ADVERTISEMENT

ವಿಜಯಪುರ ಜಿಲ್ಲಾ ಉಸ್ತುವಾರಿ ಯಾವ ‘ಪಾಟೀಲ’ರಿಗೆ?

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 4:14 IST
Last Updated 6 ಜೂನ್ 2023, 4:14 IST
ಶಿವಾನಂದ ಪಾಟೀಲ ಮತ್ತು ಎಂ.ಬಿ.ಪಾಟೀಲ
ಶಿವಾನಂದ ಪಾಟೀಲ ಮತ್ತು ಎಂ.ಬಿ.ಪಾಟೀಲ   

ಬಸವರಾಜ್‌ ಸಂಪಳ್ಳಿ

ವಿಜಯಪುರ: ಜಿಲ್ಲೆಯ ಇಬ್ಬರು ಹಿರಿಯ ಶಾಸಕರಾದ ಎಂ.ಬಿ.ಪಾಟೀಲ ಮತ್ತು ಶಿವಾನಂದ ಪಾಟೀಲ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿ ಭಾಗ್ಯ ದೊರೆತಿದೆ. ಆದರೆ, ವಿಜಯಪುರ ಜಿಲ್ಲಾ ಉಸ್ತುವಾರಿ ಯಾರ ಪಾಲಾಗಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಬಬಲೇಶ್ವರ ಶಾಸಕರಾದ, ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಆರು ಬಾರಿ ಶಾಸಕರಾಗಿ ಹಾಗೂ ಮೂರನೇ ಬಾರಿಗೆ ಸಚಿವರಾಗಿದ್ದಾರೆ. ಅದೇ ರೀತಿ ಬಸವನ ಬಾಗೇವಾಡಿ ಶಾಸಕರಾದ, ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಆರು ಬಾರಿ ಶಾಸಕರಾಗಿ ಹಾಗೂ ಎರಡನೇ ಬಾರಿ ಸಚಿವರಾಗಿದ್ದಾರೆ.

ADVERTISEMENT

2013ರಿಂದ 2018ರ ವರೆಗಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹಾಗೂ 2018ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ  ಎಂ.ಬಿ.ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಸಿದ್ದಾರೆ. ಶಿವಾನಂದ ಪಾಟೀಲ ಅವರು 2018ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದರೂ ಕೂಡ ಅವರಿಗೆ ಜಿಲ್ಲಾ ಉಸ್ತುವಾರಿ ಭಾಗ್ಯ ದೊರೆತಿರಲಿಲ್ಲ. ಬದಲಿಗೆ ನೆರೆಯ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ಹೊಣೆ ವಹಿಸಲಾಗಿತ್ತು.

ಇದೀಗ ಮತ್ತೆ ಕಾಂಗ್ರೆಸ್‌ ಸರ್ಕಾರದಲ್ಲಿ ಇಬ್ಬರೂ ಪ್ರಭಾವಿ ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಜಯಪುರ ಉಸ್ತುವಾರಿ ಜವಾಬ್ದಾರಿಯನ್ನು ಮುಖ್ಯಮಂತ್ರಿ ಯಾರಿಗೆ ವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಜಿಲ್ಲಾ ಉಸ್ತುವಾರಿಗಾಗಿ ಇಬ್ಬರೂ ಸಚಿವರು ಲಾಭಿ ನಡೆಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇಬ್ಬರೂ ನಾಯಕರಿಗೆ ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಹಾಗೂ ಅಧಿಕಾರಿಗಳ ಮೇಲೆ ನಿಯಂತ್ರಣ ಇರಿಸುವ ಸಾಮರ್ಥ್ಯ ಕರಗತವಾಗಿದೆ. ಅಲ್ಲದೇ, ಬಿಜೆಪಿ, ಜೆಡಿಎಸ್‌ ಮುಖಂಡರನ್ನು ಸರಿದೂಗಿಸಿಕೊಂಡು ಹೋಗಬಲ್ಲ ಚಾಕಚಕ್ಯತೆ ಇದೆ. ಹೀಗಾಗಿ ಯಾರಿಗೇ ಜಿಲ್ಲಾ ಉಸ್ತುವಾರಿ ನೀಡಿದರು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಬಲ್ಲವರಾಗಿದ್ದಾರೆ. 

ಜಿಲ್ಲಾ ಉಸ್ತುವಾರಿ ಲಭಿಸಿದರೆ ಜಿಲ್ಲೆ ರಾಜಕಾರಣ, ಅಧಿಕಾರಗಳ ಮೇಲೆ ಹಿಡಿತ ಸಾಧಿಸಬಹುದು ಎಂಬುದು ಇಬ್ಬರ ಲೆಕ್ಕಾಚಾರವಾಗಿದೆ. ಅಲ್ಲದೇ, ಜಿಲ್ಲೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಬಹುದು. ಇದರಿಂದ ವೈಯಕ್ತಿಕವಾಗಿ ಹೆಚ್ಚು ಲಾಭವಾಗಲಿದೆ ಎಂಬ ನಿರೀಕ್ಷೆ ಇಬ್ಬರು ನಾಯಕರದ್ದಾಗಿದೆ. ಒಂದು ವೇಳೆ ಜಿಲ್ಲಾ ಉಸ್ತುವಾರಿ ತಪ್ಪಿದರೆ ಜಿಲ್ಲೆಯ ಮಟ್ಟಿಗೆ ಅಪ್ರಸ್ತುತವಾಗಬಹುದು ಎಂಬ ಭಾವನೆ ನಾಯಕರದ್ದಾಗಿದೆ. ಹೀಗಾಗಿ ಇಬ್ಬರೂ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಳಿ ಲಾಭಿ ನಡೆಸಿದ್ದಾರೆ.

ಇಬ್ಬರು ಸಚಿವರಲ್ಲಿ ಒಬ್ಬರಿಗೆ ಜಿಲ್ಲಾ ಉಸ್ತುವಾರಿ ಲಭಿಸಿದರೆ ಇನ್ನೊಬ್ಬರಿಗೆ ಅನ್ಯ ಜಿಲ್ಲೆಯ ಉಸ್ತುವಾರಿ ಲಭಿಸುವ ಸಾಧ್ಯತೆ ಇದೆ. 

‘ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಯಾರಿಗೆ ವಹಿಸಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದೆ. ಮುಖ್ಯಮಂತ್ರಿ ಅವರು ಇಬ್ಬರಲ್ಲಿ ಯಾರಿಗೆ ಜವಾಬ್ದಾರಿ ವಹಿಸಲಿದ್ದಾರೆ ಎಂಬುದು ಕಾದು ನೋಡೋಣ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆಗೆ ಸಚಿವ ಶಿವಾನಂದ ಪಾಟೀಲ ಲಭಿಸಲಿಲ್ಲ.

ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳುವವರಿಗೆ  ಮುಂಬರುವ ಲೋಕಸಭಾ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಜವಾಬ್ದಾರಿ ಕೂಡ ಇದೆ. ಅಲ್ಲದೇ, ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ಎಲ್ಲ ಶಾಸಕರು ಸೇರಿದಂತೆ ಪ್ರತಿಪಕ್ಷಗಳ ಮುಖಂಡರನ್ನು ಸರಿದೂಗಿಸಿಕೊಂಡು ಹೋಗಬೇಕಾದ ಮಹತ್ತರ ಜವಾಬ್ದಾರಿ ಇದೆ. ಜೊತೆಗೆ ಪಕ್ಷ ಸಂಘಟನೆಗೆ ಒತ್ತು ನೀಡಬೇಕಾಗಿದೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಮಂತ್ರಿಯಾಗುವ ಭಾಗ್ಯ ಒಲಿಯದ ಕಾರಣ ಜಿಲ್ಲಾ ಉಸ್ತುವಾರಿ ಅನ್ಯ ಜಿಲ್ಲೆಯ ಸಚಿವರ ಪಾಲಾಗಿತ್ತು. ಅದರಲ್ಲೂ ಮೂವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡರೂ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಿರಲಿಲ್ಲ. ಇದರ ಪರಿಣಾಮ ಪಕ್ಷದ ಸಂಘಟನೆ ಹಾಗೂ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.