ADVERTISEMENT

ಅಭಿವೃದ್ಧಿಗೆ ಶಿಕ್ಷಣ ಅವಶ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 9:25 IST
Last Updated 14 ನವೆಂಬರ್ 2012, 9:25 IST

ಕೆಂಭಾವಿ: ಸಮಾಜ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಅವಶ್ಯವಾಗಿದ್ದು ಶಿಕ್ಷಣ ಕಲಿತ ವ್ಯಕ್ತಿಯನ್ನು ಸಮಾಜ ಗುರುತಿಸುತ್ತದೆ ಹಾಗೂ ಗೌರವಿಸುತ್ತದೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಸಮೀಪದ ಮಾಳಹಳ್ಳಿ ಗ್ರಾಮದಲ್ಲಿ ಸೋಮವಾರ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ, ಮಹಾದ್ವಾರ ಉದ್ಘಾಟನೆ ಮತ್ತು ಕಳಸಾರೋಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕುಲ ಕುಲ ಕುಲ ಎಂದು ಹೊಡೆದಾಡದಿರಿ ಎಂದು ಹೇಳಿದ ಕನಕದಾಸರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣ, ಮಹಾಕವಿ ಕಾಳಿದಾಸ ಅವರಂತಹ ಮಹಾನ್ ಪುರುಷರು ಜನಿಸಿದ ಹಾಲು ಮತ ಸಮಾಜದವರಾದ ನಾವು, ಇನ್ನೊಬ್ಬರಿಗೆ ಮಾದರಿಯಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು.

ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲ ಸಮಾಜದವರೊಂದಿಗೆ ಸ್ನೇಹದಿಂದ ಬೆರೆತು ಜೀವನ ಸಾಗಿಸಿ, ಪ್ರೀತಿ ಗಳಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಜಾತ್ರೆ ಉತ್ಸವಗಳನ್ನು ಮಾಡಿದರೆ ಸಾಲದು. ಪ್ರತಿಯೊಬ್ಬರೂ ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದಾಗ ಮಾತ್ರ ಇಂತಹ ಸಮಾರಂಭ ಮಾಡಿದ್ದು ಸಾರ್ಥಕವಾಗುತ್ತದೆ ಎಂದರು.

ಮಾಳಹಳ್ಳಿ ಗ್ರಾಮದ ಅಭಿವೃದ್ದಿಗೆ ಒಂದು ಕೋಟಿ ನೀಡುವುದಾಗಿ ಘೋಷಣೆ ಮಾಡಿದ ಅವರು, ಐತಿಹಾಸಿಕವಾದ ಈ ಪ್ರದೇಶಕ್ಕೆ ರಸ್ತೆಯ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರು ಮನವಿ ಸಲ್ಲಿಸಿದಾಗ ವೇದಿಕೆಯ ಮೇಲಿದ್ದ ಜಿಲ್ಲಾಧಿಕಾರಿಗಳಿಗೆ ಮೂರು ದಿನದಲ್ಲಿ ಈ ಗ್ರಾಮಕ್ಕೆ ಬರುವ ರಸ್ತೆಯ ನೀಲ ನಕ್ಷೆ, ಅಂದಾಜು ವೆಚ್ಚವನ್ನು ಸಿದ್ಧಪಡಿಸುವಂತೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ಹಾಲುಮತ ಸಮಾಜದವರಿಗೆ ಇರುವ ವಿಶೇಷ ಕಲೆ ಎಂದರೆ ಡೊಳ್ಳು ಬಾರಿಸುವುದು. ಇಂದಿನ ಆಧುನಿಕ ಯುಗದಲ್ಲಿ ನಶಿಸಿ ಹೋಗುತ್ತಿರುವುದು ವಿಷಾದದ ಸಂಗತಿ. ಸಣ್ಣ ಕೈಗಾರಿಕಾ ಯೋಜನೆ ಅಡಿ ಕಾಗಿನೆಲೆ ಮತ್ತು ತಿಂಥಣಿಯಲ್ಲಿ ಡೊಳ್ಳು ತಯಾರಿಕಾ ಘಟಕ ಸ್ಥಾಪನೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಪ್ರತಿಯೊಂದು ಜಿಲ್ಲೆಗೂ ಇಂತಹ ಘಟಕಗಳನ್ನು ಸ್ಥಾಪಿಸಲಾಗವುದು ಎಂದು ತಿಳಿಸಿದರು.

ಮಾಜಿ ಸಂಸದ, ಬಿಎಸ್ಸಾರ್ ಕಾಂಗ್ರೆಸ್ ಕೋರ್ ಕಮೀಟಿ ಸದಸ್ಯ ಕೆ. ವಿರುಪಾಕ್ಷಪ್ಪ ಮಾತನಾಡಿ, ನಮ್ಮ ಜಾತಿಗೆ ಸಿಗುವ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಕೆಲಸ ನಡೆಯುತ್ತಿದೆ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದರು.

ತಿಂಥಣಿ ಕನಕ ಗುರು ಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ, ದ್ರಾವಿಡ ಸಂಸ್ಕೃತಿಯ ಈ ಹಾಲುಮತ ಸಮಾಜ ಹಾಳಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ದುಶ್ಚಟಗಳಿಂದ ಸಮಾಜದ ಹೆಸರು ಹಾಳಾಗುತ್ತಿದೆ. ದುಶ್ಚಟಗಳಿಂದ ದೂರವಿರವಿದ್ದು, ಪ್ರತಿಯೊಬ್ಬರೂ ಶಿಕ್ಷಣವನ್ನು ಕಲಿತು ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ಹೇಳಿದರು.

ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳಾದ ವಿ.ಶಂಕರ, ಬನ್ನಪ್ಪ ಗುಡಿಮನಿ, ಬಿ. ದೇವರಾಜ, ಭೀಮಣ್ಣ ಮಾಲಿಪಾಟೀಲ, ಹಣಮಂತ ವಗ್ಗ, ಡಾ. ಪಿಡ್ಡಪ್ಪ ವಾಗಣಗೇರಿ, ಅವರನ್ನು ಸನ್ಮಾನಿಸಲಾಯಿತು.

ಧಾರವಾಡ ರೇವಣಸಿದ್ಧೇಶ್ವರ ಮಹಾಮಠದ ಬಸವರಾಜ ದೇವರು ಸಾನ್ನಿಧ್ಯ ವಹಿಸಿದ್ದರು. ಸಿದ್ಧಪ್ಪ ಪೂಜಾರಿ ಯಾಳಗಿ, ಶ್ರೀಶೈಲ ಗುರುವಿನ ಕಾಡಮಗೇರಿ, ಜಯಲಕ್ಷ್ಮಿ, ರಾಜಕುಮಾರ ತೇಲ್ಕರ, ಬಸವಣ್ಣೆಪ್ಪ ಗೌನೆಳ್ಳಿ, ಅಮಾತೆಪ್ಪ ಕಂದಕೂರ, ಶರಣಪ್ಪ ಸಲದಾಪುರ, ಶಂಕ್ರಣ್ಣ ವಣಿಕ್ಯಾಳ, ನಿಂಗಣ್ಣ ಚಿಂಚೋಡಿ, ಸಿದ್ಧನಗೌಡ ಪೊಲೀಸ್ ಪಾಟೀಲ, ಬಸಲಿಂಗಮ್ಮ ಮೇಟಿ, ಮರಿಗೌಡ ಹುಲಕಲ್, ಮಲ್ಲಣ್ಣ ಹೆಗ್ಗೇರಿ, ಗಿರೆಪ್ಪಗೌಡ ಬಾಣತಿಹಾಳ, ನಿಂಗಣ್ಣ ಬಾದ್ಯಾಪೂರ, ಶಿವಮಹಾಂತ ಚಂದಾಪುರ,  ಮತ್ತಿತರರು  ಇದ್ದರು.
ಸಿದ್ಧಣ್ಣ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೀರಪ್ಪ ಅಮಲಿಹಾಳ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.