ADVERTISEMENT

ಕಾರವಾರ|ಮೂಲೆಗುಂಪಾದ ‘ಕ್ಷಿಪಣಿ’ ಮತ್ತೆ ಮುನ್ನೆಲೆಗೆ:ಪ್ರವಾಸಿಗರ ವೀಕ್ಷಣೆಗೆ ಅವಕಾಶ

ಗಣಪತಿ ಹೆಗಡೆ
Published 29 ಡಿಸೆಂಬರ್ 2025, 23:30 IST
Last Updated 29 ಡಿಸೆಂಬರ್ 2025, 23:30 IST
   

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರಕ್ಕೆ ಭೇಟಿ ನೀಡಿದರೆ ಅರಬ್ಬಿ ಸಮುದ್ರ, ಸುತ್ತಲಿನ ಪ್ರಾಕೃತಿಕ ಸೊಬಗು ಸವಿಯುವ ಜೊತೆಗೆ ಭಾರತೀಯ ನೌಕಾದಳದ ‘ಐಎನ್‌ಎಸ್ ಚಪಲ್ ಯುದ್ಧನೌಕೆ‘, ‘ಟುಪಲೇವ್ ಯುದ್ಧವಿಮಾನ’ ಕಣ್ತುಂಬಿಕೊಳ್ಳಬಹುದು. ಯುದ್ಧನೌಕೆಯ  ಅಕ್ಕಪಕ್ಕದಲ್ಲಿರುವ, ಐದೂವರೆ ದಶಕದ ಹಿಂದೆ ಯುದ್ಧದಲ್ಲಿ ಬಳಸಿದ್ದ ಕ್ಷಿಪಣಿ, ಟಾರ್ಪಿಡೊ (ನೌಕಾ ಸ್ಫೋಟಕ) ಪ್ರವಾಸಿಗರ ಗಮನಕ್ಕೆ ಹೋಗುವುದು ಕಡಿಮೆ. ಆದರೆ, ಕೆಲ ದಿನಗಳಿಂದ ಇವುಗಳತ್ತ ಪ್ರವಾಸಿಗರ ದೃಷ್ಟಿ ನೆಟ್ಟಿದೆ!

ಯುದ್ಧನೌಕೆ ವಸ್ತು ಸಂಗ್ರಹಾಲಯದ ಉದ್ಯಾನದಲ್ಲಿ ಒಂದು ‘ಪಿ15 ಯು ಕ್ಷಿಪಣಿ’, ಎರಡು ‘ಸಿಇಟಿ 53 ಎಂ’ ಟಾರ್ಪಿಡೊಗಳನ್ನು ಇರಿಸಲಾಗಿದೆ. 19 ವರ್ಷಗಳಿಂದ ಯುದ್ಧನೌಕೆ ವಸ್ತು ಸಂಗ್ರಹಾಲಯದ ಎದುರು ಇವುಗಳಿದ್ದರೂ, ಮೂಲೆಗುಂಪಾಗಿದ್ದವು. ಕೆಲವೇ ಪ್ರವಾಸಿಗರು ವೀಕ್ಷಣೆಗೆ ಆಸಕ್ತಿ ತೋರುತ್ತಿದ್ದರು. ಆದರೆ, ನವೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಲ್ಲಿರುವ ನೌಕಾದಳದ ವಸ್ತು ಸಂಗ್ರಹಾಲಯಗಳ ಬಗ್ಗೆ ವಿವರಣೆ ನೀಡುವಾಗ ಕಾರವಾರದಲ್ಲಿನ ಐಎನ್ಎಸ್ ಚಪಲ್ ಯುದ್ಧನೌಕೆ ವಸ್ತು ಸಂಗ್ರಹಾಲಯದಲ್ಲಿ ಕ್ಷಿಪಣಿಗಳಿರುವ ಮಾಹಿತಿಯನ್ನೇ ಉಲ್ಲೇಖಿಸಿದ್ದರು.

ಕಾರವಾರದ ಯುದ್ಧನೌಕೆ ವಸ್ತು ಸಂಗ್ರಹಾಲಯದ ಆವರಣದಲ್ಲಿನ ಟಾರ್ಪಿಡೊ ವೀಕ್ಷಿಸುತ್ತಿರುವ ಪ್ರವಾಸಿಗರು.

ADVERTISEMENT

ಆ ಬಳಿಕ ಕ್ಷಿಪಣಿ, ಟಾರ್ಪಿಡೊ ಹೊಸ ಮೆರಗು ಪಡೆದುಕೊಂಡಿವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಯುದ್ಧನೌಕೆ, ಯುದ್ಧ ವಿಮಾನ ವಸ್ತುಸಂಗ್ರಹಾಲಯ ವೀಕ್ಷಿಸುವ ಪ್ರವಾಸಿಗರು ಕ್ಷಿಪಣಿ, ಟಾರ್ಪಿಡೊಗಳನ್ನೂ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಅದರಲ್ಲಿಯೂ ವಿದ್ಯಾರ್ಥಿಗಳಂತೂ ಯುದ್ಧ ಸಾಮಗ್ರಿಗಳನ್ನು ಕಂಡು ಖುಷಿಪಡುತ್ತಿದ್ದಾರೆ.

‘ಕ್ಷಿಪಣಿ, ಟಾರ್ಪಿಡೊ ಹಲವು ವರ್ಷಗಳಿಂದ ಇದ್ದರೂ ಕೆಲವರಷ್ಟೇ ಅವುಗಳನ್ನು ವೀಕ್ಷಿಸಿ, ಅವುಗಳೆದುರು ನಿಂತು ಚಿತ್ರ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅಂತಹವರ ಪೈಕಿ ಬಹುತೇಕ ಮಂದಿ ಸೈನ್ಯದಲ್ಲಿದ್ದವರಾಗಿದ್ದರು. ಆದರೆ, ಪ್ರಧಾನಿ ಮೋದಿ ಅವರು ಕ್ಷಿಪಣಿಗಳಿರುವ ಮಾಹಿತಿ ಉಲ್ಲೇಖಿಸಿದ ಬಳಿಕ ಅವುಗಳನ್ನು ನೋಡಲೆಂದೇ ಬರುವವರ ಸಂಖ್ಯೆ ಹೆಚ್ಚಾಗಿದೆ. ಈಗಂತೂ ಪ್ರವಾಸಿ ಸೀಸನ್ ಆಗಿದ್ದರಿಂದ ನಿತ್ಯ 3 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ’ ಎನ್ನುತ್ತಾರೆ ವಸ್ತು ಸಂಗ್ರಹಾಲಯದ ಪ್ರವಾಸಿ ಗೈಡ್ ವಿಜಯ ನಾಯ್ಕ.

ಐಎನ್ಎಸ್ ಚಪಲ್ ಯುದ್ಧನೌಕೆ ವಸ್ತುಸಂಗ್ರಹಾಲಯದ ಎದುರು ಇರುವ ‘ಪಿ15 ಯು’ ಕ್ಷಿಪಣಿ.

40 ಕಿ.ಮೀ ದೂರವಷ್ಟೇ ಚಿಮ್ಮುತ್ತಿದ್ದ ಕ್ಷಿಪಣಿ:

ಭಾರತೀಯ ಸೈನ್ಯದ ಬಳಿಕ ಈಗ ‘ಬ್ರಹ್ಮೋಸ್’ನಂತಹ ಸಾವಿರಾರು ಕಿ.ಮೀ ದೂರ ಚಿಮ್ಮಬಲ್ಲ ಅತ್ಯಾಧುನಿಕ ಖಂಡಾಂತರ ಕ್ಷಿಪಣಿಗಳಿವೆ. ದೇಶದ ಮಧ್ಯಭಾಗದಲ್ಲೆಲ್ಲೋ ಕುಳಿತು ಸಾವಿರಾರು ಕಿ.ಮೀ ದೂರದ ದೇಶದ ಮೇಲೆ ಕ್ಷಿಪಣಿ ಹಾರಿಸುವ ತಂತ್ರಜ್ಞಾನವಿದೆ. ಆದರೆ, ಇಂತಹ ತಂತ್ರಜ್ಞಾನಗಳ ಬಳಕೆ ಇಲ್ಲದ 1971ರ ಅವಧಿಯಲ್ಲಿ ಭಾರತ–ಪಾಕಿಸ್ತಾನ ಯುದ್ಧಕ್ಕೆ ಬಳಕೆಯಾಗಿದ್ದ ‘ಪಿ15 ಯು ಕ್ಷಿಪಣಿ’ ಶತ್ರುರಾಷ್ಟ್ರಕ್ಕೆ ನಡುಕ ಹುಟ್ಟಿಸಿತ್ತು ಎಂಬ ಕುತೂಹಲದ ಸಂಗತಿ ಅನೇಕರಿಗೆ ಗೊತ್ತಿಲ್ಲ.

ಅಂತಹ ಕ್ಷಿಪಣಿಯೊಂದು ಕಾರವಾರದ ಕಡಲತೀರದಲ್ಲಿದೆ. ನೆಲದಿಂದ 300 ಮೀಟರ್ ಎತ್ತರದವರೆಗೆ ನೆಗೆಯಬಲ್ಲ, ಗರಿಷ್ಠ 40 ಕಿ.ಮೀ ದೂರಕ್ಕೆ ಚಿಮ್ಮುತ್ತಿದ್ದ ಇದೇ ಕ್ಷಿಪಣಿಯನ್ನು ನೌಕಾದಳದ ಯುದ್ಧಕ್ಕೆ ಬಳಸಿತ್ತು ಎಂಬ ವಿವರ ಕ್ಷಿಪಣಿ ಇರಿಸಿದ ಜಾಗದಲ್ಲಿದೆ. ಇದೇ ಕ್ಷಿಪಣಿಯನ್ನು ಕರಾಚಿ ಬಂದರಿನ ಮೇಲೆ ಹಾರಿಸಿದ್ದ ನೌಕಾದಳ ಪಾಕ್ ಸೇನೆ ವಿರುದ್ಧ ಗೆಲುವು ಸಾಧಿಸಿತ್ತು. ಸೋವಿಯತ್ ರಷ್ಯಾ ಈ ಕ್ಷಿಪಣಿಯನ್ನು ತಯಾರಿಸಿ ಭಾರತಕ್ಕೆ ನೀಡಿತ್ತು.

ಯುದ್ಧದಲ್ಲಿ ಬಳಕೆಯಾಗಿದ್ದ ಐಎನ್ಎಸ್ ಚಪಲ್ ಯುದ್ಧನೌಕೆಯ ಜೊತೆಯಲ್ಲೇ ಕ್ಷಿಪಣಿಯೊಂದನ್ನು ನೆನಪಿಗೆ ಇದೇ ಯುದ್ಧನೌಕೆ ಪಕ್ಕದಲ್ಲಿ ಇರಿಸಲಾಗಿದೆ.

1,500 ಕೆಜಿ ತೂಕದ ಟಾರ್ಪಿಡೊ:
ಯುದ್ಧನೌಕೆ ವಸ್ತು ಸಂಗ್ರಹಾಲಯದಲ್ಲಿ ‘ಸಿಇಟಿ 53 ಎಂ’ ಮಾದರಿಯ ಎರಡು ಟಾರ್ಪಿಡೊಗಳನ್ನು (ನೌಕಾ ಸ್ಫೋಟಕ) ವೀಕ್ಷಣೆಗೆ ಇರಿಸಲಾಗಿದೆ. ಜಲಾಂತರ್ಗಾಮಿ ನೌಕೆಗಳಲ್ಲಿ ಇರಿಸುತ್ತಿದ್ದ ಸಿಡಿತಲೆ ಹೊಂದಿರುವ ಕ್ಷಿಪಣಿ ಮಾದರಿಯ ಟಾರ್ಪಿಡೊಗಳು ತಲಾ 1,500 ಕೆ.ಜಿ ತೂಕದಷ್ಟು ಸ್ಫೋಟಕ ಹೊಂದಿದ್ದವು. ಸಮುದ್ರದ ಆಳದಲ್ಲಿ ಜಲಾಂತರ್ಗಾಮಿ ನೌಕೆಗಳಿಂದ ಚಿಮ್ಮುತ್ತಿದ್ದ ಇವು ಶತ್ರುರಾಷ್ಟ್ರದ ಹಡಗು, ಜಲಾಂತರ್ಗಾಮಿ ನೌಕೆಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿತ್ತು.

ಕಾರವಾರದ ಯುದ್ಧನೌಕೆ ವಸ್ತು ಸಂಗ್ರಹಾಲಯದ ಆವರಣದಲ್ಲಿನ ಟಾರ್ಪಿಡೊ

ಸುಣ್ಣ ಬಣ್ಣ ಕಂಡ ಯುದ್ಧ ಸಾಮಗ್ರಿ:

ಯುದ್ಧನೌಕೆ ವಸ್ತು ಸಂಗ್ರಹಾಲಯ ಉದ್ಯಾನದಲ್ಲಿರುವ ಕ್ಷಿಪಣಿ, ಟಾರ್ಪಿಡೊಗಳಿಗೆ ತುಕ್ಕು ಹಿಡಿದು, ಬಣ್ಣ ಮಾಸಿ ಹಲವು ವರ್ಷ ಕಳೆದಿತ್ತು. ಉದ್ಯಾನದ ಬಲಭಾಗದ ಮೂಲೆಯಲ್ಲಿ ಇರಿಸಿದ ಟಾರ್ಪಿಡೊ ಸುತ್ತ ಗಿಡಗಂಟಿ ಬೆಳೆದು ಅವು ಕಣ್ಣಿಗೆ ಕಾಣದಂತೆ ಮುಚ್ಚಲ್ಪಟ್ಟಿತ್ತು. ಪ್ರಧಾನಿ ಮೋದಿ ಅವುಗಳ ಕುರಿತು ಮಾತನಾಡಿದ ಬಳಿಕ ಗಿಡಗಂಟಿಗಳನ್ನು ತೆರವುಗೊಳಿಸಿ, ಬಣ್ಣ ಬಳಿಯಲಾಗಿದೆ. ಸದ್ಯ ಶೈಕ್ಷಣಿಕ ಪ್ರವಾಸದ ನಿಮಿತ್ತ ಶಾಲೆಯ ವಿದ್ಯಾರ್ಥಿಗಳು ಇಲ್ಲಿಗೆ ಹೆಚ್ಚು ಭೇಟಿ ನೀಡುತ್ತಿದ್ದು ಯುದ್ಧ ಸಾಮಗ್ರಿಗಳ ವಿವರಣೆ ಪಡೆದುಕೊಳ್ಳುತ್ತಿದ್ದಾರೆ.

ಐಎನ್ಎಸ್ ಚಪಲ್ ಯುದ್ಧನೌಕೆ, ಟುಪಲೇವ್ ಯುದ್ಧ ವಿಮಾನ ಇರುವ ಉದ್ಯಾನಕ್ಕೆ ಪ್ರವಾಸಿಗರು ಭೇಟಿ ನೀಡಿರುವುದು.

‘ಇಂತಹ ಪ್ರವಾಸಿ ತಾಣಗಳಿಗೆ ಹೆಚ್ಚು ಭೇಟಿ ನೀಡಿದರೆ ಐದೂವರೆ ದಶಕದ ಹಿಂದೆ ದೇಶದ ರಕ್ಷಣಾ ವ್ಯವಸ್ಥೆ ಎಷ್ಟು ಬಲಿಷ್ಠವಾಗಿತ್ತು ಎಂಬುದರ ಅರಿವಿಗೆ ಬರುತ್ತದೆ’ ಎಂದು ಯುದ್ಧನೌಕೆ ಉದ್ಯಾನ ವೀಕ್ಷಣೆಗೆ ಬಂದಿದ್ದ ಪ್ರವಾಸಿಗ ಸೀತಾರಾಮ ಹಲಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.