ADVERTISEMENT

ದೇವದಾಸಿಯರ ಮಕ್ಕಳ ಸಂಕಷ್ಟಕ್ಕೆ ಮಿಡಿದ ಜಿ.ಪಂ.ಅಧ್ಯಕ್ಷೆ

ಕಾಖಂಡಕಿ ಗ್ರಾಮದಲ್ಲಿ ಹೊಸ ವರ್ಷಾಚರಣೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 14:14 IST
Last Updated 2 ಜನವರಿ 2021, 14:14 IST
ಬಬಲೇಶ್ವರ ತಾಲ್ಲೂಕಿನ ಕಾಖಂಡಕಿಯಲ್ಲಿ ಮಾಜಿ ದೇವದಾಸಿಯರ ಮಕ್ಕಳೊಂದಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಕೇಕ್‌ ಕತ್ತರಿಸಿ ಹೊಸ ವರ್ಷಾಚರಣೆ ಆಚರಿಸಿದರು 
ಬಬಲೇಶ್ವರ ತಾಲ್ಲೂಕಿನ ಕಾಖಂಡಕಿಯಲ್ಲಿ ಮಾಜಿ ದೇವದಾಸಿಯರ ಮಕ್ಕಳೊಂದಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಕೇಕ್‌ ಕತ್ತರಿಸಿ ಹೊಸ ವರ್ಷಾಚರಣೆ ಆಚರಿಸಿದರು    

ವಿಜಯಪುರ: ಜಿಲ್ಲೆಯ ಮಾಜಿ ದೇವದಾಸಿಯರು ಹಾಗೂ ಅವರ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿ ಅವರ ವಾಸ್ತವ ಸ್ಥಿತಿಯನ್ನು ಅರಿಯಲು ಹೊಸ ವರ್ಷಾಚರಣೆಯಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.

ಬಬಲೇಶ್ವರ ತಾಲ್ಲೂಕಿನ ಕಾಖಂಡಕಿ ಗ್ರಾಮದಲ್ಲಿ ದೇಗಿನಾಳದ ಡಾ.ಅಂಬೇಡ್ಕರ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭಾಗವಹಿಸಿ, ಮಾಜಿ ದೇವದಾಸಿಯರ ಮಕ್ಕಳ ಸಂಕಷ್ಟಕ್ಕೆ ಸ್ಪಂದಿಸಿದರು.

ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತಳಾಗಿ ಇದೀಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು, ಆರ್ಥಿಕ ಅಡಚಣೆಯಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದುದ್ವಿತೀಯ ಪಿಯು ಓದುತ್ತಿರುವಐಶ್ವರ್ಯ ಹಂಚಿನಾಳ ಸಂಕಷ್ಟ ತೋಡಿಕೊಂಡರು.

ADVERTISEMENT

ವಿದ್ಯಾರ್ಥಿನಿಯ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ದಾನಮ್ಮ ಅಂಗಡಿ ಅವರ ಪತಿ ಗುರಲಿಂಗಪ್ಪ ಅಂಗಡಿಯವರು ₹ 25 ಸಾವಿರ ನೆರವು ನೀಡುವುದಾಗಿ ತಿಳಿಸಿದರು.

ಗ್ರಾಮ ಪಂಚಾಯಿತಿಯಿಂದ ಆರ್ಥಿಕ ಸಹಾಯ ಮಾಡುವಂತೆ ಪಿಡಿಒ ಎಸ್.ಆರ್.ಕಟ್ಟಿ ಅವರಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸೂಚಿಸಿದರು.

‘ಝೀ’ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ಕೆ ಆಯ್ಕೆಯಾಗಿದ್ದರೂ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ದ್ವಿತೀಯ ಪಿಯು ವಿದ್ಯಾರ್ಥಿನಿ ಭಾಗ್ಯಾ ತಳಕೇರಿ ತಿಳಿಸಿದಳು.

ಭಾಗ್ಯಾ ತಳಕೇರಿ ಅವರಿಗೂ ಅಗತ್ಯ ಸಹಕಾರ ನೀಡಲಾಗುವುದು ಎಂದು ಜಿ.ಪಂ.ಅಧ್ಯಕ್ಷೆ ಸ್ಪಂದಿಸಿದರು.

ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಮನಗೌಡ ಕನ್ನೊಳ್ಳಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ನಿರ್ಮಲಾ ಸುರಪೂರ, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಸಿ.ಬಿ.ಕುಂಬಾರ, ದೇವದಾಸಿ ಪುನರ್ವಸತಿ ಅಭಿವೃದ್ಧಿ ನಿಗಮದ ಅಧಿಕಾರಿ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚವ್ಹಾಣ, ಜಿಲ್ಲಾ ಏಡ್ಸ್‌ ಜಾಗೃತಿ ಸಮಿತಿ ಅಧಿಕಾರಿ ಧಾರವಾಡಕರ ಹಾಗೂ ಜಿಲ್ಲಾ ಕೌನ್ಸಿಲರ್‌ ರವಿ ಕಿತ್ತೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.