ADVERTISEMENT

ವಾರಾಂತ್ಯ ಕರ್ಫ್ಯೂ: ಮಾರ್ಗಸೂಚಿ ಪಾಲಿಸಲು ಸೂಚನೆ

ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 16:20 IST
Last Updated 18 ಜೂನ್ 2021, 16:20 IST
ಪಿ.ಸುನೀಲ್‌ ಕುಮಾರ್
ಪಿ.ಸುನೀಲ್‌ ಕುಮಾರ್   

ವಿಜಯಪುರ: ಕೋವಿಡ್ ನಿಯಂತ್ರಣ ಸಂಬಂಧ ಶುಕ್ರವಾರ ಸಂಜೆ 7ರಿಂದ ಆರಂಭವಾಗಿರುವವಾರಾಂತ್ಯದ ಕರ್ಫ್ಯೂ ಸೋಮವಾರ ಬೆಳಿಗ್ಗೆ 5 ರ ವರೆಗೆ ಜಾರಿಯಲ್ಲಿರಲಿದ್ದು,ಅಗತ್ಯ ಮತ್ತು ತುರ್ತು ಚಟುವಟಿಕೆ ಹೊರತುಪಡಿಸಿ, ಸಾರ್ವಜನಿಕ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ತುರ್ತು, ಅಗತ್ಯ ಸೇವೆಗಳು ಮತ್ತು ಕೋವಿಡ್ -19 ಕಂಟೈನ್‌ಮೆಂಟ್ ಮತ್ತು ಮ್ಯಾನೇಜ್‌ಮೆಂಟ್ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಎಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮ, ಇತ್ಯಾದಿಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅಧಿಕಾರಿಗಳು, ಸಿಬ್ಬಂದಿಗಳ ಮುಕ್ತ ಸಂಚಾರಕ್ಕೆ ಅವಕಾಶವಿರುತ್ತದೆ.

ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24X7 ಕಾರ್ಯಾಚರಣೆಗಳ ಅಗತ್ಯವಿರುವ ಎಲ್ಲ ಕೈಗಾರಿಕೆಗಳು, ಕಂಪನಿಗಳು, ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಅಂತಹ ಸಂಸ್ಥೆಗಳ ನೌಕರರು ಆಯಾ ಸಂಸ್ಥೆ ನೀಡುವ ಮಾನ್ಯತೆ ಹೊಂದಿರುವ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅವಕಾಶ ಇದೆ.

ADVERTISEMENT

ಟೆಲಿಕಾಂನ ನೌಕರರು ಮತ್ತು ವಾಹನಗಳು ಮತ್ತು ಇಂಟರ್‌ನೆಟ್‌ ಸೇವೆ ಒದಗಿಸುವವರಿಗೆ ಆಯಾ ಸಂಸ್ಥೆ ನೀಡುವ ಮಾನ್ಯತೆ ಹೊಂದಿರುವ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅವಕಾಶ ಇದೆ.

ತುರ್ತು ಸೇವೆ ಅಗತ್ಯವಿರುವ ರೋಗಿಗಳು ಮತ್ತು ಅವರ ಪರಿಚಾರಕರು, ವ್ಯಕ್ತಿಗಳು ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಉದ್ದೇಶಿಸಿರುವ ಅರ್ಹರಿಗೆ ಕನಿಷ್ಠ ದಾಖಲೆಗಳೊಂದಿಗೆ ಸಂಚಾರ ಮಾಡಲು ಅನುಮತಿ ಇದೆ.

ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಮೇವು ಮಾರಾಟ ಮಾಡುವ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ.

ಬೀದಿ ಬದಿ ಮಾರಾಟಗಾರರಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ನ್ಯಾಯಬೆಲೆ ಅಂಗಡಿಗಳಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಅವಕಾಶವಿದೆ.

ಮದ್ಯದಂಗಡಿಗಳು ಮತ್ತು ಮಳಿಗೆಗಳಿಗೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಪಾರ್ಸಲ್ ವ್ಯವಸ್ಥೆಗೆ ಮಾತ್ರ ಅನುಮತಿಸಲಾಗಿದೆ. ಜನರು ಹೊರಗಡೆ ತಿರುಗಾಡುವುದನ್ನು ತಪ್ಪಿಸಲು ಎಲ್ಲ ವಸ್ತುಗಳ 24X7 ಹೋಂ ಡಿಲೆವರಿಗೆ ಕೋವಿಡ್ ಅವಕಾಶ ಇದೆ.

ರೆಸ್ಟೋರೆಂಟ್ ಮತ್ತು ಹೋಟೆಲ್‌ಗಳಿಂದ ಪಾರ್ಸಲ್ ತೆಗೆದುಕೊಂಡು ಹೋಗಲು ಮತ್ತು ಮನೆಗೆ ತಲುಪಿಸಲು ಮಾತ್ರ ಅನುಮತಿ ಇದೆ.

ರೈಲುಗಳ ಸಂಚಾರ ಮತ್ತು ವಿಮಾನ ಪ್ರಯಾಣಕ್ಕೆ ಅವಕಾಶವಿದ್ದು, ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳನ್ನು ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್, ನಿಲ್ದಾಣಗಳಿಗೆ ಪ್ರಯಾಣದ ಟಿಕೆಟ್‌ಗಳನ್ನು, ದಾಖಲೆಗಳನ್ನು ತೋರಿಸುವುದರೊಂದಿಗೆ ಸಂಚರಿಸಲು ಅನುಮತಿ ಇದೆ.

ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ಆಯಾ ಮನೆಯ ಮುಂದೆ ಗರಿಷ್ಠ 40 ಜನರನ್ನು ಒಳಗೊಂಡು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೆ ಒಳಪಟ್ಟು ಅನುಮತಿ ನೀಡಲಾಗಿದೆ.

ಶವಸಂಸ್ಕಾರ, ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಅನುಮತಿಸಲಾಗುತ್ತದೆ. ಉಳಿದ ಎಲ್ಲ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧವಿರಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

* ಕೋವಿಡ್‌ ತಡೆಗೆ ಎಲ್ಲರೂ ಸಹಕರಿಸಬೇಕು. ವಾರಾಂತ್ಯದ ಕರ್ಫ್ಯೂ ಜಾರಿ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಯಾರಾದರೂ ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು.

–ಪಿ.ಸುನೀಲ್‌ ಕುಮಾರ್‌, ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.