ವಿಜಯಪುರ: ಮತದಾರರ ಪಟ್ಟಿಯಲ್ಲಿರುವ ದೋಷ ಹಾಗೂ ಮತ ಕಳವು ಕುರಿತು ಪಕ್ಷದ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು. ಮನೆ ಮನೆಗೆ ತೆರಳಿ ಮತದಾರರನ್ನು ಜಾಗೃತಗೊಳಿಸಬೇಕು ಎಂದು ಕೆ.ಪಿ.ಸಿ.ಸಿ. ಸೇವಾದಳದ ರಾಜ್ಯ ಅಧ್ಯಕ್ಷ ಎಂ. ರಾಮಚಂದ್ರಪ್ಪ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಸೇವಾದಳ ಸಮಿತಿಯ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾ ಆಯೋಗದ ಹಾಗೂ ಬಿಜೆಪಿಯವರ ಕುತಂತ್ರಗಳನ್ನು ಬಯಲುಗೊಳಿಸುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಿ, ಮುಂಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿ ಬೆಳೆಸಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಸೇವಾ ದಳದಿಂದ ಮುಂದಿನ ತಿಂಗಳು ವಿಜಯಪುರ ಜಿಲ್ಲೆಯಲ್ಲಿ ಮೂರು ದಿನದ ಬೃಹತ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಆ ತರಬೇತಿ ಶಿಬಿರವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಪಕ್ಷ ಸಂಘಟನೆಯಲ್ಲಿ ತಾವೆಲ್ಲರೂ ಪ್ರಾಮಾಣಿಕತೆಯಿಂದ ದುಡಿದರೆ ಪಕ್ಷ ನಿಮ್ಮನ್ನು ಮುಂದೊಂದು ದಿನ ಗುರುತಿಸಿ ನಿಮಗೆ ಉತ್ತಮ ಸ್ಥಾನಮಾನ ಕೊಟ್ಟೇ ಕೊಡುತ್ತದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಜಾತಿ, ಭೇದ ಭಾವ ಯಾವುದೇ ಇಲ್ಲ. ಇಲ್ಲಿ ರಾಷ್ಟ್ರ, ರಾಜ್ಯದ ಒಳತಿಗಾಗಿ ಸರ್ವಜನರ ಹಿತಾಶಕ್ತಿ ಕಾಪಾಡುವುದರ ಜೊತೆಗೆ ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸಿದ್ಧಾಂತಗಳೊಂದಿಗೆ ಜನರ ಒಳಿತು ಮಾಡುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದರು.
ನಿಷ್ಠೆ ಹಾಗೂ ಶಿಸ್ತಿನಿಂದ ಪಕ್ಷದ ಸಂಘಟನೆ ಮಾಡುವುದರ ಮೂಲಕ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಪಕ್ಷ ಜಯಬೇರಿ ಬಾರಿಸಲು ಮತ್ತು ಜನಸಾಮಾನ್ಯರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡೋಣ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಗಂಗಾಧರ ಸಂಬಣ್ಣಿ, ರಾಜ್ಯ ಸೇವಾದಳದ ಕಾರ್ಯದರ್ಶಿ ರಮೇಶ, ಶಬ್ಬೀರ ಜಹಗೀರದಾರ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಚಾಂದಸಾಬ ಗಡಗಲಾವ, ರಾಜೇಶ್ವರಿ ಚೋಳಕೆ, ವಿಜಯಕುಮಾರ ಕಾಳೆ, ಸಮೀನಾ ಮಂಟೂರ, ಶರಣಪ್ಪ ಯಕ್ಕುಂಡಿ, ಸಂತೋಷ ಬಾಲಗಾವಿ, ಪ್ರಕಾಶ ಗುಣದಾಳ, ರಂಜಾನ್ ಹೆಬ್ಬಾಳ, ಕೃಷ್ಣಾ ಕಾಮಟೆ, ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ ಇದ್ದರು.
ಕಾಂಗ್ರೆಸ್ ಸೇವಾದಳದಿಂದ ಪ್ರತಿ ತಿಂಗಳ ಕೊನೆಯ ವಾರದಂದು ಪಕ್ಷದ ಕಚೇರಿಯ ಎದುರು ರಾಷ್ಟ್ರ ಧ್ವಜಾರೋಹಣ ಮಾಡಿ ರಾಷ್ಟ್ರ ಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕುಎಂ.ರಾಮಚಂದ್ರಪ್ಪಅಧ್ಯಕ್ಷ ಕೆ.ಪಿ.ಸಿ.ಸಿ. ಸೇವಾದಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.