ವಿಜಯಪುರ: ಇಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಹಿಂದಿನ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ಅವರ ಅವಧಿಯಲ್ಲಿ, 2024ರಲ್ಲಿ ನಿಯಮಬಾಹಿರವಾಗಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದ್ದ 53 ಬೋಧಕೇತರ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.
‘ನೇಮಕದಲ್ಲಿ ಅಕ್ರಮ ಕುರಿತ ದೂರುಗಳ ಹಿನ್ನೆಲೆಯಲ್ಲಿ ಪ್ರಾಧ್ಯಾಪಕ ರಾಜಕುಮಾರ ಮಾಲೀಪಾಟೀಲ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ಆಧರಿಸಿ ಸಿಂಡಿಕೇಟ್ ನಿರ್ಣಯದಂತೆ ವಜಾ ಮಾಡಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ನೇಮಕಾತಿಗೆ ಸರ್ಕಾರ, ವಿಶ್ವವಿದ್ಯಾಲಯದ ಹಣಕಾಸು ಸಮಿತಿ ಅನುಮತಿ ಪಡೆದಿರಲಿಲ್ಲ. ಯಾವುದೇ ಪ್ರಕಟಣೆ (ನೋಟಿಫಿಕೇಶನ್) ಹೊರಡಿಸಿರಲಿಲ್ಲ. ಸಿಂಡಿಕೇಟ್ ಸಭೆ ಅನುಮೋದನೆ ಪಡೆದಿರಲಿಲ್ಲ. ಮೀಸಲಾತಿ ನಿಯಮ (ರೋಸ್ಟರ್) ಅನುಸರಿಸಿರಲಿಲ್ಲ’ ಎಂದು ಅವರು ತಿಳಿಸಿದರು.
ಹಣ ಪಡೆದಿರುವ ಆರೋಪ:
‘ಬೋಧಕೇತರ ಸಿಬ್ಬಂದಿ ನೇಮಕದಲ್ಲಿ ಹಣಕಾಸು ವ್ಯವಹಾರವಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ತನಿಖೆಯಾಗಲಿ. ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ’ ಎಂದು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಮಲ್ಲಮ್ಮ ಯಾಳವಾರ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.