆ ಬಾವಿ ನೀರನ್ನು ಎಲ್ಲಾ ರೀತಿ ಪರೀಕ್ಷಿಸಿ ಕುಡಿಯಲು ಯೋಗ್ಯವೆಂದು ಕಂಡುಬಂದ ಮೇಲೆಯೇ ಓವರ್ ಹೆಡ್ ಟ್ಯಾಂಕ್ ಹಾಗೂ ಆರ್.ಒ ಘಟಕಕ್ಕೆ ಸಂಪರ್ಕ ನೀಡಲಾಗಿದೆ. ಗ್ರಾಮಸ್ಥರು ಜಾಗ ಕೊಡಲು ಮುಂದೆ ಬಂದರೆ ತಾಲ್ಲೂಕಾಡಳಿತದಿಂದ ಪ್ರತ್ಯೇಕ ಕೊಳವೆಬಾವಿ ಕೊರೆಯಿಸಿ ಕೊಡಲು ಸಿದ್ದ. ಇನ್ನು ಗ್ರಾ.ಪಂ ವ್ಯಾಪ್ತಿಯ ಆರ್.ಒ ಘಟಕಗಳ ಸ್ಥಗಿತ ಕುರಿತು ತಾ.ಪಂ ಇಓ ಅವರೊಂದಿಗೆ ಚರ್ಚಿಸಿ ಗಮನಹರಿಸುತ್ತೇನೆ ಎಂದು ತಹಶೀಲ್ದಾರ್ ಎ.ಡಿ.ಅಮರವಾಡಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.