ADVERTISEMENT

ಜ್ಞಾನ ಸಂಪತ್ತು ಎಲ್ಲಕ್ಕು ಮಿಗಿಲು: ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ ಹೊಸಮನಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 9:06 IST
Last Updated 16 ಸೆಪ್ಟೆಂಬರ್ 2019, 9:06 IST
ವಿಜಯಪುರದಲ್ಲಿ ಈಚೆಗೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ ಹೊಸಮನಿ ಮಾತನಾಡಿದರು
ವಿಜಯಪುರದಲ್ಲಿ ಈಚೆಗೆ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ ಹೊಸಮನಿ ಮಾತನಾಡಿದರು   

ವಿಜಯಪುರ: ‘ಎಲ್ಲ ಸಂಪತ್ತಿಗಿಂತ ಜ್ಞಾನ ಸಂಪತ್ತು ದೊಡ್ಡದು. ತಮ್ಮ ಜ್ಞಾನ ಸಂಪತ್ತಿನಿಂದಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಖ್ಯಾತಿ ಹೊಂದಿದರು’ ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ ಹೊಸಮನಿ ಹೇಳಿದರು.

ಇಲ್ಲಿನ ಬುದ್ಧವಿಹಾರದಲ್ಲಿ ನಡೆಯುತ್ತಿರುವ ವರ್ಷಾವಾಸ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭೌತಿಕ ಸಂಪತ್ತನ್ನು ಯಾರಾದರೂ ಕೊಳ್ಳೆ ಹೊಡೆಯಬಹುದು. ಆದರೆ, ಜ್ಞಾನ ಸಂಪತ್ತನ್ನು ಯಾರೂ ಕಳವು ಮಾಡಲಾಗದು. ಅದಕ್ಕೆಂದೇ ಅಂಬೇಡ್ಕರರು ಹೇಳಿದಂತೆ ಜನರು ದೇವಾಲಯಗಳ ಮುಂದೆ ಸಾಲುಗಟ್ಟಿ ನಿಲ್ಲುವುದಕ್ಕಿಂತ ಗ್ರಂಥಾಲಯಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಬೇಕು’ ಎಂದು ಆಶಿಸಿದರು.

ADVERTISEMENT

‘ಜಗತ್ತಿನ ಅತಿ ಹೆಚ್ಚು ವಿದ್ಯಾವಂತರಲ್ಲಿ ಒಬ್ಬರಾಗಿದ್ದ ಅಂಬೇಡ್ಕರ್ ಅವರು ತಾವು ಹೊಂದಿದ್ದ ಅಗಾಧ ಪಾಂಡಿತ್ಯದಿಂದಾಗಿಯೇ ಭಾರತದಂತಹ ದೊಡ್ಡ ದೇಶಕ್ಕೆ ಉತ್ಕೃಷ್ಟ ಸಂವಿಧಾನವನ್ನು ನೀಡಲು ಸಾಧ್ಯವಾಯಿತು. ಶಿಕ್ಷಣದಲ್ಲಿಯೇ ವಿಮೋಚನೆ ಅಡಗಿದೆ ಎಂದು ತಿಳಿದಿದ್ದ ಅಂಬೇಡ್ಕರ್ ಶಿಕ್ಷಣಕ್ಕೆ ಒತ್ತು ನೀಡಿದ್ದರು. ದಲಿತರು ಮಾತ್ರವಲ್ಲ ಎಲ್ಲ ಶೋಷಿತ ವರ್ಗಗಳು ಶಿಕ್ಷಣ ಪಡೆಯಬೇಕು ಎಂದು ಕರೆ ನೀಡಿದ್ದರು’ ಎಂದು ಸ್ಮರಿಸಿದರು.

ಬುದ್ಧವಿಹಾರದಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಬೇಕು ಎಂಬ ಮನವಿಗೆ ಸ್ಪಂದಿಸಿದ ಸತೀಶ ಹೊಸಮನಿ, ಹೊಸ ಗ್ರಂಥಾಲಯ ಮಂಜೂರು ಮಾಡಿದರು.

ಹಿರಿಯ ಮುಖಂಡ ಚಂದ್ರಶೇಖರ ಕೊಡಬಾಗಿ, ಭಾರತೀಯ ಬೌದ್ಧ ಮಹಾಸಭಾದ ಕೇಂದ್ರೀಯ ಮಾರ್ಗದರ್ಶಕಿ ಶಾರದಾತಾಯಿ ಗಜಭೆ, ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ಡಿ.ಅಜಯಕುಮಾರ, ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರಾಜಕುಮಾರ ಜೊಳ್ಳಿ ಮಾತನಾಡಿದರು.

ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅಧ್ಯಕ್ಷತೆ ವಹಿಸಿದ್ದರು. ಮಹೇಶ್ ಕ್ಯಾತನ್ ಸ್ವಾಗತಿಸಿದರು. ಸಂತೋಷ ಶಹಾಪುರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.