
ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದ ಹೊರ ನೋಟ...
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ: ಗುಲಬರ್ಗಾ (ಕಲಬುರಗಿ) ಎಂದಾಕ್ಷಣ ಮನದ ಸ್ಮೃತಿಪಟಲದಲ್ಲಿ ಬಹುತೇಕರಿಗೆ ಮೂಡುವ ಚಿತ್ರ; ಅದೊಂದು ಬರಪೀಡಿತ, ಹಿಂದುಳಿದ ಪ್ರದೇಶ. ಅಲ್ಲಿ ನೆತ್ತಿ ಬಿಡುವ ಬಿಸಿಲು. ನೀರಿನ ಸಮಸ್ಯೆ ಎದುರಿಸುತ್ತಿರುವ ಊರು ಎಂದೇ ಅಲ್ಲವೇ?
ಹಿಂದುಳಿದ ಹಣೆಪಟ್ಟಿಯಾಚೆಗೆ ಕಣ್ಣಾಡಿಸಿದರೆ ವೈವಿಧ್ಯಮ ಸಂಗತಿಗಳು ನೋಟಕ್ಕೆ ದಕ್ಕುತ್ತವೆ. ಕಲಬುರಗಿ ಒಂದೊಮ್ಮೆ ಬಹಮನಿಗಳ ರಾಜಧಾನಿಯಾಗಿತ್ತು. ಆಧಾತ್ಮಿಕವಾಗಿ ಖಾಜಾ ಬಂದಾನವಾಜ್ ದರ್ಗಾ, ಭಕ್ತಿ ಪಂಥದಲ್ಲಿ ಶರಣಬಸವೇಶ್ವರರ ದೇವಸ್ಥಾನ ಈ ಭಾಗದ ಅಸ್ಮಿತೆಯಾಗಿ ನಿಂತಿವೆ. ಶ್ರದ್ಧಾ ಕೇಂದ್ರವಾಗಿ ಬುದ್ಧವಿಹಾರವೂ ಚಿತ್ತಾಕರ್ಷಿಸುತ್ತಿದೆ. ಇವೆಲ್ಲಕ್ಕೂ ಮುಖ್ಯವಾದ ಮತ್ತೊಂದು ತಾಣವಿದೆ; ಅದುವೇ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರ!
ಕಲಬುರಗಿಯ ಶರಣಬಸವೇಶ್ವರ ಅಪ್ಪ ಕೆರೆ ಎದುರಿನ ಎರಡು ಎಕರೆ ಪ್ರದೇಶದಲ್ಲಿ 1984ರಲ್ಲಿ ಜಿಲ್ಲಾ ವಿಜ್ಞಾನ ಕೇಂದ್ರವು ಸ್ಥಾಪನೆಯಾಗಿದೆ. ವೀಕ್ಷಣೆಗೆ ಬರುವ ಯುವ ಮನಸುಗಳಲ್ಲಿ ‘ವೈಜ್ಞಾನಿಕ ಮನೋಭಾವ’ದ ಕಿಡಿ ಬೆಳಗಿಸುತ್ತಿದೆ. ಈ ಕೇಂದ್ರದಲ್ಲಿ ವೀಕ್ಷಕರಿಗೆ ವಿಜ್ಞಾನ ಕಲಿಕೆಯೊಂದಿಗೆ ವಿನೋದವೂ ಸಿಗುತ್ತಿದೆ; ಜ್ಞಾನವೂ ದೊರೆಯುತ್ತದೆ. ಈ ವಿಜ್ಞಾನ ಕೇಂದ್ರ ಸ್ಥಾಪನೆಯ ಬೇರುಗಳು ಕೆದಕಿದರೆ ಐದೂವರೆ ದಶಕದ ಹಿಂದಿನ ತನಕ ಚಾಚಿವೆ.
ಅದು 1969ನೇ ಇಸ್ವಿ. ಕಲಬುರಗಿ ಎಸ್.ಬಿ.ಹೈಸ್ಕೂಲ್‌ನ ಸಣ್ಣ ಕೊಠಡಿಯೊಂದರಲ್ಲಿ ವಿಜ್ಞಾನ ಕೇಂದ್ರ ‘ಹುಟ್ಟು’ ಪಡೆಯಿತು. ಕೆಲವು ತಿಂಗಳಲ್ಲಿ ಅಲ್ಲಿಂದ ಕಲಬುರಗಿಯ ಮಲ್ಟಿಪರ್ಪಸ್ ಹೈಸ್ಕೂಲ್‌ಗೆ (ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು) ಸ್ಥಳಾಂತರವಾಯಿತು. ಕೇಂದ್ರದ ವಿಸ್ತಾರವು ಎರಡು ಕೊಠಡಿಗಳಿಗೆ ವ್ಯಾಪಿಸಿತು. ಆಗ ಅದನ್ನು ‘ಪ್ರಾದೇಶಿಕ ವಿಜ್ಞಾನ ಕೇಂದ್ರ’ ಎಂದು ಕರೆಯಲಾಗುತ್ತಿತ್ತು. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಿಂದ (ವಿಐಟಿಎಂ) ವಿಜ್ಞಾನದ ಮಾದರಿಗಳನ್ನು ಎರವಲಾಗಿ ತಂದು ಅಲ್ಲಿ ಪ್ರದರ್ಶಿಸಲಾಗುತ್ತಿತ್ತು. ಆರು ತಿಂಗಳಿಗೊಮ್ಮೆ ವಿಜ್ಞಾನ ಮಾದರಿಗಳ ವಿನಿಮಯ ನಡೆಯುತ್ತಿತ್ತು.
ಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದ ಡಿಜಿಟಲ್ ತಾರಾಲಯದ ನೋಟ...
ಒಂದು ಹಂತದಲ್ಲಿ ಕೇಂದ್ರ ಸರ್ಕಾರದಡಿಯ ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಾಲಯಗಳ ಪರಿಷತ್ತು (ಎನ್‌ಸಿಎಸ್‌ಎಂ) ಕಲಬುರಗಿಯಲ್ಲಿ ಶಾಶ್ವತ ವಿಜ್ಞಾನ ಕೇಂದ್ರ ಸ್ಥಾಪಿಸುವ ಒಲವು ತೋರಿತು. ಅದಕ್ಕೆ ಮುಖ್ಯಮಂತ್ರಿ ಆಗಿದ್ದ ವೀರೇಂದ್ರ ಪಾಟೀಲರು 1974ರಲ್ಲಿ ಅಪ್ಪ ಕೆರೆ ಎದುರಿನ ಸಾರ್ವಜನಿಕ ಉದ್ಯಾನದ ಜಾಗವನ್ನು ಉಚಿತವಾಗಿ ಒದಗಿಸಿ ಪೊರೆದರು.
ಆ ಜಾಗದಲ್ಲೇ ಪ್ರಸ್ತುತ ಇರುವ ಜಿಲ್ಲಾ ವಿಜ್ಞಾನ ಕೇಂದ್ರದ ಭವ್ಯ ಕಟ್ಟಡ ತಲೆಎತ್ತಿತು. 1984ರ ಜನವರಿ 6ರಂದು ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಎನ್‌ಸಿಎಸ್‌ಎಂ ಅಡಿಯಲ್ಲಿ ಬರುವ ದೇಶದ ಮೂರನೇ ಹಾಗೂ ದಕ್ಷಿಣ ಭಾರತದ ಮೊಟ್ಟಮೊದಲ ಜಿಲ್ಲಾಮಟ್ಟದ ವಿಜ್ಞಾನ ಕೇಂದ್ರವೆಂಬ ಗರಿ ಮುಡಿಯಿತು. ಇಂದಿಗೂ ಎನ್‌ಸಿಎಸ್‌ಎಂ ಅಡಿಯಲ್ಲಿರುವ ರಾಜ್ಯದ ಏಕೈಕ ಜಿಲ್ಲಾಮಟ್ಟದ ವಿಜ್ಞಾನ ಕೇಂದ್ರ ಎಂಬ ಅಗ್ಗಳಿಕೆ ಹೊಂದಿದೆ.
ಬೆಂಗಳೂರಿನಲ್ಲಿರುವ ವಿಐಟಿಎಂನ ಉಪ ಘಟಕವಾಗಿರುವ ಈ ಕೇಂದ್ರಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ವಾರ್ಷಿಕ ಸರಾಸರಿ 1.70 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಾರೆ. ಈ ಕೇಂದ್ರ ಆರಂಭ ಆದಾಗಿನಿಂದ ಈತನಕ ಅಂದಾಜು 75 ಲಕ್ಷಕ್ಕೂ ಹೆಚ್ಚು ವೀಕ್ಷಕರು ವಿಜ್ಞಾನ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದಾರೆ.
1984ರಲ್ಲಿ ಈ ಕೇಂದ್ರವು ಕಾರ್ಯಾರಂಭ ಮಾಡಿದಾಗ ‘ಗುಲಬರ್ಗಾ ಸಿರಿ’ (ವೆಲ್ತ್ ಆಫ್ ಗುಲಬರ್ಗಾ) ಗ್ಯಾಲರಿಯೊಂದಿಗೆ ವಿಜ್ಞಾನ ಪಾರ್ಕ್ ಮಾತ್ರವೇ ಇತ್ತು. ಸುಮಾರು 20 ಮಾದರಿಗಳು ಪ್ರದರ್ಶನಕ್ಕಿದ್ದವು. ಅಂದಿನ ದಿನಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಚಲನಚಿತ್ರಗಳ ಪ್ರದರ್ಶನಗಳು ನಡೆಯುತ್ತಿದ್ದವು. ಬಟ್ಟೆ ಚಿತ್ರಕಲೆ, ಬೊಟಿಕ್ ಪೇಂಟಿಂಗ್, ಬೇಕರಿ ಉತ್ಪನ್ನಗಳ ತಯಾರಿ, ಹಣ್ಣು ಮತ್ತು ತರಕಾರಿಗಳ ಸಂರಕ್ಷಣೆ, ತಾಯಿ ಮತ್ತು ಮಗುವಿನ ಕಾಳಜಿ, ಕುಷ್ಠರೋಗ ಪತ್ತೆ ಶಿಬಿರದಂಥ ಸಮುದಾಯ ವಿಜ್ಞಾನ ಕಾರ್ಯಕ್ರಮಗಳು ವಿಜ್ಞಾನ ಕೇಂದ್ರ ಹಮ್ಮಿಕೊಳ್ಳುತ್ತಿತ್ತು. ಆ ಮೂಲಕ ಸಾಮಾನ್ಯ ಜನರನ್ನೂ ಸೆಳೆಯುವಲ್ಲಿ ವಿಜ್ಞಾನ ಕೇಂದ್ರ ಯಶಸ್ವಿಯಾಗಿತ್ತು.
1986ರಲ್ಲಿ ನಭದಲ್ಲಿ ‘ಹ್ಯಾಲಿ ಧೂಮಕೇತು’ ಕಾಣಿಸಿತ್ತು. ಅದೇ ಹೊತ್ತಿಗೆ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಟೆಲಿಸ್ಕೋಪ್ ಪರಿಚಯಿಸಲಾಯಿತು. ಇದು ಖಗೋಳ ಪ್ರೇಮಿಗಳನ್ನು ಆಕರ್ಷಿಸಿತು. ಹೀಗೆ ಶುರುವಾದ ಖಗೋಳ ಕೌತುಕಗಳ ವೀಕ್ಷಣೆ ಇಂದಿಗೂ ಮುಂದುವರಿದಿದೆ.
1988ರ ಹೊತ್ತಿಗೆ ಮತ್ತಷ್ಟು ಬದಲಾವಣೆಗೆ ತೆರೆದುಕೊಂಡ ವಿಜ್ಞಾನ ಕೇಂದ್ರವು ‘ಜನಪ್ರಿಯ ವಿಜ್ಞಾನ’ ಗ್ಯಾಲರಿ ದಕ್ಕಿಸಿಕೊಂಡಿತು. ಇದರಲ್ಲಿ ದೃಗ್ವಿಜ್ಞಾನ (ಬೆಳಕಿನ ಪಸರಿಸುವಿಕೆ) ಹಾಗೂ ಗಣಿತಕ್ಕೆ ಸಂಬಂಧಿಸಿದ 24 ಮಾದರಿಗಳನ್ನು ಹೊಂದಿತ್ತು. ಅದನ್ನು 2004ರಲ್ಲಿ ತೆಗೆದು ಮಿರರ್ ಮೇಜ್ (ಕನ್ನಡಿ ಕಗ್ಗಂಟು) ಸ್ಥಾಪಿಸಲಾಗಿದೆ.
1988ರಲ್ಲೇ ಗಾಳಿ ತುಂಬಿ ಉಬ್ಬಿಸುವ ಮಿನಿ ತಾರಾಮಂಡಲ ಪರಿಚಯಿಸಲಾಯಿತು. ಇರುಳಲ್ಲಿ ಕಾಣುವ ಆಕಾಶದ ನಕ್ಷತ್ರಗಳ ನೋಟ ಅದರಲ್ಲಿ ದಕ್ಕುತ್ತಿತ್ತು. ಸಾಕಷ್ಟು ವಿಜ್ಞಾನಾಸಕ್ತರನ್ನು ಸೆಳೆದ ತಾರಾಮಂಡಲ 2009ಕ್ಕೆ ಪ್ರದರ್ಶನ ನಿಲ್ಲಿಸಿತು. ಅದರ ಬದಲಿಗೆ 2010ರಲ್ಲಿ ಶಾಶ್ವತ ಕಟ್ಟಡದೊಂದಿಗೆ ಅತ್ಯಂತ ಸುಧಾರಿತ ತಂತ್ರಜ್ಞಾನ ಒಳಗೊಂಡ ಡಿಜಿಟಲ್ ಪ್ಲಾನೆಟೆರಿಯಂ ಸ್ಥಾಪಿಸಲಾಗಿದೆ.
ಕಲಬುರಗಿ ಜಿಲ್ಲಾವಿಜ್ಞಾನ ಕೇಂದ್ರದಲ್ಲಿ ವಿದ್ಯಾರ್ಥಿಗಳು ಕುತೂಹಲದಿಂದ ವಿಜ್ಞಾನ ಮಾದರಿ ಕಣ್ತುಂಬಿಕೊಂಡ ನೋಟ
2005ರಲ್ಲಿ ವಿಜ್ಞಾನ ಕೇಂದ್ರದಲ್ಲಿ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಎಲೆಕ್ಟ್ರಾನಿಕ್ಸ್ ಗ್ಯಾಲರಿ ಅಭಿವೃದ್ಧಿಪಡಿಸಲಾಯಿತು. ನಿತ್ಯದ ಬದುಕಿನಲ್ಲಿ ಬಳಕೆಯಾಗುವ 44 ಬಗೆಯ ಎಲೆಕ್ಟ್ರಾನಿಕ್ಸ್ ಮಾದರಿಗಳು ಅಲ್ಲಿವೆ.
2009ರಲ್ಲಿ 3ಡಿ ಥಿಯೇಟರ್ ಸ್ಥಾಪಿಸಲಾಗಿದೆ. 2012ರಲ್ಲಿ 21 ಸಂವಾದಾತ್ಮಕ ಮಾದರಿಗಳನ್ನು ಒಳಗೊಂಡ ‘ಜನಪ್ರಿಯ ವಿಜ್ಞಾನ’ ಗ್ಯಾಲರಿ ಆರಂಭಿಸಲಾಗಿದ್ದು, ವಿಜ್ಞಾನದ ಮನಸುಗಳನ್ನು ಸೆಳೆಯುತ್ತಿದೆ. ಅದೇ ವರ್ಷ ಡೈನೋಸರ್ ಪಾರ್ಕ್ ಉದ್ಘಾಟಿಸಿದ್ದು, ವೀಕ್ಷಕರ ಎದುರು ಡೈನೋಸರ್‌ಗಳು ‘ಗರ್ಜನೆ’ ಮೊಳಗಿಸುತ್ತಿವೆ.
2015ರಲ್ಲಿ ಗಣಿತ ಗ್ಯಾಲರಿ ಲೋಕಾರ್ಪಣೆಗೊಂಡಿದೆ. 2025ರಲ್ಲಿ ‘ಮಾನವನ ಅದ್ಭುತ ದೇಹ’ (ಇನ್ ಕ್ರೆಡಿಬಲ್ ಹ್ಯೂಮನ್ ಬಾಡಿ) ಗ್ಯಾಲರಿ ಉದ್ಘಾಟಿಸಲಾಗಿದೆ. 1000 ಚದರ ಅಡಿ ವಿಸ್ತೀರ್ಣದಲ್ಲಿ ಮಾನವನ ದೇಹಕ್ಕೆ ಸಂಬಂಧಿಸಿದ 30 ಮಾದರಿಗಳಿದ್ದು, ವೀಕ್ಷಕರಿಗೆ ಮಾನವ ಅಂಗರಚನಾಶಾಸ್ತ್ರ, ಶರೀರಶಾಸ್ತ್ರದ ಅದ್ಭುತಗಳ ಬಗೆಗೆ ಆಳವಾದ ಒಳನೋಟಗಳನ್ನು ಒದಗಿಸುತ್ತವೆ. ಬಹುತೇಕ ಮಾದರಿಗಳು ಸಂವಾದಾತ್ಮಕ, 3ಡಿ ಮಾದರಿಯಾಗಿವೆ.
ಕಲಬುರಗಿ ಜಿಲ್ಲಾವಿಜ್ಞಾನ ಕೇಂದ್ರದ ಹೊರಗೆ ಅಳವಡಿಸಿರುವ ಎರಡು ಆಸನಗಳ ವಿಮಾನ
ಹೀಗಿದೆ ವಿಜ್ಞಾನ ಕೇಂದ್ರ?:
ವಿಜ್ಞಾನ ಕೇಂದ್ರದ ನೆಲಮಹಡಿಯಲ್ಲಿ ಗಣಿತ ಗ್ಯಾಲರಿ, ಜನಪ್ರಿಯ ವಿಜ್ಞಾನ ಎಂಬ ಗ್ಯಾಲರಿಗಳಿವೆ. ಒಳಪ್ರವೇಶಿಸುವ ಮಾರ್ಗದಲ್ಲದೇ ರಾಕೆಟ್ ಮಾದರಿಗಳು, ವಿಜ್ಞಾನಿಗಳ ಪುತ್ಥಳಿಗಳು ಗಮನ ಸೆಳೆಯುತ್ತವೆ. ಮೊದಲ ಮಹಡಿಯಲ್ಲಿ ವಿನೋದ ವಿಜ್ಞಾನ ಗ್ಯಾಲರಿಯಿದೆ. ಅದಕ್ಕೆ ಎದುರಿಗೇ ‘ಮಾನವನ ಅದ್ಭುತ ದೇಹ’ ಗ್ಯಾಲರಿ ಇದೆ. ಎರಡನೇ ಮಹಡಿಯಲ್ಲಿ ಎಲೆಕ್ಟ್ರಾನಿಕ್ ಗ್ಯಾಲರಿ, 3ಡಿ ಥಿಯೇಟರ್, ಮಿರರ್ ಮೇಜ್(ಕನ್ನಡಿ ಕಗ್ಗಂಟು) ಇದೆ.
ಕೇಂದ್ರದ ಬಲಕ್ಕೆ ಡಿಜಿಟಲ್ ತಾರಾಲಯವಿದ್ದು, ಹಿಂಭಾಗದಲ್ಲಿ ಡೈನೋಸಾರ್ ಪಾರ್ಕ್ ಇದೆ. ಕೇಂದ್ರದ ಸಮೀಪದ ಯಲ್ಲಮ್ಮ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ವಿಜ್ಞಾನ ಪಾರ್ಕ್ ಜ್ಞಾನ ಹಂಚುತ್ತಿದೆ.
ಶತಮಾನದ ಹಿಂದೆ ಬಳಕೆಯಲ್ಲಿದ್ದ ಉಗಿಬಂಡಿ ಎಂಜಿನ್ ಹಾಗೂ ಎಚ್‌ಎಎಲ್ ನಿರ್ಮಿತ ಹಳೇ ಕಾಲದ ತರಬೇತಿ ವಿಮಾನ ‘ಕಿರಣ್ ಏರ್‌ಕ್ರಾಫ್ಟ್ ಯು–809’ ಕೂಡ ವಿಜ್ಞಾನ ಕೇಂದ್ರದ ಆವರಣದಲ್ಲಿವೆ.
ಸಾರ್ವಜನಿಕರಿಗೆ ₹25, ಖಾಸಗಿ, ಅನುದಾನಿತ ಶಾಲೆ–ಕಾಲೇಜುಗಳ ವಿದ್ಯಾರ್ಥಿಗಳ ಗುಂಪುಗಳಿಗೆ ₹15 ಹಾಗೂ ಸರ್ಕಾರಿ ಶಾಲೆ–ಕಾಲೇಜು ವಿದ್ಯಾರ್ಥಿಗಳ ಗುಂಪಿಗೆ ₹5 ಪ್ರವೇಶ ಶುಲ್ಕವಿದೆ. ವಿಜ್ಞಾನ ಪಾರ್ಕ್, ಡಿಜಿಟಲ್ ತಾರಾಲಯ, 3ಡಿ ಥಿಯೆಟರ್‌ಗೆ ಪ್ರತ್ಯೇಕ ಶುಲ್ಕಗಳಿವೆ.
‘ವಿಜ್ಞಾನ ಕೇಂದ್ರ ಬರೀ ವಿಜ್ಞಾನದ ಮಾದರಿಗಳಿಗೆ ಸೀಮಿತವಾಗಿಲ್ಲ. ಬದುಕಿಗೆ ಬೇಕಾದ ಜ್ಞಾನವೂ ಇಲ್ಲಿದೆ. ಈ ಭಾಗದ ಜನರಲ್ಲಿ ವೈಜ್ಞಾನಿಕ ಮನೋಭಾವ ಜಾಗೃತಗೊಳಿಸಲು ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಸುರಿಯುತ್ತಿದ್ದು, ಜನರಿಗೆ ವಿಜ್ಞಾನ ತಲುಪಬೇಕಿದೆ. ಜನರು ಮಕ್ಕಳನ್ನು ಕರೆದುಕೊಂಡು ಪಿಕ್‌ನಿಕ್ ತಾಣ, ಉದ್ಯಾನಗಳನ್ನು ಸುತ್ತುವ ಜೊತೆಗೆ ಅವರನ್ನು ಇಲ್ಲಿ ಕರೆ ತಂದರೆ ಅವರಲ್ಲಿ ವಿಜ್ಞಾನ ಆಸಕ್ತಿ ಮೂಡಿಸಿದಂತಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ವಿಜ್ಞಾನ ಕೇಂದ್ರ ನಿವೃತ್ತ ಅಧಿಕಾರಿ ಸಿ.ಎನ್.ಲಕ್ಷ್ಮೀನಾರಾಯಣ.
‘ಈ ಭಾಗದಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ವಿಜ್ಞಾನ ಕೇಂದ್ರದ ಪಾತ್ರವೂ ಅನನ್ಯ. 1990ರ ದಶಕದಲ್ಲಿ ಮಕ್ಕಳಲ್ಲಿ ಸಾಫ್ಟ್‌ವೇರ್ ಕ್ಷೇತ್ರದ ಸೆಳೆಯಲು ಐದು ಕಂಪ್ಯೂಟರ್ ಉತ್ಸವ ನಡೆಸಲಾಗಿತ್ತು. ಶಿಕ್ಷಣ ಇಲಾಖೆ ಸಹಯೋಗದಲ್ಲಿ 1985ರಿಂದ ನಿರಂತರವಾಗಿ ಜಿಲ್ಲಾಮಟ್ಟದ ವಿಜ್ಞಾನ ಮೇಳ, ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ, ಜಿಲ್ಲಾಮಟ್ಟದ ವಿಜ್ಞಾನ ಗೋಷ್ಠಿಗಳನ್ನು ಯೋಜಿಸುತ್ತ ಬರಲಾಗಿದೆ’ ಎನ್ನುತ್ತಾರೆ.
ಲಕ್ಷ್ಮೀನಾರಾಯಣ ಅವರು ಈ ಕೇಂದ್ರದಲ್ಲಿ ಶಿಕ್ಷಣ ಸಹಾಯಕರಾಗಿ ಸೇರಿದ್ದರು. ಬಳಿಕ ಶಿಕ್ಷಣಾಧಿಕಾರಿಯಾಗಿ, 2012ರಿಂದ ಜಿಲ್ಲಾ ವಿಜ್ಞಾನ ಅಧಿಕಾರಿಯಾಗಿ ಹೀಗೆ ವಿವಿಧ ಹಂತದಲ್ಲಿ ಸುದೀರ್ಘ ಅವಧಿಗೆ ಕೆಲಸ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.