ADVERTISEMENT

ಅಂಬೇಡ್ಕರ್‌ಗೆ ಹೀಗೊಂದು ಚಿತ್ರನಮನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2011, 7:20 IST
Last Updated 14 ಏಪ್ರಿಲ್ 2011, 7:20 IST
ಅಂಬೇಡ್ಕರ್‌ಗೆ ಹೀಗೊಂದು ಚಿತ್ರನಮನ
ಅಂಬೇಡ್ಕರ್‌ಗೆ ಹೀಗೊಂದು ಚಿತ್ರನಮನ   

ಯಾದಗಿರಿ: ತಮ್ಮ ಭಕ್ತಿ, ಗೌರವ ಸಮರ್ಪಿಸಲು ಎಲ್ಲರಿಗೂ ಒಂದೊಂದು ದಾರಿ. ಕೆಲವರು ಕೈಮುಗಿದು ಶರಣು ಎಂದರೆ, ಇನ್ನು ಕೆಲವರು ಅವರ ಸಂದೇಶಗಳನ್ನು ಹಾಡಿ ಹೊಗಳುತ್ತಾರೆ. ಹಾಗೆಯೇ ಎಲ್ಲರಲ್ಲಿಯೂ ವಿಶಿಷ್ಟವಾದುದನ್ನು ಮಾಡುವ ಮೂಲಕ ಮಹನೀಯರಿಗೆ ಗೌರವ ಸಮರ್ಪಿಸುವ ಅಪರೂಪದ ಕೆಲಸ ಮಾಡಿದವರು ಚಿತ್ರ ಕಲಾವಿದ ಬಸವರಾಜ ಕಲೆಗಾರ.

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬುದ್ಧ ಜಯಂತಿ ಅಂಗವಾಗಿ ಕಲಾವಿದ ಬಸವರಾಜ ಕಲೆಗಾರ ತಮ್ಮ ಕಲಾಕೃತಿಗಳ ಮೂಲಕ ವಿಶಿಷ್ಟವಾಗಿ ಬುದ್ಧ ಮತ್ತು ಡಾ. ಅಂಬೇಡ್ಕರ್ ಅವರನ್ನು ಚಿತ್ರಿಸುವ ಮೂಲಕ ಅಂಬೇಡ್ಕರ್‌ರಿಗೆ ನಮನ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿಯೇ ರಚಿಸಿರುವ ಈ ವಿಶಿಷ್ಟ ಕಲಾಕೃತಿಗಳು ಜನರ ಗಮನ ಸೆಳೆದಿವೆ. ಅಂಬೇಡ್ಕರ್‌ರ ಭಾವಚಿತ್ರ, ಬುದ್ಧನ ಲೀಲಾಮೃತ, ಸಾವನ್ನು ಗೆದ್ದ ಬುದ್ಧ, ಬುದ್ಧನ ಸೃಷ್ಟಿ, ಬುದ್ಧ ಮತ್ತು ಮಾಯಾದೇವಿ, ಬುದ್ಧನ ಹೃದಯ ದೊಳಗೆ ಅಂಬೇಡ್ಕರ್ ಹೀಗೆ ಹತ್ತಾರು ಚಿತ್ರಗಳನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.

ಅಂಬೇಡ್ಕರ್‌ರ ಭಾವಚಿತ್ರವು ವಿಶೇಷವಾಗಿದೆ. ಹಿಂದೆ ಬುದ್ಧನ ಚಿತ್ರಗಳಿದ್ದು, ಎಲ್ಲರೂ ಒಂದೇ ಎನ್ನುವ ಸಂಕೇತವಾಗಿ ಡಾ. ಅಂಬೇಡ್ಕರ್‌ರ ಎದೆಯಲ್ಲಿ ಕೈ ಚಿತ್ರವನ್ನು ಬಿಡಿಸಿದ್ದಾರೆ. ಬುದ್ಧನು ತಪಸ್ಸುಗೈದ ಇನ್ನೊಂದು ಚಿತ್ರದಲ್ಲಿ ಮೇಲೆ ಚಂದ್ರನಿದ್ದರೆ, ಗುಲಾಬಿ ಹೂವುಗಳು ಕಾಣುತ್ತವೆ. ಮೂರನೇ ಚಿತ್ರದಲ್ಲಿ ಸಾವನ್ನು ಗೆದ್ದು ಬುದ್ಧನನ್ನು ಬಿಡಿಸಿದ್ದು, ಮಾನವನ ತಲೆಬುರುಡೆ, ಧ್ಯಾನ ಮಗ್ನನಾದ ಬುದ್ಧನನ್ನು ಚಿತ್ರಿಕರಿಸಿದ್ದಾರೆ.

ಬುದ್ಧನ ಸೃಷ್ಟಿಯನ್ನು ತೋರಿ ಸುವ     ಇನ್ನೊಂದು ಚಿತ್ರದಲ್ಲಿ ಎಲೆ ಯಾ ಕಾರದೊಳಗೆ ಬುದ್ಧ ನನ್ನು ಬಿಡಿಸಿದ್ದು, ಅರಳಿದ ಹೂವುಗಳು, ನವಿಲಿನ ಚಿತ್ರ ಗಳಿವೆ. ತಾಯಿ ಮಾಯಾದೇವಿಯು ತನ್ನ ಮಗ ಬುದ್ಧನ ಯಶಸ್ಸನ್ನು ಸಂತೋಷದಿಂದ ಆಲಿಸುವ ಕ್ಷಣ ವನ್ನು ಬಣ್ಣಗಳ ಮೂಲಕ ಬಿಡಿಸಿ ತೋರಿಸಿದ್ದಾರೆ.

ಅದ್ಭುತವಾದ ಹಲವಾರು ಕಲಾ ಕೃತಿಗಳ ಮೂಲಕ ಗಮನ ಸೆಳೆದಿರುವ ಬಸವರಾಜ ಕಲೆಗಾರ ಶಹಾಪುರ ತಾಲ್ಲೂಕಿನ ಕೊಂಕಲ್‌ನವರು. ಇದೀಗ ಹಂಪಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅವರು, ವಿಶೇಷ ಸಂದರ್ಭಗಳಲ್ಲಿ ಅದಕ್ಕೆ ತಕ್ಕಂತೆ ಚಿತ್ರಗಳನ್ನು ಬಿಡಿಸುವುದರಲ್ಲಿ ಸಿದ್ಧಹಸ್ತರು. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ದಲ್ಲಿಯೂ ಯಾದಗಿರಿ ಜಿಲ್ಲೆಯ ವೈಶಿಷ್ಟ್ಯವನ್ನು ಸಾರುವ ಕಲಾಕೃತಿ ಗಳನ್ನು ತಯಾರಿಸುವಲ್ಲಿಯೂ ತಮ್ಮ ಕೊಡೆಗೆ ನೀಡಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT