ADVERTISEMENT

ಬೆಳಗಾವಿ: ಗಾಂಧಿ ಭಾರತ್‌: ಸಮಾರೋಪವನ್ನೂ ಮರೆತ ಕಾಂಗ್ರೆಸ್‌ ಸರ್ಕಾರ!

ಇಮಾಮ್‌ಹುಸೇನ್‌ ಗೂಡುನವರ
Published 2 ಜನವರಿ 2026, 4:36 IST
Last Updated 2 ಜನವರಿ 2026, 4:36 IST
<div class="paragraphs"><p>ಬೆಳಗಾವಿಯಲ್ಲಿ ಸಿಪಿಇಡಿ ಮೈದಾನದಲ್ಲಿ 2025ರ ಜನವರಿ 21ರಂದು ‘ಜೈ ಬಾಪು, ಜೈ ಭೀಮ್‌, ಜೈ ಸಂವಿಧಾಮನ’ ಸಮಾವೇಶ ನಡೆದಿತ್ತು (ಸಂಗ್ರಹ ಚಿತ್ರ)</p><p></p></div>

ಬೆಳಗಾವಿಯಲ್ಲಿ ಸಿಪಿಇಡಿ ಮೈದಾನದಲ್ಲಿ 2025ರ ಜನವರಿ 21ರಂದು ‘ಜೈ ಬಾಪು, ಜೈ ಭೀಮ್‌, ಜೈ ಸಂವಿಧಾಮನ’ ಸಮಾವೇಶ ನಡೆದಿತ್ತು (ಸಂಗ್ರಹ ಚಿತ್ರ)

   

ಬೆಳಗಾವಿ: ಒಂದೆಡೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಕಾಯ್ದೆ ಬದಲಿಗೆ, ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌(ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ನರೇಗಾ ಕಾಯ್ದೆಯಿಂದ ಗಾಂಧಿ ಹೆಸರು ಕೈಬಿಟ್ಟ ಕೇಂದ್ರದ ವಿರುದ್ಧ ಕಾಂಗ್ರೆಸ್‌ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಮತ್ತೊಂದೆಡೆ, ಇಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ನೆನಪಿಗಾಗಿ ನಡೆಯಬೇಕಿದ್ದ ‘ಗಾಂಧಿ ಭಾರತ್‌’ ಕಾರ್ಯಕ್ರಮವನ್ನು ಕಾಂಗ್ರೆಸ್‌ ಸರ್ಕಾರವೂ ಮರೆತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ADVERTISEMENT

ಮಹಾತ್ಮ ಗಾಂಧಿ ಹೆಸರಿನಲ್ಲಿ 1924ರ ಡಿ.25, 26ರಂದು ಬೆಳಗಾವಿಯಲ್ಲಿ 39ನೇ ಕಾಂಗ್ರೆಸ್‌ ಅಧಿವೇಶನ ನಡೆಸಲಾಗಿತ್ತು. ಇದರ ಪ್ರಯುಕ್ತ, 2025ರ ಡಿ.26ರಿಂದ ಒಂದು ವರ್ಷದವರೆಗೆ ನಿರಂತರ ಕಾರ್ಯಕ್ರಮ ನಡೆಸುವುದಾಗಿ ಕಾಂಗ್ರೆಸ್‌ ಸರ್ಕಾರ ತಿಳಿಸಿತ್ತು. ಆದರೆ, ಅದು ಕಾರ್ಯಗತವಾಗಲಿಲ್ಲ.

‘ಬೆಳಗಾವಿಯಲ್ಲಿ 2025ರ ಡಿ.8ರಿಂದ 19ರವರೆಗೆ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಿತು. ಡಿ.26ಕ್ಕೆ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ವರ್ಷಾಚರಣೆಯೂ ಮುಗಿಯಿತು. ಇದರ ಆಸುಪಾಸಿನಲ್ಲಿ ಅಥವಾ ಡಿ.26ರಂದು ‘ಗಾಂಧಿ ಭಾರತ್‌’ದ ಮಾರೋಪ ಕಾರ್ಯಕ್ರಮವಾದರೂ ನಡೆಯಬಹುದು ಎಂದು ನಿರೀಕ್ಷಿಸಿದ್ದೆವು. ಅದೂ ಹುಸಿಯಾಗಿದೆ’ ಎಂದು ಗಾಂಧಿವಾದಿಗಳು ಆಕ್ರೋಶ ಹೊರಹಾಕಿದ್ದಾರೆ.

ಸಭೆ ನಿರ್ಣಯಗಳೂ ಅನುಷ್ಠಾನವಾಗಲಿಲ್ಲ

‘ಗಾಂಧಿ ಭಾರತ್‌’ ಕಾರ್ಯಕ್ರಮದ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೆ.6ರಂದು ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ ಆಚರಣೆ ಸಮಿತಿ ಸಭೆ ನಡೆದಿತ್ತು.

ಬೆಳಗಾವಿ, ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಮಂಗಳೂರು ವಿಭಾಗಗಳಲ್ಲಿ ಗಾಂಧಿ ವಿಚಾರಧಾರೆ ಬಿಂಬಿಸುವ ಸ್ತಬ್ಧಚಿತ್ರ ಒಳಗೊಂಡ ಜ್ಯೋತಿಯಾತ್ರೆ ಆಯೋಜಿಸಬೇಕು. ಗ್ರಾಮ ಸ್ವರಾಜ್ ಪರಿಕಲ್ಪನೆಯಡಿ ನ.14ರಂದು ನಡೆಯುವ ‘ಮಹಾ ಪಂಚಾಯತ್ ಸಮಾವೇಶ’ ದಿನ ಆ ಯಾತ್ರೆಗಳೆಲ್ಲ ಬಂದು ಸೇರಿ ಸಮಾರೋಪಗೊಳ್ಳಬೇಕು ಎಂದು ನಿರ್ಣಯಿಸಲಾಗಿತ್ತು. ಆದರೆ, ಈವರೆಗೂ ಜ್ಯೋತಿಯಾತ್ರೆಯೇ ಆರಂಭವಾಗಿಲ್ಲ!

ಗಾಂಧೀಜಿ ಅವರು ಭೇಟಿ ನೀಡಿದ ನೆನಪಿಗಾಗಿ, ರಾಜ್ಯದ 120 ಸ್ಥಳಗಳಲ್ಲಿ ನವೆಂಬರ್ ಅಂತ್ಯದೊಳಗೆ ಸ್ತಂಭ ನಿರ್ಮಿಸುವ ಕುರಿತು ಇದೇ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಅದು ಈಡೇರದಿರುವುದು ಗಾಂಧಿಪ್ರೇಮಿಗಳ ನಿರಾಸೆಗೆ ಕಾರಣವಾಗಿದೆ.

ಅನುದಾನ ಬಳಕೆ ಬಗ್ಗೆ ಸ್ಪಷ್ಟತೆ ಇಲ್ಲ

‘ಗಾಂಧಿ ಭಾರತ್‌ ಹೆಸರಿನಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ, ‘ಜೈ ಬಾಪು, ಜೈ ಭೀಮ್‌ ಮತ್ತು ಜೈ ಸಂವಿಧಾನ’ ಸಮಾವೇಶ ನಡೆದಿದ್ದು ಬಿಟ್ಟರೆ, ಬೇರ್‍ಯಾವ ಕಾರ್ಯಕ್ರಮ ನಡೆದಿಲ್ಲ. ‘ಗಾಂಧಿ ಭಾರತ್‌’ ಪರಿಕಲ್ಪನೆ ಎತ್ತ ಸಾಗುತ್ತಿದೆ ಎಂಬುದೂ ಗೊತ್ತಿಲ್ಲ. ವರ್ಷವಿಡೀ ಕಾರ್ಯಕ್ರಮ ಆಯೋಜಿಸಲು ಸರ್ಕಾರ ₹25 ಕೋಟಿ ಎಂದು ಸಚಿವರು ಹೇಳುತ್ತಾರೆ. ಆದರೆ, ಅನುದಾನ ಬಳಕೆ ಬಗ್ಗೆಯೂ ಸ್ಪಷ್ಟತೆ ಸಿಗುತ್ತಿಲ್ಲ’ ಎಂದು ಗಂಗಾಧರರಾವ್‌ ದೇಶಪಾಂಡೆ ಸ್ಮಾರಕ ಸಮಿತಿ ಅಧ್ಯಕ್ಷ ರವೀಂದ್ರ ದೇಶಪಾಂಡೆ ಹೇಳುತ್ತಾರೆ.

‘ಗಾಂಧಿ ಭಾರತ್‌ ಹೆಸರಿನಲ್ಲಿ ವರ್ಷವಿಡೀ ಕಾರ್ಯಕ್ರಮ ನಡೆಸದಿದ್ದರೂ ಪರವಾಗಿಲ್ಲ. ಸಮಾರೋಪ ಕಾರ್ಯಕ್ರಮವನ್ನಾದರೂ ನಡೆಸಿ, ಗಾಂಧಿ ಅವರಿಗೆ ಗೌರವ ಸಲ್ಲಿಸುವ ಕೆಲಸವಾಗಬೇಕಿತ್ತು. ಅದೂ ಆಗದಿರುವುದು ಬೇಸರ ತರಿಸಿದೆ’ ಎಂದು ತಿಳಿಸುತ್ತಾರೆ.

ಕಾಟಾಚಾರಕ್ಕೆ ಸೀಮಿತವಾಯಿತು!

‘ಗಾಂಧಿ ಭಾರತ್‌ ಕಾರ್ಯಕ್ರಮವನ್ನು ಸರ್ಕಾರ ಕಾಟಾಚಾರಕ್ಕೆ ಎಂಬಂತೆ ಮಾಡಿ ಕೈತೊಳೆದುಕೊಂಡಿತು. ಗಾಂಧಿ ಭೇಟಿ ನೆನಪಿಗಾಗಿ ರಾಜ್ಯದ ಯಾವುದೇ ಸ್ಥಳದಲ್ಲಿ ಸ್ತಂಭ ನಿರ್ಮಾಣವಾಗಲಿಲ್ಲ. ಶೀಘ್ರ ಸಮಾರೋಪ ಕಾರ್ಯಕ್ರಮವಾದರೂ ಮಾಡಿ ಗಾಂಧಿ ಅವರಿಗೆ ಗೌರವ ಸಲ್ಲಿಸಬೇಕು. ಗಾಂಧಿ ಭಾರತ್‌ ಯೋಜನೆಯಡಿ ಕೈಗೊಳ್ಳಲು ಉದ್ದೇಶಿಸಿದ್ದ ಕೆಲಸಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸುಭಾಷ ಕುಲಕರ್ಣಿ ಒತ್ತಾಯಿಸುತ್ತಾರೆ.

ಅರ್ಧಕ್ಕೆ ಕರೆ ಕಡಿತಗೊಳಿಸಿದ ಮೊಯಿಲಿ

‘ಗಾಂಧಿ ಭಾರತ್‌’ ಸಮಾರೋಪ ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರತಿನಿಧಿ, ಕಾಂಗ್ರೆಸ್‌ ಅಧಿವೇಶನ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ವೀರಪ್ಪ ಮೊಯಿಲಿ ಅವರಿಗೆ ಕರೆಮಾಡಿದರು. ಆಗ ಸ್ಪಷ್ಟ ಉತ್ತರ ನೀಡದ ಮೊಯಿಲಿ, ‘ಗಾಂಧಿ ಭಾರತ್‌ ಹೆಸರಿನಲ್ಲಿ ರಾಜ್ಯದ ವಿವಿಧೆಡೆ ಕಾರ್ಯಕ್ರಮ ನಡೆಯುತ್ತಿವೆ’ ಎಂದಷ್ಟೇ ಹೇಳಿ ಕರೆ ಕಡಿತಗೊಳಿಸಿದರು!

ಬೆಳಗಾವಿಯ ಕೋಟೆ ಕೆರೆಯನ್ನು ₹10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಅದಕ್ಕೆ ಗಾಂಧಿ ಹೆಸರು ನಾಮಕರಣ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಹೋಗಿದೆ. ಶೀಘ್ರ ಅದು ಕಾರ್ಯರೂಪಕ್ಕೆ ಬರಲಿದೆ
ಮೊಹಮ್ಮದ್‌ ರೋಷನ್‌, ಜಿಲ್ಲಾಧಿಕಾರಿ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.