ADVERTISEMENT

ಜಿಪಂ, ತಾಪಂ ಚುನಾವಣೆ: ಪಕ್ಷ ನಿಷ್ಠರಿಗೆ ಟಿಕೆಟ್

ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 13:28 IST
Last Updated 5 ಜುಲೈ 2021, 13:28 IST
ವಿಜಯಪುರದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಅವರು ಸಸಿಗೆ ನಿರುಣಿಸುವ ಮೂಲಕ ಚಾಲನೆ ನೀಡಿದರು
ವಿಜಯಪುರದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸಭೆಯನ್ನು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಅವರು ಸಸಿಗೆ ನಿರುಣಿಸುವ ಮೂಲಕ ಚಾಲನೆ ನೀಡಿದರು   

ವಿಜಯಪುರ: ಜಿಲ್ಲಾ ಪಂಚಾಯ್ತಿಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಈ ಬಾರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವಂತಾಗಬೇಕು ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಹೇಳಿದರು.

ನಗರದ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಕಾರ್ಯ ಕಾರಣಿ ಸಭೆ ಉದ್ದೇಶಿಸಿ ಅವರುಮಾತನಾಡಿದರು.

ಕಳೆದ ಬಾರಿ ಕೆಲವರು ಪಕ್ಷಕ್ಕೆ ಮೊಸ ಮಾಡಿ ಬೇರೆ ಪಕ್ಷದೊಂದಿಗೆ ಕೈ ಜೋಡಿಸಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಕೈ ತಪ್ಪುವಂತೆ ಮಾಡಿದ್ದು, ಅಂಥವರಿಗೆ ಟಿಕೆಟ್‌ ನೀಡಬಾರದು.ಒಬ್ಬ ಅಭ್ಯರ್ಥಿ ಸೋತರು ಪರವಾಗಿಲ್ಲ, ಪಕ್ಷದ ನಿಷ್ಠಾವಂತರಿಗೆ ಮಾತ್ರ ಟಿಕೆಟ್ ನೀಡಿ ಅವರನ್ನು ಗೆಲ್ಲಿಸುವಲ್ಲಿ ಶ್ರಮಿಸೋಣ. ಈ ಬಾರಿ ಜಿ.ಪಂ ಗದ್ದುಗೆ ಬಿಜೆಪಿಗೆ ದೊರೆಯಲಿದೆ ಎಂದರು.

ADVERTISEMENT

ಸರ್ಕಾರ ಯಶಸ್ವಿ:

ಕೊರೊನಾ ಎರಡನೇ ಅಲೆಯಲ್ಲಿ ಮೂರು ತಿಂಗಳಿಂದಲೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾವನ್ನು ತಹಬದಿಗೆ ತರುವಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿವೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಹಾಗೂ ಅಗತ್ಯ ವೈದ್ಯಕೀಯ ಸೇವೆಯನ್ನು ಒದಗಿಸಿತು. ರಾಜ್ಯ ಸರ್ಕಾರವೂ ಸಹಿತ ಲಾಕ್‌ಡೌನ್‍ನಂತಹ ಕಠಿಣ ಕ್ರಮಗಳ ಮೂಲಕ ಕೊರೊನಾ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಿತು. ಕೊರೊನಾ ಸಂಕಷ್ಟದಲ್ಲಿರುವ ಅನೇಕರಿಗೆ ಸರ್ಕಾರ ಆರ್ಥಿಕ ಪ್ಯಾಕೇಜ್ ನೀಡಿ ಸಾರ್ವಜನಿಕರಿಗೆ ನೆರವು ಒದಗಿಸಿತು. ಬಡವರ ರಕ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಹಿತ ಅನೇಕ ಬಡವರಿಗೆ ಹಾಗೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದ್ದಿರಿ ಹಾಗಾಗಿಯೇ ಬಿಜೆಪಿ ಶಿಸ್ತಿನ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.

ಲಸಿಕೆ ವಿರೋಧಿಗಳು ಸರದಿಯಲ್ಲಿ:

ಬಿಜೆಪಿ ವಿರೋಧಿಗಳು ಕೊರೊನಾ ಲಸಿಕೆ ಬಗ್ಗೆ ಲೇವಡಿ ಮಾಡಿದ್ದರು. ಆದರೆ, ಇಂದು ಅವರೇ ಸರದಿಯಲ್ಲಿ ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಕೂಚಬಾಳ ಮಾತನಾಡಿ, ಮೋದಿ ಪ್ರಧಾನಿಯಾದ ಬಳಿಕ ಭ್ರಷ್ಟಾಚಾರಕ್ಕೆ ಬ್ರೇಕ್ ಬಿದ್ದಿದೆ. ಬಡವರ, ನಿರ್ಗತಿಕರ ಹಾಗೂ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಸಹಾಯಧನ ವರ್ಗಾವಣೆಯಾಗುತ್ತಿದೆ ಎಂದರು.

ರಾಜ್ಯ ಸಾವಯುವ ಪ್ರಮಾಣನ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ್, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗುರ, ಬಸವರಾಜ ಬಿರಾದಾರ, ಸಂದಿಪ್ ಪಾಟೀಲ್, ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಷಿ ಉಪಸ್ಥಿತರಿದ್ದರು.

***

ಮುಂಬರುವ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷವನ್ನು ಬೂತ್‌ ಮಟ್ಟದಿಂದಲೇ ಗಟ್ಟಿಯಾಗಿಸಬೇಕು

ಸೋಮನಗೌಡ ಪಾಟೀಲ,

ಶಾಸಕ,ದೇವರ ಹಿಪ್ಪರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.