ADVERTISEMENT

ನಂದಿ ಗಿರಿಧಾಮದತ್ತ ವಿದೇಶಿಯರ ಚಿತ್ತ; ಐದು ವರ್ಷಗಳಲ್ಲಿ 25 ಸಾವಿರ ಮಂದಿ ಭೇಟಿ

ಡಿ.ಎಂ.ಕುರ್ಕೆ ಪ್ರಶಾಂತ
Published 7 ಜನವರಿ 2026, 20:27 IST
Last Updated 7 ಜನವರಿ 2026, 20:27 IST
<div class="paragraphs"><p>ನಂದಿಬೆಟ್ಟದಲ್ಲಿನ ಮನಕ್ಕೆ ಮುದ ನೀಡುವ ಹಸಿರ ವಾತಾವರಣ</p></div>

ನಂದಿಬೆಟ್ಟದಲ್ಲಿನ ಮನಕ್ಕೆ ಮುದ ನೀಡುವ ಹಸಿರ ವಾತಾವರಣ

   

ಚಿಕ್ಕಬಳ್ಳಾಪುರ: ನಂದಿಬೆಟ್ಟ  ರಾಜ್ಯದ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದು.  ಈ ತಾಣಕ್ಕೆ ‌ವರ್ಷದಿಂದ ವರ್ಷಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರವಾಸೋದ್ಯಮ ಇಲಾಖೆಯ ಮೂಲಗಳ ಪ್ರಕಾರ ಮೈಸೂರು, ಹಂಪಿ ಬಿಟ್ಟರೆ ರಾಜ್ಯದಲ್ಲಿ ಹೆಚ್ಚು ವಿದೇಶಿ ಪ್ರವಾಸಿಗರನ್ನು ಸೆಳೆಯುತ್ತಿರುವುದು ನಂದಿ ಗಿರಿಧಾಮ!

ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಕಳೆದ ಐದು ವರ್ಷಗಳಲ್ಲಿ ನಂದಿಬೆಟ್ಟಕ್ಕೆ 25,169 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದೇಶಿಯರ ಭೇಟಿ ಹೆಚ್ಚುತ್ತಲೇ ಇದೆ. 2021ರಲ್ಲಿ 368, 2022ರಲ್ಲಿ 8,751, 2023ರಲ್ಲಿ 3,027, 2024ರಲ್ಲಿ 6,082 ಮತ್ತು 2025ರಲ್ಲಿ 6,940 ವಿದೇಶಿ ಪ್ರವಾಸಿಗರು ಗಿರಿಧಾಮದ ಪ್ರಕೃತಿ ಸಿರಿಯನ್ನು ಸವಿದಿದ್ದಾರೆ.

ADVERTISEMENT

ಗಿರಿಧಾಮದಲ್ಲಿನ ತಣ್ಣನೆಯ ಹವಾಗುಣ ವಿದೇಶಿಯರನ್ನು ಸೆಳೆದಿದಿದ್ದಕ್ಕಿಂತ ಇಲ್ಲಿನ ಪಕ್ಷಿಗಳ ಕಲರವ ಅವರ ಮನ ಮತ್ತು ಕಣ್ಣನ್ನು ಸೆಳೆದಿದೆ. ಗಿರಿಧಾಮಕ್ಕೆ ನಾನಾ ಭಾಗಗಳ ಪಕ್ಷಿಗಳು ವಿವಿಧ ಕಾಲಘಟ್ಟದಲ್ಲಿ ವಲಸೆ ಬರುತ್ತವೆ. ಇಲ್ಲಿ ಜೋಡಿಯಾಗಿ ಬಂದ ಪಕ್ಷಿಗಳು ಸಂತಾನ ಅಭಿವೃದ್ಧಿಗೊಳಿಸಿ ಸಂಸಾರ ದೊಡ್ಡದು ಮಾಡಿಕೊಂಡು ತೆರಳುತ್ತವೆ. ಈ ಪಕ್ಷಿಗಳ ಕೌತುಗಳನ್ನು ವೀಕ್ಷಿಸುವ ಪ್ರಮುಖ ಉದ್ದೇಶದಿಂದ ಗಿರಿಧಾಮಕ್ಕೆ ವಿದೇಶಿಯರು ಭೇಟಿ ನೀಡುತ್ತಾರೆ ಎನ್ನುತ್ತಾರೆ ಗಿರಿಧಾಮದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ.

‘ನಂದಿಗಿರಿಧಾಮ ಬೆಂಗಳೂರಿಗೆ ಸಮೀಪವಿರುವ ಪ್ರಸಿದ್ಧ ಗಿರಿಧಾಮ. ಬೆಂಗಳೂರಿನ ಸುತ್ತಮುತ್ತ ಈ ರೀತಿಯ ವಾತಾವಣ ಎಲ್ಲಿಯೂ ಇಲ್ಲ. ಬೆಂಗಳೂರಿಗೆ ಬರುವ ಬಹುತೇಕ ವಿದೇಶಿಯರು ಗಿರಿಧಾಮಕ್ಕೆ ಭೇಟಿ ನೀಡುವರು’ ಎನ್ನುತ್ತಾರೆ ಚಿಕ್ಕಬಳ್ಳಾಪುರ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್.

‘ಅಮೆರಿಕ, ಜರ್ಮನಿ, ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳ ಪ್ರವಾಸಿಗರು ಭೇಟಿ ನೀಡಿದ್ದಾರೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿಯೇ ಇರುವುದು ಗಿರಿಧಾಮಕ್ಕೆ ವಿದೇಶಿಯರು ಭೇಟಿ ನೀಡಲು ಇರುವ ಮತ್ತೊಂದು ಪ್ರಮುಖ ಕಾರಣ. ವಿಮಾನ ನಿಲ್ದಾಣದ ಸುತ್ತಮುತ್ತ ಐಶಾರಾಮಿ ಹೋಟೆಲ್‌ಗಳು ಇವೆ. ಇಲ್ಲಿ ಉಳಿದುಕೊಂಡ ವಿದೇಶಿಯರು ಗಿರಿಧಾಮಕ್ಕೆ ಬಂದಿದ್ದಾರೆ’ ಎಂದು ಹೇಳಿದರು.

ನಂದಿಯ ಮೇಲೆ ವಿದೇಶಿಯರ ಹೆಜ್ಜೆ: ನಂದಿಗಿರಿಧಾಮಕ್ಕೆ ವಿದೇಶಿಯ ಭೇಟಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಆದರೆ ಈ ಭೇಟಿಗೆ ಎರಡು ಶತಮಾನಗಳ ಇತಿಹಾಸವೇ ಇದೆ. 1791 ರಿಂದ 1881 ರವರೆಗೆ ನಂದಿಬೆಟ್ಟ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು. 

ಬ್ರಿಟಿಷರು ಇಲ್ಲಿ ತಂಗಲು ಬಂಗಲೆಗಳನ್ನು ನಿರ್ಮಿಸಿದ್ದರು. ಮೊದಲು ನಂದಿಬೆಟ್ಟವನ್ನು ಅಭಿವೃದ್ಧಿಪಡಿಸಿದ ಕೀರ್ತಿ ಬ್ರಿಟಿಷರಲ್ಲಿ ಕರ್ನಲ್ ಕುಪ್ಪೇಜ್ (1799-1808) ಅವರಿಗೆ ಸಲ್ಲುತ್ತದೆ.

17ನೇ ಶತಮಾನದಲ್ಲಿ ಕರ್ನಲ್ ಕುಪ್ಪೇಜ್  ಯುರೋಪಿನಲ್ಲಿ ಬೆಳೆಯುತ್ತಿದ್ದ ಗಿಡಗಳನ್ನು ತಂದು ನಂದಿ ಬೆಟ್ಟದಲ್ಲಿ ನೆಡಸಿ ಉದ್ಯಾನ ರೂಪಿಸಿದರು. ಈಗಲೂ ಅಮೃತಸರೋವರ ಹಿಂಭಾಗದಲ್ಲಿ ಎರಡೂವರೆ ಶತಮಾನ ಹಳೇ ಮರಗಳಿರುವ ಕುಪ್ಪೇಜ್ ಉದ್ಯಾನ ಕಣ್ತುಂಬಿಕೊಳ್ಳಬಹುದು.  

ಈಸ್ಟ್ ಇಂಡಿಯಾ ಕಂಪನಿಯ ಮದ್ರಾಸ್‌ ಆರ್ಮಿ ಜನರಲ್‌ ಜೇಮ್ಸ್ ವೆಲ್ಸ್‌ ನಂದಿಬೆಟ್ಟದ ಬಳಿ ತನ್ನ ತುಕಡಿಯೊಂದಿಗೆ (1810-11) ನೆಲೆ ನಿಂತಿದ್ದರು. ಜೇಮ್ಸ್ ವೆಲ್ಸ್‌ ಅವರ ‘ಮಿಲಿಟರಿ ರೆಮಿನೆಸನ್ಸಸ್‌’ ಪುಸ್ತಕದಲ್ಲಿ ನಂದಿಬೆಟ್ಟದ ಚಿತ್ರಣವೂ ಇದೆ.

1834ರಲ್ಲಿ ಮೈಸೂರು ರಾಜ್ಯದ ಕಮಿಷನರಾಗಿದ್ದ ಸರ್ ಮಾರ್ಕ್ ಕಬ್ಬನ್ ನಂದಿ ಬೆಟ್ಟದ ಅಭಿವೃದ್ಧಿಗೆ ಆಸಕ್ತಿ ವಹಿಸಿದರು. ಅಂದಿನ ಎಂಟು ಕಂದಾಯ ವಿಭಾಗಗಳಲ್ಲಿ ನಂದಿದುರ್ಗವೂ ಒಂದಾಗಿತ್ತು. ಇದೇ ಕಬ್ಬನ್ ನಂದಿಬೆಟ್ಟದಲ್ಲಿ ‘ಕಬ್ಬನ್ ಹೌಸ್’ ನಿರ್ಮಿಸಿದರು. ಬೇಸಿಗೆಯಲ್ಲಿ ನಂದಿ ಬೆಟ್ಟದಲ್ಲಿ ತಂಗುತ್ತಿದ್ದರು.

ನಂದಿಬೆಟ್ಟದಲ್ಲಿ ಅತ್ಯಂತ ಎತ್ತರದ ಸ್ಥಳದಲ್ಲಿ ಕಬ್ಬನ್ ಹೌಸ್ ನಿರ್ಮಿಸಲಾಗಿದೆ. ಇಂದಿಗೂ ‘ಸರ್ ಮಾರ್ಕ್ ಕಬ್ಬನ್, ಕಮಿಷನರ್ ಆಫ್ ಮೈಸೂರ್ (1834-1861) ಅವರ ಬೇಸಿಗೆ ನಿವಾಸ’ ಎನ್ನುವ ಫಲಕ ಕಟ್ಟಡದಲ್ಲಿದೆ. 

ಮಾರ್ಕ್ ಕಬ್ಬನ್ ಅವರ ಆಪ್ತ ಕಾರ್ಯದರ್ಶಿ ಕನ್ನಿಂಗ್ ಹ್ಯಾಮ್ ತಮ್ಮ ವಾಸಕ್ಕಾಗಿ ಗಿರಿಧಾಮದಲ್ಲಿ ‘ಓಕ್ ಲ್ಯಾಂಡ್ಸ್ ಹೌಸ್’ ಸಹ ನಿರ್ಮಿಸಿದ್ದರು. ಮಹಾತ್ಮ ಗಾಂಧೀಜಿ  ಅವರು ಗಿರಿಧಾಮಕ್ಕೆ ಬಂದ ವೇಳೆ ಇಲ್ಲಿಯೇ ಉಳಿದಿದ್ದರು. ಸ್ವಾತಂತ್ರ್ಯ ನಂತರ ‘ಓಕ್ ಲ್ಯಾಂಡ್ಸ್ ಹೌಸ್’ ‘ಗಾಂಧಿ ನಿಲಯ’ ಎನಿಸಿತು. ಕರ್ನಲ್ ಹಿಲ್ ನಿರ್ಮಿಸಿದ ಗ್ಲೆಂಟಿಲ್ಟ್ಸ್ ಹೌಸ್ ನವೀಕರಣಗೊಂಡು ಅರ್ಕಾವತಿ ಕಾಟೇಜ್ ಎನಿಸಿದೆ. ಹೀಗೆ ಬ್ರಿಟಿಷರ ಹೆಜ್ಜೆಗಳೂ ನಂದಿ ಗಿರಿಧಾಮದಲ್ಲಿವೆ.  

ಸಮಾಧಿ ಹುಡುಕಿಕೊಂಡು ಬಂದಿದ್ದ ಬ್ರಿಟನ್ ಪ್ರಜೆಗಳು: ಬ್ರಿಟಿಷರ ಆಡಳಿತದಲ್ಲಿ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಜಾನ್ ಗ್ಯಾರೆಟ್ ಅವರ ಪತ್ನಿ ಸೋಫಿಯಾ ಗ್ಯಾರೆಟ್ ಅವರ ಸಮಾಧಿ ಗಿರಿಧಾಮದ ಬ್ಯಾಂಬೂ ಹೌಸ್ ಪ್ರದೇಶದ ಒಂದು ಮೂಲೆಯಲ್ಲಿದೆ. ಈ ಸಮಾಧಿಯನ್ನು ಹುಡುಕಿ ಅವರ ಕುಟುಂಬ ಸದಸ್ಯರು, ಸಂಬಂಧಿಕರು ಗಿರಿಧಾಮಕ್ಕೆ ಕೆಲವು ತಿಂಗಳ ಹಿಂದೆ ಭೇಟಿ ನೀಡಿದ್ದರು.

ಒಂದೂವರೆ ಶತಮಾನದ ಹಿಂದೆ ಇಲ್ಲಿ ಸಮಾಧಿಯಾಗಿದ್ದ ತಮ್ಮ ಪೂರ್ವಿಕರಿಗೆ  ಕಂಬನಿ ಮಿಡಿದಿದ್ದರು. 

‘ನಂದಿದುರ್ಗದಲ್ಲಿ ಏಪ್ರಿಲ್ 10, 1867 ರಂದು ನಿಧನರಾದ ಜಾನ್ ಗ್ಯಾರೆಟ್‌ರ ಪ್ರಿಯ ಪತ್ನಿ ಸೋಫಿಯಾ ಗ್ಯಾರೆಟ್ ಅವರ ನೆನಪಿನಲ್ಲಿ’ ಎಂದು ಸಮಾಧಿಯ ಫಲಕದ ಮೇಲೆ ಬರೆಯಲಾಗಿದೆ.

ನಂದಿಬೆಟ್ಟದಲ್ಲಿ ಅಳಗುಳಿ ಮನೆ ಆಟದಲ್ಲಿ ತೊಡಗಿರುವ ವಿದೇಶಿಯರು

ಗ್ಯಾರೆಟ್ ದಂಪತಿ ತಮ್ಮ ಮಗಳು ಮತ್ತು ಅಳಿಯನ ಜೊತೆಯಲ್ಲಿ ನಂದಿಬೆಟ್ಟದ ಮೇಲಿನ ತಮ್ಮ ಮನೆಯಲ್ಲಿ ತಂಗುತ್ತಿದ್ದರು. ಗ್ಯಾರೆಟ್ ದಂಪತಿಯ ಅಳಿಯ ಬಿ.ಎಲ್. ರೈಸ್ ಶಾಸನ ಪಿತಾಮಹ ಎಂದೇ ಹೆಸರಾದವರು.

ಪ್ರವಾಸ, ಪಕ್ಷಿ ವೀಕ್ಷಣೆಯ ಜೊತೆಗೆ ತಮ್ಮ ಕಳ್ಳುಬಳ್ಳಿ ಸಂಬಂಧ ಮತ್ತು ತಲೆಮಾರುಗಳ ಹಿಂದೆ ಪೂರ್ವಿಕರು ನೆಲೆ ನಿಂತಿದ್ದ ಜಾಗವಾಗಿಯೂ ಬ್ರಿಟಿಷರಿಗೆ ನಂದಿಬೆಟ್ಟ ಪರಿಚಿತ.

ನಂದಿಗಿರಿಧಾಮದ ತಪ್ಪಲಿನಲ್ಲಿರುವ ಸುಲ್ತಾನಪೇಟೆ ಗ್ರಾಮದ ಬಳಿ ಬ್ರಿಟ್ರಿಷರ ಸಮಾಧಿಗಳೂ ಇವೆ.

ನಂದಿಬೆಟ್ಟದಲ್ಲಿರುವ ಸೋಫಿಯಾ ಗ್ಯಾರೆಟ್ ಅವರ ಸಮಾಧಿ ಮೇಲಿನ ಬರಹ ಓದುತ್ತಿರುವ ಅವರ ಸಂಬಂಧಿಕರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.