ADVERTISEMENT

ಅಸಮರ್ಪಕ ಮಾಹಿತಿ ಭವಿಷ್ಯಕ್ಕೆ ಅಡ್ಡಿ

ಜಿಲ್ಲಾಧಿಕಾರಿ ಜೆ.ಮಂಜುನಾಥ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 8:32 IST
Last Updated 12 ಜೂನ್ 2018, 8:32 IST
ಯಾದಗಿರಿಯ ಜಿಲ್ಲಾಡಳಿತ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ ನೇತೃತ್ವದಲ್ಲಿ ಸಭೆ ನಡೆಯಿತು
ಯಾದಗಿರಿಯ ಜಿಲ್ಲಾಡಳಿತ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಜೆ.ಮಂಜುನಾಥ ನೇತೃತ್ವದಲ್ಲಿ ಸಭೆ ನಡೆಯಿತು   

ಯಾದಗಿರಿ: ‘ವಿಧಾನಸಭಾ ಚುನಾವಣೆಯಲ್ಲಿ ಖರ್ಚು ಮಾಡಿದ ಸಂಪೂರ್ಣ ಮಾಹಿತಿಯನ್ನು ನಿಗದಿಪಡಿಸಿದ ದಿನಾಂಕದೊಳಗೆ ನೀಡದಿರುವ ಅಭ್ಯರ್ಥಿಗಳು ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹರಿರುವುದಿಲ್ಲ. ಆದ್ದರಿಂದ, ಅಭ್ಯರ್ಥಿಗಳು ಚುನಾವಣಾ ಖರ್ಚು, ವೆಚ್ಚ ಲೆಕ್ಕಪತ್ರಗಳನ್ನು ಸಮರ್ಪಕವಾಗಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಖರ್ಚು-ವೆಚ್ಚ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಅಭ್ಯರ್ಥಿಗಳು ಖರ್ಚು ಮಾಡಿದ ಸಂಪೂರ್ಣ ಮಾಹಿತಿಯನ್ನು ಚುನಾವಣೆಯ ಫಲಿತಾಂಶ ನಂತರದ ಒಂದು ತಿಂಗಳೊಳಗಾಗಿ ಚುನಾವಣಾ ವೆಚ್ಚ ವೀಕ್ಷಕರ ಸಮ್ಮುಖದಲ್ಲಿ ಪರಿಶೀಲಿಸಿ, ಚುನಾವಣಾ ಆಯೋಗಕ್ಕೆ ವರದಿ ನೀಡಬೇಕು. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಅಭ್ಯರ್ಥಿಗಳ ಖರ್ಚು-ವೆಚ್ಚದ ವಿವರವನ್ನು ತಕ್ಷಣ ಸಲ್ಲಿಸಬೇಕು’ ಎಂದು ಸೂಚಿಸಿದರು.

ADVERTISEMENT

ಯಾದಗಿರಿ ಮತ್ತು ಗುರುಮಠಕಲ್ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕ ಸುರೇಂದ್ರ ಮೋಹನ್ ಮಾತನಾಡಿ, ‘ವೆಚ್ಚ ವೀಕ್ಷಣಾ ಸಮಿತಿಯ ಅಧಿಕಾರಿಗಳು ಅಭ್ಯರ್ಥಿಗಳ ಖರ್ಚು ವೆಚ್ಚದ ಮಾಹಿತಿಯನ್ನು ನಿಗದಿಪಡಿಸಿದ ನಮೂನೆಯಲ್ಲಿ ನಿಖರವಾಗಿ ಭರ್ತಿ ಮಾಡಬೇಕು. ಚುನಾವಣೆಗಾಗಿ ಖರ್ಚು ಮಾಡಿದ ವಿವರದ ಜತೆಗೆ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಸಹ ಅಭ್ಯರ್ಥಿಗಳಿಂದ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಸುರಪುರ ಮತ್ತು ಶಹಾಪುರ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ವೀಕ್ಷಕ ಪಂಕಜ್‌ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಜಿಲ್ಲಾ ಚುನಾವಣಾ ಖರ್ಚು-ವೆಚ್ಚ ಸಮಿತಿ ನೋಡಲ್ ಅಧಿಕಾರಿ ಬನ್ನಪ್ಪ ಗುಡಿಮನಿ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಸಹಾಯಕ ವೆಚ್ಚ ವೀಕ್ಷಣಾಧಿಕಾರಿ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ, ಏಜೆಂಟರು ಇದ್ದರು.

ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾದ ಅಭ್ಯರ್ಥಿಗಳ ಖರ್ಚು ವೆಚ್ಚದ ಮಾಹಿತಿ ನಿಖರವಾಗಿರುವಂತೆ ಏಜೆಂಟರುಗಳು ಗಮನ ಹರಿಸಬೇಕು
- ಜೆ.ಮಂಜುನಾಥ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.