ADVERTISEMENT

`ಅನ್ನದ ಮೇಲೆ ಅನಾದರ ಬೇಡ'

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 10:13 IST
Last Updated 6 ಜೂನ್ 2013, 10:13 IST
ಶಹಾಪುರ ಪಟ್ಟಣದ ಕೋರ್ಟ್ ಆವರಣದಲ್ಲಿ ಬುಧವಾರ ಸಿವಿಲ್ (ಹಿರಿಯ ಶ್ರೇಣಿ) ನ್ಯಾಯಾಧೀಶ ಕಾರಬಾರಿ ರವೀಂದ್ರ ಸಸಿ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು   ಉದ್ಘಾಟಿಸಿದರು. ನ್ಯಾಯಾಧೀಶ ವೈ.ಕೆ.ಬೇನಾಳ ಇದ್ದರು
ಶಹಾಪುರ ಪಟ್ಟಣದ ಕೋರ್ಟ್ ಆವರಣದಲ್ಲಿ ಬುಧವಾರ ಸಿವಿಲ್ (ಹಿರಿಯ ಶ್ರೇಣಿ) ನ್ಯಾಯಾಧೀಶ ಕಾರಬಾರಿ ರವೀಂದ್ರ ಸಸಿ ನೆಡುವ ಮೂಲಕ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನ್ಯಾಯಾಧೀಶ ವೈ.ಕೆ.ಬೇನಾಳ ಇದ್ದರು   

ಶಹಾಪುರ:  ಹಸಿದ ಒಡಲಿಗೆ ತುತ್ತು ಅನ್ನವೇ ಆಧಾರ. ಅನ್ನದ ಮೇಲೆ ಅನಾದರ ಬೇಡ ಎಂದು ಎಂದು ಸಿವಿಲ್ (ಹಿರಿಯ ಶ್ರೇಣಿ) ಕೋರ್ಟ್ ನ್ಯಾಯಾಧೀಶ ಕಾರಬಾರಿ ರವೀಂದ್ರ ಹೇಳಿದರು.

ಪಟ್ಟಣದ ಕೋರ್ಟ್ ಆವರಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನಾವಶ್ಯಕವಾಗಿ ಆಹಾರವನ್ನು ಪೋಲು ಮಾಡುವುದರಿಂದ ಪರಿಸರದ ಹಾನಿಯ ಜೊತೆಗೆ ಆಹಾರದ ಅಭಾವ ಉಂಟಾಗುವುದು. ವಿಶ್ವ ಪರಿಸರ ದಿನಾಚರಣೆಯನ್ನು ಪ್ರಸಕ್ತ ವರ್ಷ `ಆಹಾರ ನಿಯಂತ್ರಿಸುವ ದಿನ' ಎಂದು ಆಚರಿಸಿದರೂ ತಪ್ಪಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರ  ಬಡವರಿಗೆ ಒಂದು ರೂಪಾಯಿಗೆ ಕೆ.ಜಿ ಅಕ್ಕಿಯನ್ನು ವಿತರಿಸುವುದು ಸ್ವಾಗತಾರ್ಹ. ಅದು ಕಳಪೆ ಮಟ್ಟದ್ದಾಗಿರಬಾರದು ಎಂದರು.

ಪ್ರತಿ ದಿನವು ನಾವು ಪರಿಸರ ದಿನಾಚರಣೆ ಆಚರಿಸುವುದು ಅಗತ್ಯವಾಗಿದೆ. ಪ್ಲಾಸ್ಟಿಕ್  ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಲಿದೆ.

ಇದರಿಂದ ಬಚಾವಾಗಬೇಕಾದರೆ ಪರಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕು ಎಂದ ಅವರು ಸಲಹೆ ನೀಡಿದರು.
ನ್ಯಾಯಾಧೀಶ ವೈ.ಕೆ.ಬೇನಾಳ ಮಾತನಾಡಿ, ಕೇವಲ ಪರಿಸರದ ದಿನಾಚರಣೆಯಂದು ಸಸಿ ನೆಟ್ಟರೆ ಸಾಲದು ಅದನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಸಿರು ನಮ್ಮ ಮುಂದಿನ ಭರವಸೆಯ ಬೆಳಕು ಹಾಗೂ ನೆಮ್ಮದಿಯ ಜೀವನದ ಸಂಕೇತವಾಗಿದೆ ಎಂದರು.

ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಆರ್.ಎಂ. ಹೊನ್ನಾರಡ್ಡಿ ವಹಿಸಿದ್ದರು.  ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಂ, ಯಾದಗಿರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ ಮಹೇಂದ್ರಕರ್, ಹಿರಿಯ ವಕೀಲರಾದ ವೆಂಕಣ್ಣಗೌಡ ಹಾಲಬಾವಿ ಇದ್ದರು.

ಪರಿಸರದ ಬಗ್ಗೆ ವಿಶೇಷ ಉಪನ್ಯಾಸವನ್ನು ವಕೀಲರಾದ ಭಾಸ್ಕರರಾವ ಮುಡಬೂಳ, ಸಾಲೋಮನ್ ಆಲ್‌ಫ್ರೇಡ್ ನೀಡಿದರು.  ಎಂ.ಎನ್. ಪೂಜಾರಿ ನಿರೂಪಿಸಿದರು. ಭೀಮಣ್ಣಗೌಡ ಪ್ರಾರ್ಥನೆ ಹಾಡಿದರು.   ಎಸ್.ಎಂ.ಸಜ್ಜನ ಸ್ವಾಗತಿಸಿದರು. ಹಾಜಿಬಾಬ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.