ADVERTISEMENT

ಸಿಂದಗಿ| ಮತದಾರರ ಪಟ್ಟಿ ಪರಿಷ್ಕರಣೆ ಅಸಮರ್ಪಕ: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:19 IST
Last Updated 1 ಫೆಬ್ರುವರಿ 2026, 4:19 IST
ಸಿಂದಗಿ ತಾಲ್ಲೂಕಿನಲ್ಲಿ ಮತದಾರಪಟ್ಟಿ ಪರಿಷ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಶನಿವಾರ ಪಟ್ಟಣದ ಪ್ರಜಾಸೌಧ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು. 
ಸಿಂದಗಿ ತಾಲ್ಲೂಕಿನಲ್ಲಿ ಮತದಾರಪಟ್ಟಿ ಪರಿಷ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಶನಿವಾರ ಪಟ್ಟಣದ ಪ್ರಜಾಸೌಧ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು.    

ಸಿಂದಗಿ: ತಾಲ್ಲೂಕಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವದಲ್ಲಿ ಶನಿವಾರ ಇಲ್ಲಿಯ ಪ್ರಜಾಸೌಧ ಎದುರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಒಬ್ಬ ವ್ಯಕ್ತಿಗೆ ಒಂದು ಮತ ಇರಬೇಕು. ಆದರೆ ವಲಸೆ ಹೋದವರು ಎರಡೆರಡು ಮತಗಳನ್ನು ಹೊಂದಿದ್ದಾರೆ. ಈ ಬಗ್ಗೆ ಮ್ಯಾಪಿಂಗ್ ಮಾಡಬೇಕಾದ ಬಿಎಲ್ಓ ಗಳು ಶಾಲೆ, ಮನೆಗಳಲ್ಲಿ ಕುಳಿತುಕೊಂಡು ಮಾಡುತ್ತಿದ್ದಾರೆ. ನಕಲಿ ಮತಗಳು, ಮೃತರಾದವರ ಹೆಸರುಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಈರಣ್ಣ ರಾವೂರ ಜಿಲ್ಲೆಯಲ್ಲಿ ಅಕ್ರಮ ಮತಗಳು, ನುಸುಳುಕೋರರ ಸಂಖ್ಯೆ ಹೆಚ್ಚುತ್ತಿದೆ. ಈ ಕುರಿತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. 

ADVERTISEMENT

ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮಾತನಾಡಿ, ಬಿಎಲ್ಓಗಳು ಮನೆ, ಮನೆಗೆ ಹೋಗಿ ಮತದಾರರ ಮ್ಯಾಪಿಂಗ್ ಮಾಡಬೇಕು. ಈ ಬಗ್ಗೆ ತಾಲ್ಲೂಕು ಆಡಳಿತ ಅವರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಪ್ರಮುಖ ಚಿದಾನಂದ ಚಲವಾದಿ, ಬಾಂಗ್ಲಾ ದೇಶವನ್ನೊಳಗೊಂಡು ಬೇರೆ ರಾಷ್ಟ್ರಗಳ ಜನರು ಜಿಲ್ಲೆಯಲ್ಲಿಯೂ ಸೇರಿಕೊಂಡಿದ್ದಾರೆ, ಅಂಥವರನ್ನು ಗುರುತಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಕಾರರು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಪ್ರಮುಖರಾದ ಬಿ.ಎಚ್.ಬಿರಾದಾರ, ಗುರು ತಳವಾರ, ಪ್ರಶಾಂತ ಕದ್ದರಕಿ, ಮೂಲಿಮನಿ, ಸದಾಶಿವ ಕೋರಳ್ಳಿ, ಸಿದ್ರಾಮ ಆನಗೊಂಡ, ಅನುಸೂಯ ಪಾರಗೊಂಡ, ಜಗದೇವಿ ಬಿರಾದಾರ, ಶ್ಯಾಮಲಾ ಮಂದೇವಾಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.