ADVERTISEMENT

ಆಡಳಿತ ಸೌಧಕ್ಕೆ ಕೂಡಿ ಬರದ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:50 IST
Last Updated 19 ಮಾರ್ಚ್ 2012, 6:50 IST
ಆಡಳಿತ ಸೌಧಕ್ಕೆ ಕೂಡಿ ಬರದ ಮುಹೂರ್ತ
ಆಡಳಿತ ಸೌಧಕ್ಕೆ ಕೂಡಿ ಬರದ ಮುಹೂರ್ತ   

ಯಾದಗಿರಿ: “ತಹಸೀಲ್ದಾರ ಆಫೀಸ್ ಒಂದ ಕಡೆ, ಎಸಿ ಆಫೀಸು ಇನ್ನೊಂದ ಕಡೆ. ಡಿಸಿ ಆಫೀಸು, ಜಿಲ್ಲಾ ಪಂಚಾಯಿತಿ ಹೆಚ್ಚು ಕಡಮಿ ಒಂದ ಕಡೆ ಅದಾವ ಬಿಡ್ರಿ. ಇನ್ನೂ ಸಾಕಷ್ಟ ಆಫೀಸ್ ಎಲ್ಲಿ ಅದಾವ ಅನ್ನೋದ ತಿಳಿದ್ಹಂಗ ಆಗೇತಿ. ಚಿತ್ತಾಪುರ ರೋಡನ್ಯಾಗ, ಎಪಿಎಂಸಿಯೊಳಗ ಭಾಳ ಕಚೇರಿ ಅದಾವ ಅಂತ ಹೇಳ್ತಾರ. ಊರಿಂದ ಬಂದ ಮ್ಯಾಲ ನಮಗ ಬೇಕಾದ ಕಚೇರಿ ಎಲ್ಲಿ ಐತಿ ಅಂತ ಹುಡಿಕ್ಯಾಡುದ್ರಾಗ ಮಧ್ಯಾಹ್ನ ಆಗಿ ಬಿಟ್ಟಿರತೈತಿ ನೋಡ್ರಿ.”

ಜಿಲ್ಲೆಯಾಗಿ ಎರಡೂವರೆ ವರ್ಷ ಪೂರೈಸುತ್ತ ಬಂದಿರುವ ಯಾದಗಿರಿಯಲ್ಲಿ ಜಿಲ್ಲಾ ಮಟ್ಟದ ಎಲ್ಲ ಕಚೇರಿಗಳೂ ಆರಂಭವಾಗಿವೆ. ಆದರೆ ದಿಕ್ಕಿಗೊಂದು ಕಚೇರಿಗಳಿರುವುದರಿಂದ ತೊಂದರೆ ಅನುಭವಿಸುತ್ತಿರುವ ಹಳ್ಳಿಗಳ ಜನರು ಆಡಿಕೊಳ್ಳುತ್ತಿರುವ ಮಾತಿದು.

ಜಿಲ್ಲಾ ಕೇಂದ್ರದಲ್ಲಿ ಇರಬೇಕಾದ ಪ್ರಮುಖ ಕಚೇರಿಗಳೆಲ್ಲವೂ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದೆಷ್ಟೋ ಜನರಿಗೆ ಕಚೇರಿಗಳು ಎಲ್ಲಿವೇ ಎಂಬುದೇ ತಿಳಿಯದಂತಾಗಿದೆ. ಹೀಗಾಗಿ ಪರಿಚಯ ಇರುವವರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಯೋಜನಾ ಕೋಶ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಹೆಚ್ಚುವರಿ ಜಿಲ್ಲಾಧಿಕಾರಿಗಳ ಕಚೇರಿ, ಚುನಾವಣಾ ವಿಭಾಗಗಳೆಲ್ಲವೂ ಹೆಚ್ಚು ಕಡಿಮೆ ಒಂದೇ ಆವರಣದಲ್ಲಿವೆ. ಇದೇ ರಸ್ತೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಉಪ ನೋಂದಣಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗಳಿವೆ. ಆದರೆ ಮಹತ್ವದ ಕೃಷಿ ಇಲಾಖೆ, ಕೈಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಸಹಕಾರ ಇಲಾಖೆ, ಮೀನುಗಾರಿಕೆ ಇಲಾಖೆಗಳು ಮಾತ್ರ ದೂರದ ಎಪಿಎಂಸಿ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಮಾಜ ಕಲ್ಯಾಣ, ಗ್ರಂಥಾಲಯ, ಬಿಸಿಎಂ, ಅಂಗವಿಕಲರ ಕಲ್ಯಾಣ, ಗಣಿ ಮತ್ತು ಭೂ ವಿಜ್ಞಾನ, ದೇವರಾಜ ಅರಸು ನಿಗಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜವಳಿ ಇಲಾಖೆಗಳು ನಗರಸಭೆಯ ಕಿರಿದಾದ ವಾಣಿಜ್ಯ ಮಳಿಗೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಗೆ ಬಹುತೇಕ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ಕೆಲಸ ಮಾಡುತ್ತಿವೆ.

ಇದರಿಂದಾಗಿ ದೂರದ ಹಳ್ಳಿಗಳಿಂದ ಬರುವ ಜನರಿಗಂತೂ ಕಚೇರಿಗಳನ್ನು ಹುಡುಕುವುದರಲ್ಲಿ ಸಾಕಾಗಿ ಹೋಗುತ್ತಿದೆ. ಇದಕ್ಕಾಗಿಯೇ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಸಿಗುವಂತೆ ಮಾಡಲು ಜಿಲ್ಲಾ ಆಡಳಿತ ಸೌಧ ನಿರ್ಮಾಣ ಆಗಬೇಕೆಂಬ ಒತ್ತಾಯಕ್ಕೆ ಇದೀಗ ಸ್ಪಂದನೆ ಸಿಕ್ಕಿದ್ದು, ಸೌಧ ನಿರ್ಮಾಣಕ್ಕೆ ಮುಹೂರ್ತ ಮಾತ್ರ ಕೂಡಿ ಬರುತ್ತಿಲ್ಲ.

ಬಾಡಿಗೆ ಕಟ್ಟಡದಲ್ಲಿ: ಪ್ರಮುಖವಾದ ಹಲವಾರು ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಗರಸಭೆಯ ಮಳಿಗೆಗಳೂ ಬಾಡಿಗೆಗೆ ಪಡೆಯಲಾಗಿದೆ. ಅಲ್ಲದೇ ಜಿಲ್ಲಾ ಪಂಚಾಯಿತಿ ಸಭಾಂಗಣ, ಅಧ್ಯಕ್ಷರು, ಉಪಾಧ್ಯಕ್ಷರ ಕಚೇರಿಗಳಿರುವ ಗೋಟ್ಲಾ ಬಿಲ್ಡಿಂಗ್ ಅನ್ನು ಬಾಡಿಗೆಗೆ ಪಡೆಯಲಾಗಿದೆ. ಅಬಕಾರಿ ಇಲಾಖೆ ಉಪ ಆಯುಕ್ತರ ಕಚೇರಿಯೂ ಬಾಡಿಗೆ ಮನೆಯೊಂದರಲ್ಲಿದೆ.

ಒಂದು ಮೂಲಗಳ ಪ್ರಕಾರ ಗೋಟ್ಲಾ ಬಿಲ್ಡಿಂಗ್‌ಗೆ ಪ್ರತಿ ತಿಂಗಳು ರೂ. 80 ಸಾವಿರ ಬಾಡಿಗೆ ಕಟ್ಟಲಾಗುತ್ತದೆ ಎಂಬ ಮಾಹಿತಿ ಇದೆ. ಇದೇ ರೀತಿ ಹಲವಾರು ಕಟ್ಟಡಗಳನ್ನು ಬಾಡಿಗೆಗೆ ಪಡೆಯಲಾಗಿದ್ದು, ಇದರಿಂದ ಸರ್ಕಾರಕ್ಕೂ ಸಾಕಷ್ಟು ಹೊರೆ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಅನುದಾನ ಲಭ್ಯ: ಜಿಲ್ಲಾ ಆಡಳಿತ ಸೌಧ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಲಭ್ಯವಿದೆ. ರೂ. 50 ಕೋಟಿ ವಿಶೇಷ ಅನುದಾನದಲ್ಲಿ ರೂ.25 ಕೋಟಿಯನ್ನು ಆಡಳಿತ ಸೌಧದ ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಜೊತೆಗೆ ಆಡಳಿತ ಸೌಧಕ್ಕೆ ಅಗತ್ಯವಿರುವ 56 ಎಕರೆ ಭೂಮಿಯನ್ನು ಗುರುತಿಸಲಾಗಿದೆ.

ರೂ.25 ಕೋಟಿ ಬಂದು ಹಲವಾರು ತಿಂಗಳುಗಳೇ ಕಳೆದರೂ, ಜಮೀನು ಖರೀದಿಗೆ ಅಗತ್ಯವಿರುವ ರೂ.6.50 ಕೋಟಿ ಅನುದಾನ ಪಡೆಯಲು ಹರಸಾಹಸ ಮಾಡಬೇಕಾಗಿಯಿತು. ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಜನಪ್ರತಿನಿಧಿಗಳ ಪ್ರಯತ್ನದಿಂದಾಗಿ ಈಗಾಗಲೇ ಜಮೀನು ಖರೀದಿಸಲು ಬೇಕಾದ ರೂ.6.50 ಅನುದಾನವನ್ನೂ ಸರ್ಕಾರ ಮಂಜೂರು ಮಾಡಿದೆ.

ಜಮೀನು ಲಭ್ಯವಿದೆ. ಕಟ್ಟಡಕ್ಕಾಗಿ ಹಣವೂ ಬಂದಿದೆ. ಆದರೆ ಅಡಿಗಲ್ಲು ಸಮಾರಂಭಕ್ಕೆ ಮಾತ್ರ ಮುಹೂರ್ತ ಕೂಡಿ ಬರುತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಭಾನುವಾರ (ಮಾ.18) ಆಡಳಿತ ಸೌಧಕ್ಕೆ ಸಚಿವರಾದ ಸುರೇಶಕುಮಾರ, ಸಿ.ಎಂ. ಉದಾಸಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದರು.

ಆದರೆ ರಾಜಕೀಯ ಗೊಂದಲಗಳಿಂದಾಗಿ ನಿಗದಿಯಾಗಿದ್ದ ಕಾರ್ಯಕ್ರಮ, ಕೊನೆಯ ಗಳಿಗೆಯಲ್ಲಿ ರದ್ದಾಗಿದೆ. ಪಕ್ಷದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಚಿವದ್ವಯರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಹೀಗಾಗಿ ಆಡಳಿತ ಸೌಧದ ಕಾಮಗಾರಿಗೆ ಚಾಲನೆ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

“ನಾವ ನೋಡ್ರಿ ಹಳ್ಳಿ ಮಂದಿ. ಎಲ್ಲೆಂತ ಆಫೀಸ್ ಹುಡುಕಾಕ ಹೋಗೋಣ. ಸಾಲಿ ಕಲ್ತಾವ್ರಿಗೆ ಆಫೀಸ್ ಎಲ್ಲಿ ಅದಾವಂತ ಗೊತ್ತಿಲ್ಲ. ಕೃಷಿ ಇಲಾಖೆ ಬೇಕಂದ್ರ, ಎಪಿಎಂಸಿಗೆ ಹೋಗಬೇಕಂತ. ಇನ್ನ ಆರೋಗ್ಯ ಇಲಾಖೆಗೆ ಹೋಗೋಣ ಅಂದ್ರ ಜ್ಯೂನಿಯರ್ ಕಾಲೇಜ್ ಬಲ್ಲೆ ಹೋಗಬೇಕು.
 
ಇತ್ತ ತಹಸೀಲ್ದಾರ ಆಫೀಸಂತೂ ಸ್ಟೇಶನ್ ಕಡೆ ಐತಿ. ಎಲ್ಲಾ ಆಫೀಸೂ ಒಂದೊಂದು ದಿಕ್ಕಿನ್ಯಾಗ ಅದಾವ್ರಿ. ಹೆಂಗ ಅಂತ ಹುಡಕೋದು. ಜಿಲ್ಲಾ ಆಗಿ ಎರಡ ವರ್ಷ ಆತು. ಇನ್ನು ಇಲ್ಲಿ ಕಚೇರಿನ ಆಗವಾಲ್ಲು ನೋಡ್ರಿ” ಎಂದು ಕೋನಳ್ಳಿಯ ರೈತ ಶರಣಯ್ಯಸ್ವಾಮಿ ತಮ್ಮ ಕಷ್ಟವನ್ನು ಹಂಚಿಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.