ADVERTISEMENT

ನಾಳೆ ಕಾಳಗಿ ಪಟ್ಟಣ ಪಂಚಾಯಿತಿಯ ಚುನಾವಣೆಗೆ ಮತದಾನ

ಸಾರ್ವತ್ರಿಕ ಚುನಾವಣೆ: 4ನೇ ವಾರ್ಡಿಗೂ ಚುನಾವಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 3:11 IST
Last Updated 16 ಆಗಸ್ಟ್ 2025, 3:11 IST
<div class="paragraphs"><p>– ‍ಪ್ರಜಾವಾಣಿ ಚಿತ್ರ</p></div>
   

– ‍ಪ್ರಜಾವಾಣಿ ಚಿತ್ರ

ಕಾಳಗಿ: ಕಾಳಗಿ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಒಟ್ಟು 11ವಾರ್ಡ್‌ಗಳಿಗೆ ಭಾನುವಾರ (ಆ.17) ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಒಟ್ಟು 4,353 ಪುರುಷ, 4,100 ಮಹಿಳೆ, 2 ಇತರೆ ಸೇರಿ ಅಂತಿಮವಾಗಿ 8,455 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

ADVERTISEMENT

‘ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ವಾರ್ಡ್ ನಂ.4ರಲ್ಲಿ ಮೂವರು ನಾಮಪತ್ರ ಸಲ್ಲಿಸಿದ್ದರು. ಇಬ್ಬರ ನಾಮಪತ್ರ ತಿರಸ್ಕೃತಗೊಂಡು ಒಬ್ಬರು ಮಾತ್ರ ಕಣದಲ್ಲಿದ್ದರು. ಈ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿರುವುದಾಗಿ ಆ.9ರಂದು ಘೋಷಿಸಲಾಗಿತ್ತು. ಆದರೆ ತಿರಸ್ಕೃತಗೊಂಡ ಅಭ್ಯರ್ಥಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ತಿರಸ್ಕೃತ ಮತ್ತು ಅವಿರೋಧ ಆಯ್ಕೆಯನ್ನು ರದ್ದುಗೊಳಿಸಿ ಚುನಾವಣೆಗೆ ಅವಕಾಶ ಕಲ್ಪಿಸಿ ಆ.14ರಂದು ಆದೇಶಿಸಿದೆ.

ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಅಂಬವ್ವ ಕಾಳಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪಾರ್ವತಿ ಜಗನ್ನಾಥ ಮಧ್ಯೆ ಇದೇ ದಿನ (ಆ.17) ಚುನಾವಣೆ ನಡೆಸಲಾಗುತ್ತಿದೆ’ ಎಂದು ಚುನಾವಣಾಧಿಕಾರಿ ಬಸಲಿಂಗಪ್ಪ ಡಿಗ್ಗಿ ತಿಳಿಸಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಉರ್ದು) ಕಟ್ಟಡದಲ್ಲಿ-3, ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ-3, ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದಲ್ಲಿ-2 ಮತ್ತು ಲಕ್ಷ್ಮಣನಾಯಕ ತಾಂಡಾ, ಚಿಕ್ಕಂಡಿ ತಾಂಡಾ ಹಾಗೂ ಕರಿಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ತಲಾ ಒಂದು ಮತದಾನ ಕೇಂದ್ರ ಸ್ಥಾಪಿಸಲಾಗಿದೆ.

‘ಮತಗಟ್ಟೆಗೆ 5 ಜನರಂತೆ ಒಟ್ಟು 13 ತಂಡಗಳನ್ನು ರಚಿಸಿ, ಸಿಬ್ಬಂದಿ ನಿಯೋಜಿಸಿ, 7 ಜೀಪುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟಾರೆ ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಪೃಥ್ವಿರಾಜ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ಆದೇಶ: ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಆ.16 ಸಂಜೆ 6 ರಿಂದ ಆ.18 ಬೆಳಿಗ್ಗೆ 6ರವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಮತಗಟ್ಟೆಗಳ ಸುತ್ತಲೂ 200ಮೀಟರ್ ಒಳಗೆ ಅನ್ಯವ್ಯಕ್ತಿಗಳ ಓಡಾಡುವಂತಿಲ್ಲ, ಸಾರ್ವಜನಿಕರು ಹೊಂದಿರುವ ಆಯುಧಗಳನ್ನು ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವಂತೆ, ಸಂತೆ, ಜಾತ್ರೆಗಳನ್ನು ನಿಷೇಧಿಸಿ ಅವರು ಆ.14ರಂದು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.