ADVERTISEMENT

ಅಂಗವಿಕಲನಿಗೆ ಸಿಗದ ಮಾಸಾಶನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 10:20 IST
Last Updated 13 ಜನವರಿ 2012, 10:20 IST

ಕಾಳಗಿ: ಹುಟ್ಟಿನಿಂದಲೂ ಕಾಲುಗಳಿಂದ ಮುನ್ನಡೆಯದ ದೇಹ. ಜತೆಗೆ ಹೆಂಡತಿ ಮತ್ತು ಮೂರು ಮಕ್ಕಳ ಜೀವಾಧಾರಕ್ಕೆ ಏನಾದರೂ ಮಾಡಿ ಎದೆತಟ್ಟಿ ನಿಲ್ಲಬೇಕಾದ ಸ್ಥಿತಿ. ನಿತ್ಯದ ನಡಿಗೆಯಲ್ಲಿ ಎಡವಿದರೆ ಅಪಾಯ ಕಟ್ಟಿಟ್ಟ ಬುತ್ತಿ... ಹೀಗೆ ದಿನವಿಡಿಯ ಬದುಕಿನಲ್ಲಿ ಅನುಭವಿಸುತ್ತಿರುವ ಘಳಿಗೆಗಳು ಮೆಲಕಹಾಕುತ್ತ ಹೋದರೆ ಸಿಹಿಗಿಂತ ಕಹಿಯೇ ಜಾಸ್ತಿ ಎಂದು ಕಣ್ಣೀರಿಡುವ ಚಿಂಚೋಳಿ ತಾಲ್ಲೂಕಿನ ರಟಕಲ್ ಗ್ರಾಮದ ಗುಂಡಪ್ಪ ನಂದೂರ್ ಎಂಬ ಅಂಗವಿಕಲನಿಗೆ ಸರ್ಕಾರದಿಂದ ಬರುತ್ತಿದ್ದ ಮಾಸಾಶನ ನಿಂತುಬಿಟ್ಟಿದೆ.

ಈ ಮೊದಲೇ ಏನೂ ಆಸರೆ ಇಲ್ಲದೆ ಸರ್ಕಾರದ ಆಶ್ರಯ ಮನೆಯಲ್ಲಿ ಕಾಲಕಳೆಯುತ್ತಿರುವ ಗುಂಡಪ್ಪ ನಂದೂರ್ ಬಾಲ್ಯದಿಂದಲೂ ನಿಶಕ್ತ ಕಾಲುಗಳೆರಡರಿಂದ `ಅಂಗವಿಕಲ~ದ ಹಣೆಪಟ್ಟಿ ಕಟ್ಟಿಕೊಂಡಿರುವ ಬಡಪಾಯಿ.
ಶೇಕಡಾ 80ರಷ್ಟು ಅಂಗವಿಕಲ ಇದ್ದಿರುವ ಬಗ್ಗೆ ವೈದ್ಯಾಧಿಕಾರಿಗಳಿಂದ ದೃಢೀಕರಣದ ಪ್ರಮಾಣ ಪತ್ರ ಹೊಂದಿರುವ ಈತ 1979ರಿಂದ ಪ್ರತಿ ತಿಂಗಳು ಅಂಗವಿಕಲ ಮಾಸಾಶನ ಪಡೆಯುತ್ತಿದ್ದ ಎಂದು ಹೇಳಲಾಗಿದೆ."

ಮೊದಲೆ ಅನಕ್ಷರಸ್ಥನಾಗಿರುವ ಗುಂಡಪ್ಪನಿಗೆ ಮೇಲೆದ್ದು ನಿಲ್ಲಲ್ಲು ಕಾಲೆರಡು ಶಕ್ತಿಹೀನವಾಗಿರುವಂಥವು.  ಇಂಥದರಲ್ಲಿ ಕುಳಿತಲ್ಲೆ ಏನಾದರೂ ಮಾಡಿ ಬದುಕಿನ ಬಂಡಿ ತುಂಬಿಸಿಕೊಳ್ಳಬೇಕೆಂದರೆ ನೆರವಿನ ಹಸ್ತ ಸಮೀಪಕ್ಕಿಲ್ಲ. ಹೇಗಾದರೂ ಮಾಡಿ ತನ್ನೆರಡು ಹೆಣ್ಣು ಮತ್ತು ಒಂದು ಗಂಡು ಮಗು, ಹೆಂಡತಿಯ ಬವಣೆ ತುಂಬಬೇಕಾದ ಈತ ಊರಲ್ಲಿನ ಬೇರೊಬ್ಬರ ಹಿಟ್ಟಿನ ಗಿರಣಿ ನಡೆಸಿ ಬರುವ ಕೂಲಿ ಹಣದಲ್ಲೇ ಸಂಸಾರದ ಬಂಡಿ ಹೊಡೆಯುತ್ತಿದ್ದಾನೆ.

2011ರ ಮಾರ್ಚ್ ಆಚೆಗೆ ಹಾಗೊ ಹೀಗೋ ಬರುತಿದ್ದ ಮಾಸಾಶನ ಸ್ವಲ್ಪ ಮಟ್ಟಿಗೆ ಹೊಟ್ಟೆತುಂಬಲು ನೆರವಾಗುತ್ತಿತ್ತು ಎನ್ನುವ ಇವನಿಗೆ ಒಂಬತ್ತು ತಿಂಗಳಿಂದ ಮಾಸಾಶನ ಥಟ್ಟನೆ ನಿಂತುಬಿಟ್ಟು ಬದುಕಿನ ಭಾರವಾದ ಹೊರೆಗೆ ಬರೆ ಬಿದ್ದಂತಾಗಿದೆ.

ಈಗಲಾದರೂ ಬರಬಹುದು, ನಾಳೆಯಾದರೂ ಬರಬಹುದು ಎಂದು ಗಿರಣಿ ನಡೆಸುತ್ತಲೇ ಕುಳಿತ  ಗುಂಡಪ್ಪನಿಗೆ ಆ ಮಾಸಾಶನ ದೂರಾಗುತ್ತಲ್ಲೇ ಹೋಗಿದೆ. ಹೀಗೆ ಸುಮ್ಮನೆ ಕುಳಿತರೆ ಬದುಕು ಮತ್ತಷ್ಟು ಭಾರ ಎಂದರಿತ ಗುಂಡಪ್ಪ ಕಂಡ ಕಂಡವರನೆಲ್ಲ ಕೇಳಲು ಶುರುಮಾಡಿ ಗ್ರಾಮ ಲೇಖಪಾಲಕರ ಮೊರೆ ಹೋಗಿದ್ದಾನೆ.

ಅವರ ಮಾತಿನಂತೆ ಕೋಡ್ಲಿಯ ಉಪ ತಹಸೀಲ್ದಾರರ ಕಚೇರಿ, ಕಾಳಗಿಯ ಉಪ ಖಜಾನೆ ಅಧಿಕಾರಿಗಳನ್ನೂ ಕಂಡಿದ್ದಾನೆ. ಎಷ್ಟೇ ಅಲೆದಾಡಿದರೂ ಮಾಸಾಶನದ ಸುಳಿವು ಮಾತ್ರ ಸಿಗದಾಗಿ ನವೆಂಬರ್ 4ರಂದು ಗುಲ್ಬರ್ಗ ಜಿಲ್ಲಾಧಿಕಾರಿಗಳಿಗೆ ತನ್ನೆಲ್ಲ ಗೋಳು ತೋಡಿಕೊಂಡಿದ್ದಾನೆ. ಇಷ್ಟಕ್ಕೂ ಬಿಡದೆ ಹಿಟ್ಟಿನ ಗಿರಣಿಗೆ ಗೈರು ಹಾಜರಿಯಾಗಿ ಆಗಾಗ ಕಾಳಗಿಯಲ್ಲಿನ ಸಂಬಂಧಪಟ್ಟ ಕಚೇರಿಗಳಿಗೆ ತೆವಳುತ್ತ ಬರುವುದು ನೋಡಿದರೆ ಎಂಥವರ ಮನಸ್ಸು ಚುರ್ ಎನ್ನದೇ ಇರದು.

ಈಗಲಾದರೂ ಈ ಬಡಪಾಯಿ ಅಂಗವಿಕಲನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ತೆರೆದುನೋಡಿ ಮಾಸಾಶನ ನೀಡುವ ಪ್ರಯತ್ನಕ್ಕೆ ಮುಂದಾಗುವವರೇ ಎಂದು ಕಾದುನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.