ಮನಗೂಳಿ:ಕಾಲೇಜಿನ ಪರೀಕ್ಷೆ ಬರೆದ ಬಳಿಕ, ಜೀವನದ ಪರೀಕ್ಷೆಗೆ ಯುವತಿಯೊಬ್ಬರು ಸೋಮವಾರ ಪಾದಾರ್ಪಣೆ ಮಾಡಿದರು.
ಇಲ್ಲಿಗೆ ಸಮೀಪದ ಉಕ್ಕಲಿ ಗ್ರಾಮದ ಜಯಶ್ರೀ ವಿಜಯಪುರದ ಎಸ್.ಬಿ.ಕಲಾ ಕಾಲೇಜಿನ ಬಿಎ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ. ಈಕೆಯ ವಿವಾಹ ಉಕ್ಕಲಿಯ ತಮ್ಮ ಸೋದರ ಮಾವ ಶಿವಾನಂದ ದೂಳಪ್ಪ ಜೈನಾಪುರ ಜತೆ ನಿಶ್ವಯವಾಗಿತ್ತು.
ಮದುವೆಯ ಮುಹೂರ್ತವೂ ಸೋಮವಾರವೇ ನಿಗದಿಯಾಗಿತ್ತು. ಜಯಶ್ರೀಯ ಬಿಎ ಇಂಗ್ಲಿಷ್ ಐಚ್ಚಿಕ ವಿಷಯದ ಪರೀಕ್ಷೆಯೂ ಸೋಮವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೂ ನಿಗದಿಯಾಗಿತ್ತು.
ಮದುವೆ–ಪರೀಕ್ಷೆಯ ದ್ವಂದ್ವದಲ್ಲಿ ಮೊದಲಿಗೆ ಪರೀಕ್ಷೆ ಆಯ್ಕೆ ಮಾಡಿಕೊಂಡ ಜಯಶ್ರೀ ಭಗವಂತ ಹೆರಕಲ್ಲ ವಿಜಯಪುರಕ್ಕೆ ತೆರಳಿ, ಇಂಗ್ಲಿಷ್ ಐಚ್ಚಿಕ ವಿಷಯದ ಪರೀಕ್ಷೆ ಬರೆದರು. ನಂತರ ತಮ್ಮೂರಿಗೆ ಮರಳಿ ಸೋದರ ಮಾವನ ಜತೆ, ಮತ್ತೊಂದು ಶುಭ ಮುಹೂರ್ತದಲ್ಲಿ ಸೋಮವಾರ ಮಧ್ಯಾಹ್ನ 1.45ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮುಹೂರ್ತದ ಸಮಯ ಬದಲಾದರೂ ಬಂಧುಗಳು, ಆತ್ಮೀಯರು ನೆರೆದು ನವ ದಂಪತಿಗೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.