ADVERTISEMENT

ಕೊಲ್ಹಾರ ರೈತನ ಕೈಹಿಡಿದ ಕಲ್ಲಂಗಡಿ ಬೆಳೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 7:17 IST
Last Updated 25 ಏಪ್ರಿಲ್ 2025, 7:17 IST
<div class="paragraphs"><p>ಕಲ್ಲಂಗಡಿ ಹಣ್ಣಿನ ಬೆಳೆ</p></div>

ಕಲ್ಲಂಗಡಿ ಹಣ್ಣಿನ ಬೆಳೆ

   

ಕೊಲ್ಹಾರ: ಪಟ್ಟಣದ ಯುವ ರೈತ ಮೈಬೂಬಖಾನ್‌ ಪಟೇಲ ಬೇಸಿಗೆಯಲ್ಲಿ ಮೂರು ಎಕರೆ ಜಮೀನಿನಲ್ಲಿ ಗುಣಮಟ್ಟದ ಕಲ್ಲಂಗಡಿ ಹಣ್ಣು ಬೆಳೆದು ಲಕ್ಷಾಂತರ ರೂಪಾಯಿಗಳ ಆದಾಯ ಪಡೆದಿದ್ದಾರೆ.

ಕೊಲ್ಹಾರ ಪಟ್ಟಣದ ಆಸಂಗಿ ರಸ್ತೆಯ ಪಕ್ಕದ ಒಟ್ಟು 24 ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ ಕಲ್ಲಂಗಡಿ ಕೃಷಿ ಮಾಡಿ ಉತ್ತಮ ಫಸಲು ಪಡೆದಿದ್ದಾರೆ. ಮೊದಲು ಇವರು ಈರುಳ್ಳಿ, ಕಬ್ಬು, ಮೆಕ್ಕೆಜೋಳ ಬೆಳೆದು ಲಾಭ ಬರದೇ ಕೈ ಸುಟ್ಟು ಕೊಂಡಿದ್ದರು. ಇದರಿಂದ ಹೊರಬರಲು ಆಯ್ಕೆ ಮಾಡಿಕೊಂಡ ಕಲ್ಲಂಗಡಿ ಕೃಷಿ ಉತ್ತಮ ಪ್ರತಿಫಲ ನೀಡಿದೆ.

ADVERTISEMENT

ಬೇಸಾಯ ಕ್ರಮ: ಮೂರು ಎಕರೆ ಜಮೀನನ್ನು ಟ್ರ್ಯಾಕ್ಟರ್ ಮೂಲಕ ಹದಗೊಳಿಸಿದ್ದಾರೆ. ಮಣ್ಣಿನಲ್ಲಿ ಗೊಬ್ಬರ ಮಿಶ್ರಣವಾದ ಬಳಿಕ ಸಾಲಿನಿಂದ ಸಾಲಿಗೆ 4.5 ಅಡಿಯಂತೆ ಸಾಲು ಬಿಟ್ಟು ಸಾಲಿನ ಸಸಿಯಿಂದ ಸಸಿಗೆ 2 ಅಡಿಯಂತೆ ಸಾತಾರದ ಕಳಶ ಕಂಪನಿಯಿಂದ ತಂದ ಬೀಜ ಬಿತ್ತಿದ್ದಾರೆ. 15,000 ಸಸಿಗಳನ್ನು ಬೆಳೆಸಿ ನಂತರ ನಾಟಿ ಮಾಡಿ ಹನಿ ನೀರಾವರಿ ಮೂಲಕ ನೀರು ಉಣಿಸಿದ್ದಾರೆ.

ಕಲ್ಲಂಗಡಿ ಹಣ್ಣಿನ ಬೇಸಾಯಕ್ಕೆ ಸೂಕ್ತ ಸಮಯವೆಂದರೆ ಫೆಬ್ರುವರಿ ಮೊದಲನೇ ವಾರದಲ್ಲಿ ನಾಟಿ ಮಾಡಬೇಕು. 55 ರಿಂದ 60 ದಿನಗಳಲ್ಲಿ ಫಸಲು ಕೈಗೆ ಬರುತ್ತದೆ. ಈ ಬೆಳೆಗೆ ರೋಗ ಬಾಧೆ ಕಡಿಮೆ. 3 ಎಕರೆಯಲ್ಲಿ 75 ರಿಂದ 80 ಟನ್‌ಗಳಷ್ಟು ಇಳುವರಿ ಬಂದಿದೆ.

ಕಲಂಗಡಿ ಹಣ್ಣಿನ ಬೆಳೆ ಬೆಳೆದ ರೈತ ಮೈಬೂಬಖಾನ ಪಟೇಲ.

₹ 6 ಲಕ್ಷ ಲಾಭ

‘ಒಂದು ಎಕರೆ ಕಲ್ಲಂಗಡಿ ಹಣ್ಣಿನ ಬೇಸಾಯಕ್ಕೆ ₹ 20 ಸಾವಿರದಂತೆ ₹ 60 ಸಾವಿರ ಖರ್ಚು ತಗುಲುತ್ತದೆ. ಬೆಂಗಳೂರಿನ ಮೆಟ್ರೋ ಮಾರುಕಟ್ಟೆಗೆ ಹಣ್ಣು ಕಳುಹಿಸಿರುವೆ. ಹಣ್ಣಿನ ಬೆಲೆ ಸರಾಸರಿ ಕೆ.ಜಿ.ಗೆ ₹ 8ರಿಂದ ₹ 10ರಷ್ಟು ಇದ್ದು ₹ 6 ಲಕ್ಷ ದಿಂದ ₹ 7.5 ಲಕ್ಷ ಆದಾಯ ಲಭಿಸಿದೆ. ಮೂರು ಎಕರೆ ಬೆಳೆಯಿಂದ ನಿವ್ವಳ ₹ 5 ರಿಂದ ₹ 6 ಲಕ್ಷ ಲಾಭ ಬಂದಿದೆ’ ಎಂದು ಮೈಬೂಬಖಾನ್‌ ಪಟೇಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.