ದೇವರಹಿಪ್ಪರಗಿ: ಬಿ.ಬಿ. ಇಂಗಳಗಿ ಗ್ರಾಮದಲ್ಲಿ ಸದ್ಯ 10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ನೀರಿಗಾಗಿ ಜನ ನಿತ್ಯ ಜಗಳವಾಡುವ ದೃಶ್ಯ ಕಂಡು ಬರುತ್ತಿದೆ.
ತಾಲ್ಲೂಕಿನ ಕೊಂಡಗೂಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಬಿ. ಇಂಗಳಗಿ, ಅಂಬಳನೂರ, ಕೆಸರಟ್ಟಿ ಗ್ರಾಮಗಳಲ್ಲಿ ಪ್ರತಿ ವರ್ಷ ಬೇಸಿಗೆ ಬರುತ್ತಿದ್ದಂತೆಯೇ ನೀರಿನ ಹಾಹಾಕಾರ ಆರಂಭಗೊಳ್ಳುತ್ತದೆ. ಅಂತೆಯೇ ನೀರಿಗಾಗಿ ಗ್ರಾಮಸ್ಥರು ನಿತ್ಯ ನೆರೆಹೊರೆಯವರೊಂದಿಗೆ ವಾಗ್ವಾದ, ಜಗಳ ಮಾಡಿ ಮನಸ್ತಾಪ ಮಾಡಿಕೊಳ್ಳುವಂತಾಗಿದೆ.
‘ನಮ್ಮೂರಲ್ಲಿ ಬೇಸಿಗೆಯಾದರೂ ಏಕೆ ಬರುತ್ತದೆ ಎನ್ನುವಂತಾಗಿದೆ. ವರ್ಷದ ಉಳಿದ ತಿಂಗಳು ಚೆನ್ನಾಗಿರುವ ಜನತೆ ಬೇಸಿಗೆ ಆರಂಭಗೊಳ್ಳುತ್ತಿದ್ದಂತೆಯೇ ಕುಡಿಯುವ ನೀರಿಗಾಗಿ ಜಗಳವಾಡುವಂಥ ಪರಿಸ್ಥಿತಿ ಬಂದಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಲೀಂ ವಠಾರ ಹೇಳಿದರು.
‘ಕೊಡ, ಬಿಂದಿಗೆಗಳೊಂದಿಗೆ ನೀರಿನ ಮೂಲಗಳ ಮುಂದೆ ನಿಂತು ಕಾಯುವುದು, ಈಗ ನಮ್ಮ ಪಾಳಿ, ನಾವೇ ಬೇಗ ಬಂದಿದ್ದೇವೆ ಎಂಬ ಮಾತುಗಳ ಮೂಲಕ ವಾದ ಆರಂಭಿಸಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತದೆ. ಗ್ರಾಮಸ್ಥರು ಪ್ರತಿ ವರ್ಷ ತಾವು ಎದುರಿಸುತ್ತಿರುವ ನೀರಿನ ತಾಪತ್ರಯದ ಕುರಿತು ಗ್ರಾಮ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ದೂರಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಗ್ರಾಮದಲ್ಲಿ 8 ರಿಂದ 10 ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿದೆ. ಮನೆಯಲ್ಲಿನ ಎಲ್ಲರಿಗೂ, ದನಕರುಗಳಿಗೂ ಇದು ಸಾಲುವುದಿಲ್ಲ’ ಎಂದು ಅವರು ತಿಳಿಸಿದರು.
‘ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಜರುಗುವ ಸಭೆಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಅಗತ್ಯ ಹಣ ಮೀಸಲಿಡಲಾಗಿದೆ. ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂಬ ಮಾತುಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಗ್ರಾಮ ಮಟ್ಟದಲ್ಲಿ ಇರುವ ಪರಿಸ್ಥಿತಿಯೇ ಬೇರೆ. ಆದ್ದರಿಂದ ಗ್ರಾಮಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಸಹ ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದಾಗಿ ನೋಡಬೇಕು. ಗ್ರಾಮಕ್ಕೆ ಕುಡಿಯುವ ನೀರಿನ ಕಾಯಂ ವ್ಯವಸ್ಥೆ ಕಲ್ಪಿಸಬೇಕು’ ಎಂದು ಮಡಿವಾಳಯ್ಯ ಹಿರೇಮಠ, ಚಂದಪ್ಪ ಅಗಸರ, ಪರಸಪ್ಪ ದಲ್ಲಾಳಿ, ಬಡೇಸಾಬ್ ದೊಡಮನಿ, ಲಾಲ್ಸಾಬ್ ನದಾಫ್, ಲಾಲ್ಅಹ್ಮದ್ ದೊಡಮನಿ, ಸಲೀಂ ಕೋಲಾರ, ಹಣಮಂತ ಮಾದರ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.
ಬಿ.ಬಿ.ಇಂಗಳಗಿ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ನೀರಿನ ಸಮಸ್ಯೆಯನ್ನು ಪರಿಶೀಲಿಸುತ್ತೇನೆ. ನಂತರ ಅಗತ್ಯ ಕ್ರಮ ವಹಿಸಲಾಗುವುದುಭಾರತಿ ಚೆಲುವಯ್ಯ ಇಒ ತಾಲ್ಲೂಕು ಪಂಚಾಯಿತಿ ದೇವರಹಿಪ್ಪರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.